Research ಪುಲಿಗೆರೆ ಸಾಹಿತ್ಯದ ಮೇಲೆ ಸಂಶೋಧನೆ ಹೆಚ್ಚಲಿ

ಲಕ್ಷ್ಮೇಶ್ವರದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಡಾ.ಮನು ಬಳಿಗಾರ ಉದ್ಘಾಟಿಸಿದರು. ಶಾಸಕ ಡಾ.ಚಂದ್ರು ಲಮಾಣಿ, ಪ್ರೊ.ನೀಲಗಿರಿ ತಳವಾರ, ವಿವೇಕಾನಂದಗೌಡ ಪಾಟೀಲ ಇತರರಿದ್ದರು.
ಲಕ್ಷ್ಮೇಶ್ವರದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಡಾ.ಮನು ಬಳಿಗಾರ ಉದ್ಘಾಟಿಸಿದರು. ಶಾಸಕ ಡಾ.ಚಂದ್ರು ಲಮಾಣಿ, ಪ್ರೊ.ನೀಲಗಿರಿ ತಳವಾರ, ವಿವೇಕಾನಂದಗೌಡ ಪಾಟೀಲ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಾಡೋಜ ಡಾ. ಮನು ಬಳಿಗಾರ ಆಶಯ
  • ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟನೆ
ಲಕ್ಷ್ಮೇಶ್ವರ: ಆದಿಕವಿ ಪಂಪನ ನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪುಲಿಗೆರೆ ಇಂದಿನ ಲಕ್ಷ್ಮೇಶ್ವರ 6-7 ನೇ ಶತಮಾನದಲ್ಲಿಯೇ ಸಾಹಿತ್ಯದ ರಾಜಧಾನಿಯಾಗಿತ್ತು. ಪ್ರಭುತ್ವದ ಕಣ್ಣು ತೆರೆಸಿದ ಪುಲಿಗೆರೆಯ ಹಳಗನ್ನಡ ಸಾಹಿತ್ಯವು ಸಾಹಿತ್ಯದ ಘಟಿಕಾ ಸ್ಥಾನವಾಗಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ, ನಾಡೋಜ ಡಾ. ಮನು ಬಳಿಗಾರ ಹೇಳಿದರು.
ಪಟ್ಟಣದ ಶ್ರೀ ರಂಭಾಪುರಿ ಜ.ವೀರಗಂಗಾಧರ ಸಮುದಾಯ ಭವನದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನ, ಉನ್ನತ ಶಿಕ್ಷಣ ಇಲಾಖೆ, ಶಿಕ್ಷಣ ಸಚಿವಾಲಯ ಭಾರತ ಸರ್ಕಾರ ಹಾಗೂ ಮೈಸೂರಿನ ಮಾನಸಗಂಗೋತ್ರಿ ಮತ್ತು ಗದಗ ಜಿಲ್ಲೆ ಮತ್ತು ಲಕ್ಷ್ಮೇಶ್ವರ ತಾಲೂಕು ಕಸಾಪ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಪುಲಿಗೆರೆ ಪರಿಸರದ ಪ್ರಾಚೀನ ಕನ್ನಡ ಸಾಹಿತ್ಯದ ಮೇಲೆ ಮೂರು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಸಂಶೋಧನ ಲಿಪಿಗಳ ಕೇಂದ್ರದಲ್ಲಿ ಪುಲಿಗೆರೆ ಮಹತ್ವ ಪಡೆದುಕೊಂಡಿದೆ. ಪುಲಿಗೆರೆ ಮುನ್ನೂರು ಪ್ರಾಂತ್ಯಗಳ ರಾಜಧಾನಿಯಾಗಿತ್ತು. ಇಲ್ಲಿನ ಸೋಮೇಶ್ವರ ದೇವಸ್ಥಾನ, ಶಂಖ ಬಸೀದಿಗಳಲ್ಲಿನ ನೂರಾರು ಶಾಸನಗಳು ಈ ನೆಲದ ಹಿರಿಮೆ-ಗರಿಮೆ ಸಾರುತ್ತವೆ. ಇಲ್ಲಿನ ಶಾಸನಗಳು, ಸಾಹಿತ್ಯ, ಶಿಲ್ಪಕಲೆ, ನಾಟಕ, ಸಂಗೀತ ಕ್ಷೇತ್ರಗಳ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲುವ ಸಂಶೋಧನೆಗಳು ನಡೆಯಬೇಕು. ಪುಲಿಗೆರೆ ಆದಿಕವಿ ಪಂಪನ ಸಾಹಿತ್ಯ ಕ್ಷೇತ್ರವಾಗಿದೆ. ಈ ಬಗ್ಗೆ ಬ್ರಿಟಿಷ್ ಸಂಶೋಧಕ ಬಿ.ಎಲ್. ರೈಸ್ ಸಾಕ್ಷೀಕರಿಸಿದ್ದಾರೆ. ಹರಿಹರ, ರಾಘವಾಂಕರು, ಪಾಲ್ಗುರಿಕೆ ಸೋಮನಾಥ, ಆದಯ್ಯ ಕವಿಗಳು ಸೋಮೇಶ್ವರ ದೇವಸ್ಥಾನದಿಂದ ಸ್ಪೂರ್ತಿ ಪಡೆದಿದ್ದರು. ದೇಶದ ಯಾವುದೇ ಭಾಗದಲ್ಲಿ ದೊರೆಯಲಾರದ ನಂದಿಯ ಮೇಲೆ ಶ್ರೀ ಸೋಮೇಶ್ವರ ಮತ್ತು ಪಾರ್ವತಿಯ ಮೂರ್ತಿ ಇರುವುದು ಹೆಮ್ಮೆಯ ಸಂಗತಿಯಾಗಿದೆ. ಮೂರು ದಿನಗಳ ವಿಚಾರ ಸಂಕಿರಣ ವಿಷಯಧಾರಿತ ಪುಸ್ತಕ ಪ್ರಕಟವಾಗಬೇಕು. ತ್ರಿಭಾಷಾ ನೀತಿಯಿಂದ ಇಂದು ಕನ್ನಡ ಭಾಷೆಗೆ ಆತಂಕ ಎದುರಾಗಿದೆ. ಮಾಧ್ಯಮಿಕ ಶಿಕ್ಷಣದವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂದರು.
ಶಾಸಕ ಡಾ ಚಂದ್ರು ಲಮಾಣಿ ಮಾತನಾಡಿ, ಪಟ್ಟಣದ ಕನ್ನಡ ಸಾಹಿತ್ಯ ಭವನದ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕೇಂದ್ರ ಭಾರತೀಯ ಭಾಷಾ ಸಂಸ್ಥಾನ ಮೈಸೂರಿನ ಯೋಜನಾ ನಿರ್ದೇಶಕ ಡಾ. ನೀಲಗಿರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಜಿಲ್ಲಾದ್ಯಕ್ಷ ವಿವೇಕಾನಂದಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ರಾಮಣ್ಣ ಲಮಾಣಿ, ವಿಶ್ರಾಂತ ಪ್ರಾಚಾರ್ಯ ಪ್ರೊ. ಶಿವಕುಮಾರ ಶಿಗ್ಲಿ, ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಆರ್.ಬಿ. ಬನ್ನೂರ, ಪ್ರೊ.ಆರ್.ಎನ್. ಪಾಟೀಲ ಇತರರು ಉಪಸ್ಥಿತರಿದ್ದರು. ಎಸ್.ಪಿ. ಬಳಿಗಾರ, ಎಸ್.ಎನ್. ಮಳಲಿ, ಎಸ್.ಎಫ್. ಆದಿ, ನಾಗರಾಜ ಕಳಸಾಪುರ, ಸೋಮಶೇಖರ ಕೆರಿಮನಿ, ಎಸ್.ಬಿ. ಅಣ್ಣಿಗೇರಿ, ಈರಣ್ಣ ಗಾಣಿಗೇರ, ಸಿ.ಜಿ. ಹಿರೇಮಠ, ಈರಣ್ಣ ಮಜ್ಜಿಗುಡ್ಡದ, ಶಂಕರ ಸಿಳ್ಳಿನ, ಮಾಲಾದೇವಿ ದಂದರಗಿ, ನಿರ್ಮಲಾ ಅರಳಿ ಇತರರಿದ್ದರು.
ಈಶ್ವರ ಮೆಡ್ಲೇರಿ, ಹಿರಿಯ ಸಂಶೋಧಕಿ ಡಾ.ಎನ್.ಎಸ್. ಅನ್ನಪೂರ್ಣಹಾಗೂ ಮಲ್ಲು ಕಳಸಾಪುರ ಕಾರ್ಯಕಗ್ರಮ ನಿರ್ವಹಿಸಿದರು.
ಶಾಸನಗಳ ಅಧ್ಯಯನ ನಡೆಯಲಿ
ಲಕ್ಷ್ಮೇಶ್ವರ: ಐತಿಹಾಸಿಕ ಪುಲಿಗೆರೆ ಶಾಸನಗಳು ಕನ್ನಡ ನಾಡಿನ ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ರಾಜಕೀಯ ಇತಿಹಾಸದ ಅಮೂಲ್ಯ ದಾಖಲೆಗಳಾಗಿದ್ದು ಅವುಗಳ ಕುರಿತು ಆಳವಾದ ಅಧ್ಯಯನದ ಅಗತ್ಯವಿದೆ ಎಂದು ವಿಶ್ರಾಂತ ಕೆಎಎಸ್ ಅಧಿಕಾರಿ ಡಾ. ಹನಮಾಕ್ಷಿ ಗೋಗಿ ಅಭಿಪ್ರಾಯಪಟ್ಟರು.
ಪುಲಿಗೆರೆಯಲ್ಲಿ 104ಕ್ಕೂ ಅಧಿಕ ಶಾಸನಗಳು ದೊರೆತಿವೆ. ಪುಲಿಗೆರೆ ಶೈವ, ವೈಷ್ಣವ ಮತ್ತು ಜೈನ ಕೇಂದ್ರವಾಗಿತ್ತು ಎಂದು ಶಾಸನಗಳಲ್ಲಿ ತಿಳಿದುಬರುತ್ತದೆ. ಪುಲಿಗೆರೆಯಲ್ಲಿ 101ಕ್ಕೂ ಹೆಚ್ಚು ಬಸದಿಗಳು ಇದ್ದವೆಂದು ಶಾಸನಗಳಲ್ಲಿ ಉಲ್ಲೇಖವಿದೆ. ಲಕ್ಷ್ಮೇಶ್ವರ ಒಂದು ಮಹಾ ಅಗ್ರಹಾರ ಘಟಿಕ ಸ್ಥಾನ ಮತ್ತು ವಿದ್ಯಾ ಕೇಂದ್ರವಾಗಿತ್ತು. ಇಂತಹ ಮಹತ್ವದ ಕೇಂದ್ರವಾಗಿದ್ದ ಪುಲಿಗೆರೆಯ ಪುರಾತನ ಇತಿಹಾಸವನ್ನು ಸಂಪೂರ್ಣವಾಗಿ ತಿಳಿಸುವ ಶಾಸನಗಳ ಮೇಲೆ ಬೆಳಕು ಚೆಲ್ಲುವ ಕಾರ್ಯದ ಜೊತೆ ಅವುಗಳನ್ನು ಸಂರಕ್ಷಿಸುವ ಕಾರ್ಯವಾಗಬೇಕಾಗಿದೆ. ಇಂದಿನ ಯುವಪೀಳಿಗೆ ಇತಿಹಾಸ ಮತ್ತು ಪುರಾತತ್ವ ಅಧ್ಯಯನಗಳತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಸೋಮೇಶ್ವರ ಶತಕ ಬರೆದಿದ್ದು ಸೋಮನಾಥನೇ
ಲಕ್ಷ್ಮೇಶ್ವರ: ಸೋಮೇಶ್ವರ ಶತಕವನ್ನು ಬರೆದವರು ಸೋಮನಾಥನೇ ಎಂಬ ಜಿಜ್ಞಾಸೆ ಹಲವಾರು ವಿದ್ವಾಂಸರಲ್ಲಿ ಇತ್ತು. ಆದರೆ, ಶಿವಮೂರ್ತಿ ಶಾಸ್ತ್ರಿಗಳು ಇದರ ಬಗ್ಗೆ ಸ್ಪಷ್ಟವಾಗಿ ಬರೆದಿದ್ದು, ಸೋಮೇಶ್ವರ ಶತಕವನ್ನು ಬರೆದವರು ಪುಲಿಗೆರೆಯ ಸೋಮನಾಥನೇ ಎಂದು ತಮ್ಮ ಗ್ರಂಥಗಳ ಮೂಲಕ ತೋರಿಸಿದ್ದಾರೆ ಎಂದು ಹಂಪಿ ವಿವಿ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಕೆ. ರವೀಂದ್ರನಾಥ ಹೇಳಿದರು.
ಉಪನ್ಯಾಸ ನೀಡಿದ ಅವರು, ನಾಡಿನ ಮಹತ್ವವನ್ನು ಹೆಚ್ಚಿಸಿದವರಲ್ಲಿ ಪುಲಿಗೆರೆ ಸೋಮನಾಥ ಮತ್ತು ಆದಯ್ಯ ಕವಿ ಪ್ರಮುಖರು. ಇವರ ಸಾಹಿತ್ಯ ಕೃಷಿ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಯಾಗಿದೆ.
ಪುಲಿಗೆರೆ ಸೋಮನಾಥ ಅವರು ವಚನ ಮತ್ತು ಶೈವ ಭಕ್ತಿಯ ಪರಂಪರೆಯನ್ನು ಜನರಿಗೆ ತಲುಪಿಸಿದ ಮಹಾನ್ ಕವಿ ಎಂದು ಗುರುತಿಸಿಕೊಂಡಿದ್ದಾರೆ. ಸೋಮೇಶ್ವರ ಶತಕವು ಅತ್ಯಂತ ಜನಪ್ರಿಯವಾಗಿದ್ದು, ಜನಸಾಮಾನ್ಯರಿಗೆ ವಿವಿಧ ಉದಾಹರಣೆಗಳ ಮೂಲಕ ನೀತಿ ಬೋಧನೆ ಮಾಡುವಂತಿದೆ ಎಂದರು.
ಇನ್ನೊಂದೆಡೆ ಆದಯ್ಯ ಕವಿ ಅವರು ಕನ್ನಡ ಕಾವ್ಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಗ್ರಾಮೀಣ ಬದುಕು, ಭಕ್ತಿ ಹಾಗೂ ಸಾಮಾಜಿಕ ಚಿಂತನೆಗಳು ಅವರ ಕೃತಿಗಳ ಪ್ರಮುಖ ಅಂಶಗಳಾಗಿವೆ. ಪುಲಿಗೆರೆ ನಾಡಿನ ಸಾಹಿತ್ಯ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಈ ಇಬ್ಬರು ಕವಿಗಳ ಸೇವೆ ಅಪಾರವಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net