ಈ ಹಿರಿಯ ನಾಗರಿಕರಲ್ಲಿ ಕೆಲವರು ಸುಮಾರು 10 ವಷರ್ಗಳಿಂದ ನರೇಗಾ ಯೋಜನೆಯಲ್ಲಿ ಭಾಗವಹಿಸುತ್ತಿದ್ದು, ಬೇಸಿಗೆಯಲ್ಲಿ ಇವರಿಗೆ ನರೇಗಾ ಯೋಜನೆ ದುಡಿಮೆ ಮೂಲವಾಗಿದೆ. ಅಲ್ಲದೆ, ನರೇಗಾ ಯೋಜನೆಯಲ್ಲಿರುವ ಹಿರಿಯ ನಾಗರಿಕರಿಗೆ ‘ಅರ್ಧ ಕೆಲಸ ಪೂರ್ಣ ಕೂಲಿ’ ನಿಯಮ ಅನ್ವಯಿಸುವುದರಿಂದ ಕೂಲಿಕಾರರಾದ ಒಂಟೆಲಪ್ಪ ತಳವಾರ (77), ಯಲ್ಲಪ್ಪ ಕವಲೂರು (68), ಮಹದೇವಪ್ಪ ತಳವಾರ (70), ನಿಂಗವ್ವ ತಳವಾರ (68), ಶಾರದಾ ಕವಲೂರು (64), ಕಮಲವ್ವ ಡೊಳ್ಳಿನ (63), ದೇವಕ್ಕ ತಳವಾರ (62), ಲಕ್ಷ್ಮವ್ವ ಪೂಜಾರ (62), ಹಾಲವ್ವ ಬೇವಿನಮರದ (65), ಸಂಗವ್ವ ಕಾತರಕಿ (64), ರೇಣಮ್ಮ ಪೂಜಾರ (64), ಯಮುನಾಬಿ ನದಾಫ್ (65) ಅವರು ಸದುಪಯೋಗಪಡಿಸಿಕೊಂಡು ಯೋಜನೆಯ ಮಹತ್ವವನ್ನು ಇಳಿವಯಸ್ಸಿನಲ್ಲೂ ಪೂರ್ಣ ಕೆಲಸದೊಂದಿಗೆ ದುಡಿಮೆ ಮೂಲಕ ಸಾರಿದ್ದಾರೆ. ಮೂರು ಪ್ರತ್ಯೇಕ ಜಾಗಗಳಲ್ಲಿ ಕೃಷಿ ಇಲಾಖೆ ಹಾಗೂ ಗ್ರಾಪಂ ಮೂಲಕ ಪ್ರಗತಿಯಲ್ಲಿರುವ ಕಾಮಗಾರಿಗಳಲ್ಲಿ ಹಿರಿಯ ನಾಗರಿಕರು ಭಾಗವಹಿಸಿದ್ದಾರೆ. ಹಿರಿಯ ನಾಗರಿಕರಲ್ಲಿ ಬಹುತೇಕರು ಕೂಲಿಕಾರ್ಮಿಕರಾಗಿದ್ದು ಕೆಲವರಿಗೆ ಅಲ್ಪ ಸ್ವಲ್ಪ ಕೃಷಿ ಜಮೀನಿದ್ದರೆ, ಕೆಲವರು ಕೃಷಿಭೂಮಿ ಇಲ್ಲದವರು. ಹೀಗಾಗಿ ಜಮೀನಿಲ್ಲದವರು ನರೇಗಾ ಕೆಲಸ ಇಲ್ಲದಿದ್ದಾಗ ಬೇರೆಯವರ ಜಮೀನು ಇತರ ಕಡೆಗೆ ಕಾರ್ಮಿಕರಾಗಿ ದುಡಿಯುತ್ತಾರೆ. ಬೇಸಿಗೆಯಲ್ಲಿ ಕೆಲಸದ ಕೊರತೆ ಇರುವುದರಿಂದ ಕೃಷಿ ಜಮೀನಿರುವ ರೈತರು ಹೊಟ್ಟೆಪಾಡಿಗೆ ಬೇರೆ ದುಡಿಮೆಯನ್ನೇ ಅವಲಂಬಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ನರೇಗಾ ಕೂಲಿ ಕೆಲಸವೇ ನಮಗೆ ವರದಾನ. ನರೇಗಾ ಯೋಜನೆಯಿಂದ 370 ರೂ. ದುಡಿಮೆ ಸಿಗುತ್ತಿರುವುದು ಹೊಟ್ಟೆಪಾಡಿಗೆ ಆಧಾರವಾಗಿದೆ ಎನ್ನುತ್ತಾರೆ ಹಿರಿಯ ಕೂಲಿಕಾರ ಒಂಟೆಲಪ್ಪ ತಳವಾರ.