ಮುಂಡರಗಿ: (Lok Adalat) ಹಿರಿಯ ನಾಗರಿಕರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಕಾನೂನು ಸೇವಾ ಸಮಿತಿ ವತಿಯಿಂದ ಒದಗಿಸಲಾಗುವ ಉಚಿತ ಕಾನೂನು ನೆರವುಗಳನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ದಿವಾಣಿ ನ್ಯಾಯಾಧೀಶೆ ಜ್ಯೋತಿ ಕಾಗಿನಕರ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಮುಂಡರಗಿ, ಪೊಲೀಸ್ ಇಲಾಖೆ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೋಷಕರ ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007 ಕುರಿತು ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ (Lok Adalat) ಅನ್ನು ನ್ಯಾಯಾಲಯದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಸದರಿ ನ್ಯಾಯಾಲಯದಲ್ಲಿ ಬಾಕಿ ಇರುವಂತಹ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ಈ ಮೂಲಕ ತ್ವರಿತವಾಗಿ ನ್ಯಾಯದಾನ ಪಡೆದುಕೊಳ್ಳಬಹುದು ಎಂದರು.
ವಕೀಲ ಮಂಜುನಾಥ ಅರಳಿ ಮಾತನಾಡಿ, ಭಾರತ ಸರ್ಕಾರ 2007ರಲ್ಲಿ ಜಾರಿಗೆ ತಂದಿರುವ ಕಾನೂನಿನಡಿ ಪ್ರತಿಯೊಬ್ಬ ಹಿರಿಯ ನಾಗರಿಕರು ನೆಮ್ಮದಿಯಿಂದ ಬದುಕಲು ಅನುಕೂಲವಾಗಿದೆ. ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆ, ಕಲ್ಯಾಣ ಮತ್ತು ಅವರ ಹಕ್ಕುಗಳನ್ನು ರಕ್ಷಿಸಲು ಈ ಕಾನೂನು ರೂಪಿಸಲಾಗಿದೆ.
ವಯೋವೃದ್ಧ ತಂದೆ ತಾಯಿಗಳನ್ನು ಮತ್ತು ಪೋಷಕರನ್ನು ಸಮರ್ಪಕವಾಗಿ ಆರೈಕೆ ಮಾಡಿಕೊಳ್ಳುವುದರ ಬಗ್ಗೆ ಈ ಕಾಯ್ದೆ ರಕ್ಷಣೆ ಒದಗಿಸುತ್ತದೆ. ವಯಸ್ಕ ಮಕ್ಕಳು ಮತ್ತು ಸಂಬಂಧಿಕರು ಪೋಷಕರಿಗೆ ಆರ್ಥಿಕ ಬೆಂಬಲ ಮತ್ತು ಅವರ ಆಸ್ತಿಗಳನ್ನು ರಕ್ಷಿಸಿಕೊಳ್ಳುವುದರ ಬಗ್ಗೆ ಖಾತ್ರಿ ಒದಗಿಸುತ್ತದೆ ಎಂದರು.
ಪಿಎಸ್‌ಐ ಬಿ.ಎನ್. ಯಳವತ್ತಿ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಎ.ಕೆ. ಜೈನ್, ವಕೀಲರಾದ ಎಸ್.ಬಿ. ನಾಡಗೌಡರ, ಬಿ.ಎನ್. ಕಾವಲಿ, ವಿ.ಡಿ. ಅಂಗಡಿ, ಎಸ್.ಎಸ್. ದಂಡಿನ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಇತರರು ಇದ್ದರು. ಶಕೀಲಾಬಾನು ನಾಗರಹಳ್ಳಿ ನಿರೂಪಿಸಿದರು.