ರೋಣ ತಾಲೂಕಿನ ಸವಡಿ ಗ್ರಾಮದ 42 ವರ್ಷದ ತೃತೀಯ ಲಿಂಗಿ ರಮೇಶ ವಿರೂಪಾಕ್ಷಪ್ಪ ಕಂಬಳಿ ನರೇಗಾ ಯೋಜನೆಯಡಿ ಉದ್ಯೋಗ ಪಡೆದು ಮುಖ್ಯವಾಹಿನಿಯಲ್ಲಿ ತಮ್ಮನ್ನು ಗುರುತಿಸಿಕೊಂಡು ಮಾದರಿಯಾಗಿದ್ದಾರೆ. ಐದು ವರ್ಷಗಳ ಹಿಂದೆ ಮೊದಲ ಬಾರಿಗೆ ನರೇಗಾ ಯೋಜನೆ ಅಡಿಯಲ್ಲಿ ಮಣ್ಣು ಅಗೆಯಲು ಗುದ್ದಲಿ ಹಿಡಿದೆ, ಅದು ಕೇವಲ ಒಂದು ಕೆಲಸವಾಗಿರಲಿಲ್ಲ. ಬದಲಿಗೆ ಅದು ಸ್ವಾಭಿಮಾನದ ಸಂಕೇತವಾಗಿತ್ತು ಎನ್ನುತ್ತಾರೆ ರಮೇಶ. ಗ್ರಾಮದ ಜನ ರಮೇಶನನ್ನು ಸರಿಸಮಾನವಾಗಿ ನಡೆಸಿಕೊಳ್ಳುತ್ತಾರೆ. ಅವನು ನಮ್ಮ ಊರಿನ ಮಗ, ನಮ್ಮಂತೆಯೇ ದುಡಿದು ಬದುಕುತ್ತಿದ್ದಾನೆ ಎಂಬ ಗ್ರಾಮಸ್ಥರ ಪ್ರೀತಿಯೇ ರಮೇಶನಿಗೆ ಜಗತ್ತನ್ನು ಗೆಲ್ಲುವ ಶಕ್ತಿ ನೀಡಿದೆ.