farmers are angry ರೈತರು ಸಿಡಿದೆದ್ದರೆ ಯಾವ ಸರ್ಕಾರವೂ ಉಳಿಯಲ್ಲ

ನರಗುಂದದಲ್ಲಿ ಆಯೋಜಿಸಿದ್ದ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿದರು. ಭಕ್ತರಹಳ್ಳಿ ಭೈರೇಗೌಡ, ಸಂಜೀವ ಹುಡೇದ, ವೀರಭದ್ರಯ್ಯ ಸ್ವಾಮಿ, ಬಿ.ವಿ. ಗೌಡ, ಶಂಕರಗೌಡ ಬೇವಿನಗೌಡ್ರ, ಇತರರಿದ್ದರು.
ನರಗುಂದದಲ್ಲಿ ಆಯೋಜಿಸಿದ್ದ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿದರು. ಭಕ್ತರಹಳ್ಳಿ ಭೈರೇಗೌಡ, ಸಂಜೀವ ಹುಡೇದ, ವೀರಭದ್ರಯ್ಯ ಸ್ವಾಮಿ, ಬಿ.ವಿ. ಗೌಡ, ಶಂಕರಗೌಡ ಬೇವಿನಗೌಡ್ರ, ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘ, ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿಕೆ
  • ನರಗುಂದದಲ್ಲಿ ವೀರಪ್ಪ ಕಡ್ಲಿಕೊಪ್ಪ ವೀರಗಲ್ಲಿಗೆ ಶ್ರದ್ಧಾಂಜಲಿ
ನರಗುಂದ: ರೈತ ಬಂಡಾಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಮಾಯಕ ರೈತರ ಮೇಲೆ ಪೊಲೀಸರು ಗುಂಡು ಹಾರಿಸಿದರು. ಸರ್ಕಾರ ಮಾಡಿದ ತಪ್ಪಿಗೆ ಅಂದಿನ ಮುಖ್ಯಮಂತ್ರಿ ಆರ್.ಗುಂಡೂರಾವ್ ಪದವಿ ಕಳೆದುಕೊಂಡರು. ರೈತರು ಸಿಡಿದೆದ್ದರೆ ಯಾವ ಸರ್ಕಾರಗಳು ಅಧಿಕಾರದಲ್ಲಿ ಉಳಿಯಲು ಸಾಧ್ಯವಿಲ್ಲ ಎನ್ನುವುದಕ್ಕೆ 1980ರಲ್ಲಿ ಲ್ಲಿ ನಡೆದ ರೈತ ಬಂಡಾಯವೇ ಸಾಕ್ಷಿಯಾಗಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿರುವ ದಿ.ವೀರಪ್ಪ ಕಡ್ಲಿಕೊಪ್ಪ ವೀರಗಲ್ಲಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು. 1970ರಲ್ಲಿ ಮಲಪ್ರಭಾ ನದಿಗೆ ನವಿಲು ತೀರ್ಥ ಜಲಾಶಯ ನಿರ್ಮಿಸಿ ಆ ಮೂಲಕ ರೈತರ ಜಮೀನಿಗೆ ನೀರು ಬಿಡಲು ನಿರ್ಧರಿಸಲಾಗಿತ್ತು. ಆದರೆ, ರೈತರ ಕೃಷಿ ಚಟುವಟಿಕೆಗೆ ಮೀಸಲಿಡಬೇಕಾದ ನೀರನ್ನು ಕೈಗಾರಿಕೆಗಳಿಗೆ ಸರ್ಕಾರದಿಂದಲೇ ಹಣಕ್ಕಾಗಿ ಮಾರಾಟ ಮಾಡುತ್ತಿರುವುದು ಖೇದಕರ ಸಂಗತಿಯಾಗಿದೆ. ಪರಿಣಾಮ ಉತ್ತರ ಕರ್ನಾಟಕ ಭಾಗದ ರೈತರ ಬೆಳೆಗಳಿಗೆ ಸಕಾಲಕ್ಕೆ ಸಮರ್ಪಕ ನೀರು ಪೂರೈಕೆಯಾಗದ್ದರಿಂದ ನಿರಂತರ ಪರದಾಡುವಂತಾಗಿದೆ.
ನ್ಯಾಯಾಧಿಕರಣದಿಂದ ಮಹದಾಯಿ, ಕಳಸಾ-ಬಂಡೂರಿ ನೀರು ಹಂಚಿಕೆಗೊಳಿಸಿ 8 ವರ್ಷವಾದರೂ ಇದುವರೆಗೆ ಹನಿ ನೀರು ಮಲಪ್ರಭೆಗೆ ಹರಿದಿಲ್ಲ. ರಾಜ್ಯದ ಹಿತಾಸಕ್ತಿ ಕಾಯಬೇಕಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೇಂದ್ರ ಅರಣ್ಯ ಪರಿಸರ ಇಲಾಖೆಯಿಂದ ಯೋಜನೆ ಅನುಷ್ಠಾನಕ್ಕೆ ಅನುಮತಿ ಕೊಡಿಸಲು ಯಾವುದೇ ಪ್ರಯತ್ನಕ್ಕೆ ಮುಂದಾಗಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ವಿರೋಧ ಪಕ್ಷದಲ್ಲಿದ್ದಾಗ ಮಹದಾಯಿ, ಮೇಕೆದಾಟು ಅನುಷ್ಠಾನಕ್ಕೆ ಪಾದಯಾತ್ರೆ ಮಾಡಿದರು. ಆದರೆ, ಅವರೂ ಕೂಡ ಮಹತ್ವದ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಮುಂದಾಗುತ್ತಿಲ್ಲ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಂಬಲಬೆಲೆ ನೀಡಬೇಕೆಂದು 26 ವರ್ಷದ ಹಿಂದೆ ಸ್ವಾಮಿನಾಥನ್ ಆಯೋಗ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ. ಆದರೆ, ನಮ್ಮನ್ನಾಳುವ ಸರ್ಕಾರಗಳು ಮಹತ್ವದ ವರದಿ ಜಾರಿಗೊಳಿಸಲು ಇಚ್ಛಾಶಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದರು.
1961ರಲ್ಲಿ ಭೂ ಸುಧಾರಣೆ ಕಾಯ್ದೆ ಜಾರಿಯಾಯಿತು. ಅದನ್ನು ಕೂಡ ಜಾರಿ ಮಾಡದೇ ರೈತರನ್ನು ರಾಜಕೀಯ ಶಕ್ತಿಗಳು ಒಕ್ಕಲೆಬ್ಬಿಸುತ್ತಿವೆ. ರಾಜ್ಯ ಸರ್ಕಾರ ಕಾರ್ಪೊರೇಟ್ ಕಂಪನಿಗಳಿಗೆ ರೈತರ ಫಲವತ್ತಾದ ಜಮೀನು ನೀಡಲು ಮುಂದಾಗಿರುವುದನ್ನು ರೈತರು ಸಹಿಸುವುದಿಲ್ಲ. ರಾಹುಲ್ ಗಾಂಧಿ ರೈತರ ಸಮಸ್ಯೆಗಳ ಕುರಿತು ಚಿಂತನೆ ಮಾಡುತ್ತಿಲ್ಲ ಎಂದರು.
ಭಕ್ತರಹಳ್ಳಿ ಭೈರೇಗೌಡ, ಸಂಜೀವ ಹುಡೇದ, ವೀರಭದ್ರಯ್ಯ ಸ್ವಾಮಿ, ಬಿ.ವಿ. ಗೌಡ, ಶಂಕರಗೌಡ ಬೇವಿನಗೌಡ್ರ, ಕಲ್ಮೇಶ ಲಿಗಾಡಿ, ಟಿ.ಡಿ. ಬಸವರಾಜು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net