no rain: ಕುಸಿಯುತ್ತಿದೆ ಅಂತರ್ಜಲಮಟ್ಟ!

ಮುಂಡರಗಿ ತಾಲೂಕಿನ ಗಂಗಾಪೂರ ಭಾಗದಲ್ಲಿ ಮಳೆ ಕೊರತೆಯಿಂದ ಗೋವಿನಜೋಳ ಬೆಳೆ ಕುಂಠಿತವಾಗಿ ಒಣಗುತ್ತಿರುವ ಹಿನ್ನೆಲೆಯಲ್ಲಿ ರೈತರು ಬೆಳೆಯನ್ನು ಹರಗಿದರು.
ಮುಂಡರಗಿ ತಾಲೂಕಿನ ಗಂಗಾಪೂರ ಭಾಗದಲ್ಲಿ ಮಳೆ ಕೊರತೆಯಿಂದ ಗೋವಿನಜೋಳ ಬೆಳೆ ಕುಂಠಿತವಾಗಿ ಒಣಗುತ್ತಿರುವ ಹಿನ್ನೆಲೆಯಲ್ಲಿ ರೈತರು ಬೆಳೆಯನ್ನು ಹರಗಿದರು.
Published on
ಸಂತೋಷ ಮುರಡಿ ಮುಂಡರಗಿ
ಪ್ರಸ್ತುತ ಮುಂಗಾರಿನಲ್ಲಿ ಮಳೆ ಕೊರತೆಯಿಂದಾಗಿ ಈಗಾಗಲೇ ಬಿತ್ತನೆ ಮಾಡಿದ ಬೆಳೆಗಳೆಲ್ಲ ಒಣಗಿ ಹಾಳಾಗುತ್ತಿವೆ. ಅದನ್ನು ನೋಡಲಾಗದೆ ರೈತರು ಬೆಳೆಯನ್ನು ಹರಗಿ ನಾಶ ಪಡಿಸಲು ಮುಂದಾಗುತ್ತಿದ್ದಾರೆ. ತಾಲೂಕಿನಲ್ಲಿ ಬರದ ಛಾಯೆ ಆವರಿಸುತ್ತಿದೆ. ಇನ್ನೊಂದೆಡೆ ದಿನದಿಂದ ದಿನಕ್ಕೆ ಅಂರ್ಜಲಮಟ್ಟ ಕುಸಿಯುತ್ತಿದ್ದು, ಇದು ಅನ್ನದಾತರನ್ನು ಇನ್ನಷ್ಟು ಚಿಂತೆಗಿಡು ಮಾಡಿದೆ.
ತಾಲೂಕಲ್ಲಿ ಒಂದೆಡೆ ಮಳೆ ಕೈಕೊಟ್ಟಿದ್ದರೆ, ಕೆಲವೆಡೆ ನೀರಾವರಿ ಬೋರ್‌ವೆಲ್ ಅಂತರ್ಜಲ ಮಟ್ಟವು ಕುಸಿತವಾಗುತ್ತಿವೆ. ಈಗಾಗಲೇ ಕೆಲವೆಡೆ ಬೋರ್‌ವೆಲ್ ಬಂದಾಗಿವೆ. ಕೆಲವೆಡೆ ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ನೀರಾವರಿ ಜಮೀನುಗಳ ಬೆಳೆಗೂ ತೊಂದರೆಯಾಗುವ ಲಕ್ಷಣ ಎದುರಾಗುತ್ತಿದೆ. ಹಾಗೆಯೇ ಮಳೆ ಕೊರತೆ ಹಿನ್ನೆಲೆ ದನಕರುಗಳಿಗೆ ಮೇವಿನ ಕೊರತೆಯಾಗುವ ಆತಂಕ ಸೃಷ್ಟಿಯಾಗಿದೆ. ಹೀಗಾಗಿ ಸರ್ಕಾರ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ ರೈತರ ನೆರವಿಗೆ ಬರಬೇಕು ಎನ್ನುವ ಕೂಗು ಕೇಳಿಬರುತ್ತಿದೆ.
ತಾಲೂಕಿನಲ್ಲಿ ಮುಂಗಾರು ಆರಂಭದಲ್ಲಿ ತಕ್ಕಮಟ್ಟಿಗೆ ಭೂಮಿ ಹಸಿಯಾಗಿದ್ದರಿಂದ ರೈತರು ಭೂಮಿ ಹದಗೊಳಿಸಿ ಹಲವು ಕಡೆಗಳಲ್ಲಿ ಬಿತ್ತನೆ ಕಾರ್ಯ ಮಾಡಿದರು. ಬಿತ್ತಿದ ಬೆಳೆ ಭೂಮಿಯಿಂದ ಚಿಗುರಿದ ಮೇಲೆ ಮತ್ತೆ ಮಳೆ ದರ್ಶನವೇ ಆಗಲಿಲ್ಲ. ಈಗೊಮ್ಮೆ ಆಗೊಮ್ಮೆ ಜಿಟಿಜಿಟಿ ಮಳೆ ಬಿಟ್ಟರೆ ಭೂಮಿ ಹಸಿಯಾಗುವಷ್ಟು ಮಳೆ ಸುರಿಯಲೇ ಇಲ್ಲ. ಸುಮಾರು 1 ತಿಂಗಳಿಂದ ಸಾಧಾರಣ ಮಳೆಯು ಸುರಿದಿಲ್ಲ. ಹೀಗಾಗಿ ಬೆಳೆಗಳೆಲ್ಲ ಒಣಗಿ ಹಾಳಾಗುತ್ತಿವೆ.
ಬಿಸಿಲ ಧಗೆ: ಇದು ಮಳೆಗಾಲವೋ ಅಥವಾ ಬೇಸಿಗೆ ಕಾಲವೋ ಎಂಬುವುದು ತಿಳಿಯದಾಗಿದೆ. ಅಷ್ಟೊಂದು ಬಿಸಿಲಿನ ಛಾಯೆ ಬೀಳುತ್ತಿದೆ. ರೈತರು ಪ್ರತಿ ಎಕರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತಿದೆ ಬೆಳೆಗೆ ತೇವಾಂಶ ಕೊರತೆಯಾಗಿ ಬೆಳೆ ಭೂಮಿಯಲ್ಲಿ ಕಮರುತ್ತಿದೆ. ಇದನ್ನು ಕಣ್ಣಾರೆ ನೋಡಲಾಗದ ಅನೇಕ ರೈತರು ಬೆಳೆ ಹರಗಿ ನಾಶ ಪಡಿಸುತ್ತಿದ್ದಾರೆ. ಇನ್ನೂ ಕೆಲವೆಡೆ ಮಳೆ ಬರುವ ನಿರೀಕ್ಷೆಯಲ್ಲಿ ದಿನಗಳೆಯುತ್ತಿದ್ದಾರೆ. ಒಂದು ವೇಳೆ ಈ ತಕ್ಷಣದಲ್ಲಿಯೇ ಮಳೆ ಸುರಿದರೂ ಬೆಳೆ ಕುಂಠಿತವಾಗಿ ನಷ್ಟವನ್ನು ಅನುಭವಿಸುವ ದುಸ್ಥಿತಿಯ ವಾತಾವರಣವಿದೆ.
ಮಳೆ ಕೊರತೆ: ತಾಲೂಕಿನಲ್ಲಿ ಹೆಸರು, ಸೂರ್ಯಕಾಂತಿ, ಶೇಂಗಾ, ಗೋವಿನಜೋಳ ಇತರ ಬೆಳೆ ಸೇರಿ ಒಟ್ಟು 49,565 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಈ ಪೈಕಿ ಈವರೆಗೂ 34,731 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಇದರಲ್ಲಿ 8,128 ಹೆಕ್ಟೇರ್ ನೀರಾವರಿ ಪ್ರದೇಶವಿದ್ದು, 26,603 ಹೆಕ್ಟೇರ್ ಮಳೆಯಾಶ್ರಿತವಿದೆ. ಭೂಮಿ ಹಸಿಯಾಗುವಷ್ಟು ಮಳೆ ಸುರಿಯದಿದ್ದರೂ ಕೃಷಿ ಇಲಾಖೆ ಮಾಹಿತಿ ಪ್ರಕಾರ ತಾಲೂಕಿನಲ್ಲಿ ಜೂನ್ 1ರಿಂದ ಜುಲೈ 14ರವರೆಗೆ 88ಮೀ.ಮೀ. ಮಳೆ ಆಗಬೇಕಿತ್ತು. 59 ಮೀ.ಮೀ.ಮಳೆ ಸುರಿದಿದೆ. ಶೇ.33ರಷ್ಟು ಮಳೆ ಕೊರತೆಯಾಗಿದೆ.
"

ರೈತರು ಈಗಾಗಲೇ ಸಾವಿರಾರು ಖರ್ಚು ಮಾಡಿ ಬಿತ್ತನೆ ಮಾಡಿದ ಬೆಳೆಗೆ ತೇವಾಂಶ ಕೊರತೆಯಾಗಿ ಬೆಳೆಗಳೆಲ್ಲ ಹಾಳಾಗುತ್ತಿವೆ. ಬೋರ್‌ವೆಲ್‌ಗಳ ಅಂತರ್ಜಲ ಮಟ್ಟ ಕುಸಿಯುತ್ತಿವೆ. ಮಳೆಯಾಗುವಂತ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಸರ್ಕಾರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಪ್ರತಿ ಎಕರೆ 25 ಸಾವಿರ ಪರಿಹಾರ ನೀಡಬೇಕು.

— ಶಿವಾನಂದ ಇಟಗಿ, ರೈತ ಸಂಘ ರಾಜ್ಯ ಕಾರ್ಯದರ್ಶಿ ಮುಂಡರಗಿ

"

ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆಗಳನ್ನು ಪರಿಶೀಲಿಸಲಾಗಿದ್ದು, ಬೆಳೆ ಒಣಗುತ್ತಿವೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಸರ್ಕಾರ ಮುಂದೆ ಏನಾದರೂ ಪರಿಹಾರ ಘೋಷಣೆ ಮಾಡಿದರೆ ಅದಕ್ಕೆ ರೈತರು ಯಾವ ಬೆಳೆ ಬಿತ್ತನೆ ಮಾಡಿದ್ದಾರೆ ಎನ್ನುವುದಕ್ಕೆ ಬೆಳೆ ಸಮೀಕ್ಷೆಯು ಸಹಕಾರಿಯಾಗುತ್ತದೆ. ಆದ್ದರಿಂದ ಒಂದು ವೇಳೆ ರೈತರು ಬೆಳೆ ಹರಗಿದರೆ ಅದಕ್ಕೂ ಮುಂಚೆ ಬೆಳೆ ಸಮೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ಕೃಷಿ ವಿಜ್ಞಾನಿಗಳು ಜಮೀನುಗಳಿಗೆ ಭೇಟಿ ನೀಡಿ ಬೆಳೆ ಇಳುವರಿ ಕುಂಠಿತವಾಗಿದ್ದರೆ ಅದರ ಕುರಿತು ಸಹ ರೈತರಿಗೆ ಮಾಹಿತಿ ನೀಡಲಿದ್ದಾರೆ.

— ಪ್ರಾಣೇಶ, ಸಹಾಯಕ ಕೃಷಿ ನಿರ್ದೇಶಕ ಮುಂಡರಗಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net