

ತಾಲೂಕಿನ ಮುನಿಯಾನ ತಾಂಡಾದಲ್ಲಿ ಮಂಗಳವಾರ ಸಂಭವಿಸಿದ ಜಾನುವಾರುಗಳ ಸರಣಿ ಸಾವು (cattle die) ಇಡೀ ತಾಂಡಾವನ್ನೇ ಬೆಚ್ಚಿ ಬೀಳಿಸಿದೆ.
ಎಂದಿನಂತೆ ತಾಂಡಾದ ಸುತ್ತಮುತ್ತಲಿನ ಜಮೀನುಗಳಲ್ಲಿ ಮೇಯಲು ತೆರಳಿದ್ದ ಜಾನುವಾರುಗಳು ಸೋಮವಾರ ಸಂಜೆ ಹೊತ್ತಿಗೆ ಮನೆಗಳಿಗೆ ಮರಳಿದ್ದವು. ಆದರೆ, ಮಧ್ಯರಾತ್ರಿ ವೇಳೆಗೆ ಇದ್ದಕ್ಕಿದ್ದಂತೆ ಕೆಲ ಜಾನುವಾರು ಅಸ್ವಸ್ಥಗೊಂಡು, ಉಸಿರಾಡಲು ಪರದಾಡುತ್ತಿರುವುದು ಮಾಲೀಕರ ಗಮನಕ್ಕೆ ಬಂದಿದೆ. ಗಾಬರಿಗೊಂಡ ಗ್ರಾಮಸ್ಥರು ನಸುಕಿನ ಜಾವ ಪಶು ವೈದ್ಯಕೀಯ ಸೇವಾ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪಶುವೈದ್ಯಾಧಿಕಾರಿಗಳು, ಸಿಬ್ಬಂದಿ ಹಾಗೂ ಆಂಬುಲೆನ್ಸ್ ಸಹಿತ ತಾಂಡಾಕ್ಕೆ ಆಗಮಿಸಿ, ಜಾನುವಾರುಗಳಿಗೆ ರೋಗನಿರೋಧಕ ಚುಚ್ಚುಮದ್ದು ಹಾಗೂ ಸಲೈನ್ ನೀಡಿ ಚಿಕಿತ್ಸೆ ಆರಂಭಿಸಿದ್ದಾರೆ. ಆದರೆ, ಮಂಗಳವಾರ ಬೆಳಗ್ಗೆಯಿಂದ ಬಿಸಿಲು ಹೆಚ್ಚುತ್ತಿದ್ದಂತೆ ಒಂದೊಂದೇ ಜಾನುವಾರು ಒದ್ದಾಡಿ ಸಾವನ್ನಪ್ಪತೊಡಗಿವೆ.
ಕ್ರಿಮಿನಾಶಕ ಸಿಂಪಡಿಸಿದ ಮೇವು ತಿಂದಿರುವ ಶಂಕೆ:
ಸೋಮವಾರ ಮೇಯಲು ಹೋಗಿದ್ದ ನೂರಾರು ಜಾನುವಾರುಗಳು ಕ್ರಿಮಿನಾಶಕ ಸಿಂಪಡಿಸಿದ ಹುಲ್ಲು ಅಥವಾ ಗೋವಿನಜೋಳದ ಬೆಳೆ ತಿಂದಿರುವುದರಿಂದ ವಿಷಪ್ರಾಶನವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಜಾನುವಾರು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪಶು ವೈದ್ಯಕೀಯ ಸೇವಾ ಇಲಾಖೆ ತಿಳಿಸಿದೆ.
ಹೈನುಗಾರಿಕೆಯೇ ಜೀವನದ ಆಧಾರ:
ತಾಂಡಾದ ಬಹುತೇಕ ಕುಟುಂಬಗಳು ಹೈನುಗಾರಿಕೆಯಿಂದ ಜೀವನ ಸಾಗಿಸುತ್ತಿವೆ. ತಾಂಡಾದಲ್ಲಿ 300ಕ್ಕೂ ಹೆಚ್ಚು ದೇಶಿ ದನ ಹಾಗೂ ಎಮ್ಮೆಗಳಿವೆ. ಒಂದೊಂದು ಮನೆಯಲ್ಲಿ 10ರಿಂದ 30ರವರೆಗೆ ಜಾನುವಾರು ಸಾಕಲಾಗುತ್ತಿದೆ. ಹಾಲು, ಮೊಸರು, ತುಪ್ಪ ಮಾರಾಟ ಹಾಗೂ ಸಗಣಿ ಗೊಬ್ಬರದಿಂದ ಕುಟುಂಬ ನಿರ್ವಹಣೆ ಮಾಡಲಾಗುತ್ತಿದೆ.
ಪರಿಹಾರಕ್ಕೆ ಆಗ್ರಹ:
ಹೈನುಗಾರಿಕೆ ನಂಬಿ ಬದುಕುತ್ತಿರುವ ಕುಟುಂಬಗಳ ಜೀವನಾಧಾರವೇ ಕಳೆದುಹೋಗಿರುವ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ ಸ್ಪಂದಿಸಬೇಕು. ಮೃತಪಟ್ಟ ಪ್ರತಿ ಜಾನುವಾರುಗೆ ಕನಿಷ್ಠ 30 ಸಾವಿರ ರೂಪಾಯಿಯಂತೆ ಮಾಲೀಕರಿಗೆ ಪರಿಹಾರ ನೀಡಬೇಕು ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ.
ಬಹುತೇಕ ಜಾನುವಾರು ಕ್ರಿಮಿನಾಶಕ ಸಿಂಪಡಿಸಿದ ಹುಲ್ಲು, ಗೋವಿನಜೋಳದ ಬೆಳೆ ತಿಂದಿರುವ ಶಂಕೆ ಇದೆ. ಜಾನುವಾರುಗಳ ಮರಣೋತ್ತರ ಪರೀಕ್ಷೆ ನಂತರವೇ ನಿಖರ ಕಾರಣ ತಿಳಿಯಲಿದೆ. ಅಸ್ವಸ್ಥ ಜಾನುವಾರುಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ನಿಖರ ಮಾಹಿತಿಗಾಗಿ ಜಾನುವಾರುಗಳ ಹೊಟ್ಟೆಯಲ್ಲಿನ ಮಾದರಿಯನ್ನು ಬಾಗಲಕೋಟೆಯ ಪ್ರಾಣಿ ರೋಗ ತಪಾಸನೆ ಕೇಂದ್ರಕ್ಕೆ ಕಳುಹಿಸಲಾಗಿದೆ.
ಡಾ. ನಿಂಗಪ್ಪ ಓಲೇಕಾರ, ಸಹಾಯಕ ನಿರ್ದೇಶಕ ಪಶು ವೈದ್ಯಕೀಯ ಸೇವಾ ಇಲಾಖೆ ಶಿರಹಟ್ಟಿ.