GURU: ಗುರು ಸ್ಮರಣೆಯಿಂದ ಜೀವನ ಸುಂದರ

ಮುಂಡರಗಿ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಬುಧವಾರ ಆಯೋಜಿಸಿದ್ದ ಗುರುಪೂರ್ಣಿಮೆ ಹಾಗೂ ಮಾಸಿಕ ಶಿವಾನುಭವದಲ್ಲಿ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ಡಾ.ಅನ್ನದಾನೀಶ್ವರ ಶಿವಯೋಗಿಗಳವರು, ಶ್ರೀ ಚನ್ನಬಸವ ದೇವರು, ಶ್ರೀಚೇತನ ದೇವರು ಇತರರಿದ್ದರು.
ಮುಂಡರಗಿ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಬುಧವಾರ ಆಯೋಜಿಸಿದ್ದ ಗುರುಪೂರ್ಣಿಮೆ ಹಾಗೂ ಮಾಸಿಕ ಶಿವಾನುಭವದಲ್ಲಿ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ಡಾ.ಅನ್ನದಾನೀಶ್ವರ ಶಿವಯೋಗಿಗಳವರು, ಶ್ರೀ ಚನ್ನಬಸವ ದೇವರು, ಶ್ರೀಚೇತನ ದೇವರು ಇತರರಿದ್ದರು.
Published on
ಮುಂಡರಗಿ: ಜೀವನದಲ್ಲಿ ಗುರುವಿನ ಪಾತ್ರ ಬಹುಮುಖ್ಯ. ತಾಯಿ ನಂತರದಲ್ಲಿ ತಾಯಿ ಸ್ಥಾನವನ್ನು ಗುರುಗಳು ತುಂಬಿ ನಮಗೆ ಸನ್ಮಾರ್ಗವನ್ನು ತೋರುತ್ತಾರೆ. ಭೂಮಿ ಮೇಲೆ ತಾಯಿ ಮತ್ತು ಗುರು ಶ್ರೇಷ್ಠರು. ಭಗವಂತನಿಗಿಂತ ಗುರು ಮುಖ್ಯ. ಗುರುವಿನ ಆಶೀರ್ವಾದ ಬದುಕಿಗೆ ಅತ್ಯವಶ್ಯಕ ಎಂದು ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದ ಉತ್ತರಾಧಿಕಾರಿ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಬುಧವಾರ ಆಯೋಜಿಸಿದ್ದ ಗುರುಪೂರ್ಣಿಮೆ ಹಾಗೂ 1849ನೇ ಮಾಸಿಕ ಶಿವಾನುಭವದ ನೇತೃತ್ವ ವಹಿಸಿ ಅವರು ಆಶೀರ್ವಚನ ನೀಡಿದರು. ‘ದೇವರು ಯಾರಿಗೂ ಕಾಣುವುದಿಲ್ಲ. ದೇವರ ರೂಪದಲ್ಲಿ ಗುರುಗಳು ನಮಗೆ ಆಶೀರ್ವದಿಸಿ ಮುನ್ನಡೆಸುತ್ತಾರೆ. ಅವರನ್ನು ಗೌರವ, ಭಕ್ತಿ-ಭಾವದಿಂದ ಭಗವಂತನ ದೃಷ್ಟಿಯಲ್ಲಿ ಕಾಣುತ್ತೇವೆ. ಗುರು ಯಾವುದೇ ವರ ಮತ್ತು ಶಾಪ ಕೊಡುವುದಿಲ್ಲ. ಗುರುವಿನೊಂದಿಗೆ ನಾವು ಹೇಗೆ ನಡೆದುಕೊಳ್ಳುತ್ತೇವೆ ಅದರಂತೆ ನಮಗೆ ಫಲ ದೊರೆಯುತ್ತದೆ. ಡಾ.ಅನ್ನದಾನೀಶ್ವರ ಪೂಜ್ಯರು ತ್ರಿಕಾಲ ಲಿಂಗಪೂಜೆ ಕೈಗೊಂಡು ಪರಮಾತ್ಮನ ಸ್ವರೂಪವಾಗಿ ನಮಗೆಲ್ಲ ಆಶೀರ್ವದಿಸುತ್ತಿದ್ದಾರೆ. ಇಳಿವಯಸ್ಸಿನಲ್ಲೂ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರಮ, ಕಾಯಕ ನಡೆಸುತ್ತಿದ್ದಾರೆ. ಇಂತಹ ಪೂಜ್ಯರನ್ನು ಪಡೆದ ನಾವೇ ಪುಣ್ಯವಂತರು’ ಎಂದರು.
ಸಾನ್ನಿಧ್ಯ ವಹಿಸಿದ್ದ ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳವರು ಆಶೀರ್ವಚನ ನೀಡಿ, ಪಾಲಕರು ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸಬೇಕು. ಗುರುಗಳಿಗೆ ಗೌರವ ನೀಡುವುದನ್ನು ಕಲಿಸಬೇಕು. ಶಿಕ್ಷಣದಲ್ಲೂ ಸಂಸ್ಕಾರ ನೀಡುವಂತಹ ಕಾರ್ಯ ಆಗಬೇಕು. ಗುರುವಿನ ಸ್ಮರಣೆಯಿಂದ ಜೀವನ ಸುಂದರವಾಗಿರುತ್ತದೆ ಎಂದರು.
ಹೊಳಲು ಶ್ರೀಚನ್ನಬಸವ ದೇವರು ಮಾತನಾಡಿದರು. ಉತ್ತಮ ಗ್ರಂಥಪಾಲಕ ಹಾಲಪ್ಪ ಕೊರ್ಲಹಳ್ಳಿ, ಶಸಾಪ ತಾಲೂಕಾಧ್ಯಕ್ಷ ವೀರಣ್ಣ ಮಡಿವಾಳರ, ವರ್ತಕ ಸಿದ್ದಲಿಂಗಪ್ಪ ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಾದ ಖುಷಿ ಮುರಡಿ ಜಗದ್ಗುರು ಅನ್ನದಾನೀಶ್ವರ ಶ್ರೀಗಳ ಕುರಿತು ವಚನ ನೃತ್ಯ ಹಾಗೂ ಪ್ರತೀಕ್ಷಾ ಹುಳ್ಯಾಳ ಮತ್ತು ಸಂಚನಾ ಕಾಗನೂರಮಠ ತಂಡದವರು ಹಾನಗಲ್ಲ ಕುಮಾರ ಶಿವಯೋಗಿಗಳವರ ಕುರಿತಾದ ಗೀತೆಗೆ ನೃತ್ಯ ಸಾದರ ಪಡಿಸಿದರು. ಅನೇಕ ಭಕ್ತರು ಶ್ರೀಗಳಿಗೆ ಗುರುವಂದನೆ ಸಲ್ಲಿಸಿದರು. ಸಂಗೀತ ಶಿಕ್ಷಕರಾದ ರಾಮಪ್ಪ ಮತ್ತು ಬಸವರಾಜ ಸಿದ್ದಣ್ಣವರ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಕೋಡಿಮಠದ ಉತ್ತರಾಧಿಕಾರಿ ಶ್ರೀಚೇತನ ದೇವರು ಉಪಸ್ಥಿತರಿದ್ದರು. ಶಿಕ್ಷಕ ನಾಗಭೂಷಣ ಹಿರೇಮಠ ನಿರ್ವಹಿಸಿದರು.

ಪದಾಧಿಕಾರಿಗಳ ಆಯ್ಕೆ

ಶಿವಾನುಭವದಲ್ಲಿ ಶ್ರಾವಣ ಮಾಸದ ಪ್ರಯುಕ್ತ ನಡೆಯುವ ಪುರಾಣ ಪ್ರವಚನ ಹಿನ್ನೆಲೆಯಲ್ಲಿ ಪುರಾಣ ಸಮಿತಿ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು. ಅಧ್ಯಕ್ಷರಾಗಿ ವಿಶ್ವನಾಥ ಪಾಟೀಲ, ಉಪಾಧ್ಯಕ್ಷರಾಗಿ ಈರಣ್ಣ ಕಾಶಿಗವಿ, ಕಾರ್ಯದರ್ಶಿಯಾಗಿ ಬಸವರಾಜ ಅಂಕದ, ಖಜಾಂಚಿಯಾಗಿ ವಿನಯ್ ಗಂಧದ ಅವರನ್ನು ಆಯ್ಕೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net