

ಲಕ್ಷ್ಮೇಶ್ವರ: ಉತ್ತರ ಕರ್ನಾಟಕದ ವಿಜಯಪುರ, ಬೆಳಗಾವಿ ಹಾಗೂ ಹುಬ್ಬಳ್ಳಿಯ ವಿಮಾನ(AIRPORT) ನಿಲ್ದಾಣಗಳಿಗೆ ಕ್ರಮವಾಗಿ ಜಗಜ್ಯೋತಿ ಶ್ರೀ ಬಸವಣ್ಣ, ವೀರರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಹೆಸರಿಡಬೇಕೆಂಬ ಜನಾಭಿಪ್ರಾಯಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಮನ್ನಣೆ ನೀಡಬೇಕು ಎಂದು ಶಿರಹಟ್ಟಿ, ಬಾಲೆಹೊಸೂರ ಮಠದ ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳು ಆಗ್ರಹಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ವಿಷಯದ ಬಗ್ಗೆ ವಿಧಾನ ಮಂಡಲದಲ್ಲಿ ಪ್ರಸ್ತಾಪಿಸಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ನಾಡಿನ ಕಲ್ಯಾಣ, ಶ್ರೇಯೋಭಿವೃದ್ಧಿಗೆ ತಮ್ಮನ್ನೇ ಸಮರ್ಪಿಸಿಕೊಂಡ ಇಂತಹ ಮಹನೀಯರ ಹೆಸರಿಡುವ ಮೂಲಕ ಅವರ ಜೀವನಾದರ್ಶ, ತತ್ವ, ಸಿದ್ಧಾಂತ, ಮೌಲ್ಯಗಳನ್ನು ಜಗತ್ತಿಗೆ ಪಸರಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ-ಕೇಂದ್ರದ ನಾಯಕರು ಗಮನ ಹರಿಸಬೇಕು ಎಂದರು.