ರಾಜ್ಯಶಾಸ್ತ್ರ ಉಪನ್ಯಾಸಕನ ಅನುಚಿತ ವರ್ತನೆ

ನರಗುಂದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಮಂಗಳವಾರ ಭೇಟಿ ನೀಡಿದ ಶಾಸಕ ಸಿ.ಸಿ.ಪಾಟೀಲ ಅವರು ವಿದ್ಯಾರ್ಥಿಗಳು, ಅಧಿಕಾರಿಗಳಿಂದ ಮಾಹಿತಿ ಪಡೆದರು. ಡಿಡಿಪಿಯು ಎಸ್.ಬಿ. ಮಸನಾಯಕ ಇತರರಿದ್ದರು.
ನರಗುಂದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಮಂಗಳವಾರ ಭೇಟಿ ನೀಡಿದ ಶಾಸಕ ಸಿ.ಸಿ.ಪಾಟೀಲ ಅವರು ವಿದ್ಯಾರ್ಥಿಗಳು, ಅಧಿಕಾರಿಗಳಿಂದ ಮಾಹಿತಿ ಪಡೆದರು. ಡಿಡಿಪಿಯು ಎಸ್.ಬಿ. ಮಸನಾಯಕ ಇತರರಿದ್ದರು.
Published on

ನರಗುಂದ: 

ಬಳೆ, ಕುಂಕುಮ ಧರಿಸಬಾರದು, ಹೂವು ಮುಡಿಯಬಾರದು, ತರಗತಿಯಲ್ಲಿ ಶಾಂತತೆ ಕಾಪಾಡಬೇಕಾದರೆ ಹೆಣ್ಣು ಮಕ್ಕಳು ಕಾಲ್ಗೆಜ್ಜೆ ಧರಿಸಬಾರದಂತೆ... ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಮನ್ಸೂರಲಿ ಪೊಸಪೇಟ ಖಾಜಿ ವಿರುದ್ಧ ಕಾಲೇಜಿನ ನೂರಾರು ವಿದ್ಯಾರ್ಥಿನಿಯರು ಶಾಸಕ ಸಿ.ಸಿ. ಪಾಟೀಲ, ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಉಪ ನಿರ್ದೇಶಕ ಎಸ್.ಬಿ. ಮಸನಾಯಕ ಅವರಿಗೆ ಮಂಗಳವಾರ ನೀಡಿದ ದೂರಿನ ಸರಮಾಲೆಗಳು. 

ಉಪನ್ಯಾಸಕ ಖಾಜಿ ಅವರು, ಸರಿಯಾಗಿ ಕಾಲೇಜಿಗೆ ಆಗಮಿಸುವುದಿಲ್ಲ. ವಿದ್ಯಾರ್ಥಿನಿಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅನುಚಿತವಾಗಿ ವರ್ತಿಸುತ್ತಾರೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಲೇಜಿನ ವಿದ್ಯಾರ್ಥಿಗಳು ಸೋಮವಾರ ತರಗತಿ ಬಹಿಷ್ಕರಿಸಿ, ಶಾಸಕ ಸಿ.ಸಿ. ಪಾಟೀಲ ಅವರಿಗೆ ಮನವಿ ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಸಿ.ಸಿ.ಪಾಟೀಲರು, ಅಧಿಕಾರಿಗಳ ಸಮೇತ ಮಂಗಳವಾರ ಖುದ್ದು ಕಾಲೇಜಿಗೆ ಭೇಟಿ ನೀಡಿ ಪ್ರಾಚಾರ್ಯ, ಉಪನ್ಯಾಸಕರು, ಅತಿಥಿ ಶಿಕ್ಷಕರು, ಡಿಡಿಪಿಯು ಹಾಗೂ ವಿದ್ಯಾರ್ಥಿಗಳಿಂದ ಪ್ರತ್ಯೇಕ ಹೇಳಿಕೆಗಳನ್ನು ಪಡೆದು ಲಖಿತ ಮನವಿಗಳನ್ನು ಸ್ವೀಕರಿಸಿದರು.   
ನರಗುಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕ ಮನ್ಸೂರಲಿ ನಿತ್ಯ ಕಾಲೇಜಿಗೆ ತಡವಾಗಿ ಬರುವುದಲ್ಲದೆ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿ ಧರ್ಮ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ. ಸರಿಯಾಗಿ ಪಾಠ ಹೇಳಲು ಬಾರದ್ದಕ್ಕೆ ಪ್ರಶ್ನಿಸುವ ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ನೀಡುವ ಬೆದರಿಕೆ ಹಾಕುತ್ತಾರಂತೆ. ಅಶಿಸ್ತಿನಿಂದ ವರ್ತಿಸಿರುವ ಪ್ರಾಧ್ಯಾಪಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನೊಂದ ನೂರಾರು ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದರು. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಮಂಗಳವಾರ ಎರಡ್ಮೂರು ಗಂಟೆಗಳ ಕಾಲ ಎಲ್ಲರನ್ನೂ ವಿಚಾರಿಸಿದಾಗ ಈತನೊಬ್ಬ ವಿಕೃತ ಮನಸ್ಸಿನ ಶಿಕ್ಷಕನೆಂದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಮಕ್ಕಳ ಅಪಾದನೆಯೂ ಸತ್ಯವೆಂದು ತಿಳಿದು ಬಂದಿದೆ. ಹಿಂದೆಯೂ ಈ ಶಿಕ್ಷಕನ ಮೇಲೆ ಹಲವಾರು ಗಂಭೀರ ಆರೋಪ ಕೇಳಿ ಬಂದಿವೆ. ಇಂತಹ ಶಿಕ್ಷಕನಿಂದ ಗುಣಮಟ್ಟದ ಶಿಕ್ಷಣ ನೀರಿಕ್ಷಿಸಲು ಸಾಧ್ಯವಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಶಿಕ್ಷಣ ಸಚಿವರಿಗೆ ವಿಧಾನಸಭೆಯಲ್ಲಿ ದೂರು ನೀಡುವುದರ ಜತೆಗೆ ಈತನನ್ನು ಸೇವೆಯಿಂದ ಶಾಶ್ವತ ವಜಾಗೊಳಿಸುವಂತೆ ದೂರು ನೀಡುತ್ತೇನೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿ.ಸಿ.ಪಾಟೀಲ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 

ಪ್ರಾಚಾರ್ಯ, ಡಿಡಿಪಿಯು

 ತರಾಟೆಗೆ

ಉಪನ್ಯಾಸಕ ವಿರುದ್ಧ ಸಾಕಷ್ಟು ಆರೋಪಗಳಿದ್ದರೂ ಕ್ರಮಕೈಗೊಳ್ಳದ ಪ್ರಾಚಾರ್ಯ ಸಿ.ಎಸ್. ಸುಳ್ಳದ, ಡಿಡಿಪಿಯು ಎಸ್.ಬಿ. ಮಸನಾಯಕ ಅವರನ್ನು ಶಾಸಕ ಸಿ.ಸಿ. ಪಾಟೀಲ ತರಾಟೆಗೆ ತೆಗೆದುಕೊಂಡರು. ನಿಮಗೆ ಸರಿಯಾಗಿ ಆಡಳಿತ ನಡೆಸೋದಕ್ಕೆ ಬರಲ್ಲ. ಪ್ರಾರಂಭದಲ್ಲೇ ಕಾನೂನು ಕ್ರಮ ಕೈಗೊಂಡಿದ್ದರೆ ವಿದ್ಯಾರ್ಥಿಗಳು ಬೀದಿಗೆ ಬರುವ ಪರಿಸ್ಥಿತಿ ಬರುತ್ತಿರಲಿಲ್ಲ. ನಿಮಗೆ ಆಡಳಿತ ಮಾಡಲು ಬರದಿದ್ದರೆ ಯಾಕೆ ಬಂದ್ರೀ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net