maize inagurate ರಾತ್ರಿ ಉದ್ಘಾಟನೆಗೊಂಡ ಮೆಕ್ಕೆಜೋಳ ಖರೀದಿ ಕೇಂದ್ರ

ಲಕ್ಷ್ಮೇಶ್ವರದಲ್ಲಿ ಮೆಕ್ಕೆಜೋಳದ (maize) ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಜಿಲ್ಲಾಧಿಕಾರಿಗಳು ಉದ್ಘಾಟಿಸಿದರು.
ಲಕ್ಷ್ಮೇಶ್ವರದಲ್ಲಿ ಮೆಕ್ಕೆಜೋಳದ (maize) ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಜಿಲ್ಲಾಧಿಕಾರಿಗಳು ಉದ್ಘಾಟಿಸಿದರು.
Published on
ಲಕ್ಷ್ಮೇಶ್ವರ: ಪಟ್ಟಣದಲ್ಲಿ 18 ದಿನಗಳಿಂದ ರೈತರು ನಡೆಸುತ್ತಿರುವ ಹೋರಾಟಕ್ಕೆ ಮಣಿದ ಜಿಲ್ಲಾಡಳಿತ ಸೋಮವಾರ ರಾತ್ರಿಯೇ ಮೆಕ್ಕೆಜೋಳದ (maize) ಖರೀದಿ ಕೇಂದ್ರಕ್ಕೆ ಚಾಲನೆ ನೀಡಿತು.
ರೈತರ ಹೋರಾಟ ವೇದಿಕೆಯಲ್ಲಿಯೇ ಜಿಲ್ಲಾಧಿಕಾರಿ ಶ್ರೀಧರ ಸಿ.ಎನ್. ಸಾಂಕೇತಿಕವಾಗಿ ಉದ್ಘಾಟಿಸಿದರು. ಬಳಿಕ ಮಾತನಾಡಿ, ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಕ್ಕೆ ಲಕ್ಷ್ಮೇಶ್ವರದ ರೈತರು ಹೋರಾಟ ಮಾಡಿದ ಪರಿಣಾಮ ಇಡೀ ರಾಜ್ಯದ ಬೆಳೆಗಾರರಿಗೆ ಅನಕೂಲವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಸಾಕಷ್ಟು ಶ್ರಮಿಸಿದ್ದಾರೆ. ಜಿಲ್ಲೆಯಲ್ಲಿ ಖರೀದಿ ಕೇಂದ್ರ ಹಂಚಿಕೆಯಲ್ಲಿ ತಾಂತ್ರಿಕ ತೊಂದರೆಯಿಂದ ಲಕ್ಷ್ಮೇಶ್ವರದ ಹೆಸರು ಬಿಟ್ಟು ಹೋಗಿತ್ತು. ಈ ಸಮಸ್ಯೆ ಬಗೆಹರಿಸಲು ತಡವಾಯಿತು. ಅಲ್ಲದೆ, ಪ್ರತಿ ರೈತರಿಂದ 5 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಯಿಂದ ರೈತರಿಗೆ ಅನುಕೂಲವಾಗುವುದಿಲ್ಲ. ಈ ಪ್ರಮಾಣ ಹೆಚ್ಚಾಗಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಪಟ್ಟಣದ ಟಿಎಪಿಸಿಎಂಎಸ್‌ನಲ್ಲಿ 3 ದಿನಗಳ ಕಾಲ ನೋಂದಣಿ ಮತ್ತು 4ನೇ ದಿನದಿಂದ ನೋಂದಣಿ ಜತೆಗೆ ಖರೀದಿ ಪ್ರಕ್ರಿಯೇ ಪ್ರಾರಂಭಗೊಳ್ಳಲಿದೆ. ಜಿಲ್ಲೆಯ ಶೇ.85 ರಷ್ಟು ರೈತರಿಗೆ ಈಗಾಗಲೇ ಬೆಳೆಹಾನಿ ಪರಿಹಾರ ಜಮೆ ಮಾಡಲಾಗಿದೆ. ಹೆಸರು ಖರೀದಿಗೆ ಇದ್ದ ನಿಯಯಮಾವಳಿಯಲ್ಲಿಯೂ ಸಡಿಲಿಕೆಗೆ ಸಚಿವರು ಪ್ರಯತ್ನಿಸುತ್ತಿದ್ದಾರೆ ಎಂದರು.
9 ದಿನ ಅನ್ನ, ನೀರು, ಔಷಧೋಪಚಾರ ತ್ಯಜಿಸಿ ಅಸ್ವಸ್ಥಗೊಂಡ ಆದರಹಳ್ಳಿ ಕುಮಾರ ಮಹಾರಾಜ ಶ್ರೀಗಳಿಂದಲೇ ಖರೀದಿ ಕೇಂದ್ರಕ್ಕೆ ಚಾಲನೆ ಕೊಡಿಸಿದ ಜಿಲ್ಲಾಧಿಕಾರಿಗಳು ಅವರಿಗೆ ಎಳನೀರು ಕೊಟ್ಟು ಹೋರಾಟವನ್ನು ತಾರ್ಕಿಕ ಅಂತ್ಯಗೊಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ, ಅಪರ ಜಿಲ್ಲಾಧಿಕಾರಿ ದುರ್ಗೇಶ ರುದ್ರಾಕ್ಷಿ, ಎಸಿ ಗಂಗಪ್ಪ ಎಂ, ತಹಸೀಲ್ದಾರ್ ಧನಂಜಯ ಎಂ. ಇತರರಿದ್ದರು.
ರೈತರಾದ ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ ಮಾತನಾಡಿ, 5 ಕ್ವಿಂಟಾಲ್ ಬದಲಾಗಿ ಒಬ್ಬ ರೈತರಿಂದ ಕನಿಷ್ಠ 40 ಕ್ವಿಂಟಾಲ್ ಖರೀದಿಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಬೇಕು ಎಂದು ಒತ್ತಾಯಿಸಿದರು. 5 ಕ್ವಿಂಟಾಲ್ ಪ್ರಮಾಣ ಹೆಚ್ಚಿಸುವಂತೆ ಸರ್ಕಾರವನ್ನು ಒತ್ತಾಯಿಸಲು ರೈತರೆಲ್ಲ ಬೆಳಗಾವಿ ಅಧಿವೇಶನಕ್ಕೆ ಹೋಗಲು ಸಿದ್ದ ಎಂದರು. ಹೋರಾಟದಲ್ಲಿ ಮಠಾಧೀಶರ, ಮಾಧ್ಯಮದವರ ಪಾತ್ರ ಮಹತ್ವದ್ದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಖರೀದಿ ಕೇಂದ್ರ ಉದ್ಘಾಟನೆಯ ಬಳಿಕ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿದ ರೈತರು, ರೈತರ ಗೆಲುವಿಗೆ ಕಾರಣೀಕರ್ತರಾದ ಎಲ್ಲರನ್ನೂ ಸನ್ಮಾನಿಸಲಾಯಿತು.
ಕುಂದಗೋಳ, ಕರೇವಾಡಿಮಠ, ಹುಲ್ಲೂರು, ಬಟಗುರ್ಕಿ ಶ್ರೀಗಳು, ಜಿ.ಎಸ್ ಗಡ್ಡದೇವರಮಠ, ಎಂ.ಎಸ್ ದೊಡ್ಡಗೌಡರ, ನಾಗರಾಜ ಚಿಂಚಲಿ, ಶರಣು ಗೋಡಿ, ಹೊನ್ನಪ್ಪ ವಡ್ಡರ, ಸುಜಾತಾ ದೊಡ್ಡಮನಿ, ಪೂರ್ಣಾಜಿ ಖರಾಟೆ, ಬಸಣ್ಣ ಬೆಂಡಿಗೇರಿ, ಮಹೇಶ ಹೊಗೆಸೊಪ್ಪಿನ, ನೀಲಪ್ಪ ಶರಸೂರಿ, ಅಮರಪ್ಪ ಗುಡಗುಂಟಿ, ಚನ್ನಪ್ಪ ಷಣ್ಮುಕಿ, ನೀಲಪ್ಪ ಶರಸೂರಿ, ದಾದಾಪೀರ್ ಮುಚ್ಛಾಲೆ, ಎಂ.ಎಂ ಗದಗ, ಬಿ.ಎಸ್ ಜಾಲಗಾರ,ಪುಲಕೇಶ ಬಟ್ಟೂರ,ಗುರಪ್ಪ ಮುಳಗುಂದ, ಬಸವರಾಜ ಹೊಗೆಸೊಪ್ಪಿನ, ಬಸವರಾಜ ಟೋಕಾಳಿ, ಮಂಜು ಕೋಡಳ್ಳಿ, ನಿಂಗಪ್ಪ ಹೊಂಬಳ ಸೇರಿ ನೂರಾರು ರೈತರು, ಸಂಘಟನೆಯವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net