ಲಕ್ಷ್ಮೇಶ್ವರ: ಕಳೆದ 2 ದಿನಗಳಿಂದ ಪಟ್ಟಣವೂ ಸೇರಿ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ರೈತರಲ್ಲಿ ಮಂದಹಾಸ ಮನೆ ಮಾಡಿದೆ. ಇಳೆ ತಂಪಾಗಿ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಈ ವರ್ಷ ಹೆಚ್ಚು ಬಿಸಿಲ ತಾಪ ಮತ್ತು ಕಳೆದ ವರ್ಷ ಹಿಂಗಾರಿನಲ್ಲಿ ಸಮೃದ್ಧ ಮಳೆಯಾಗದ್ದರಿಂದ ಕೆರೆ ಕಟ್ಟೆ-ಹಳ್ಳಗಳಲ್ಲಿ ನೀರಿಲ್ಲದೆ ಜನ, ಜಾನುವಾರು, ಕುರಿ, ಕಾಡು ಪ್ರಾಣಿ- ಪಕ್ಷಿಗಳು ನೀರಿನ ಬವಣೆಯಿಂದ ತತ್ತರಿಸುವಂತಾಗಿದೆ. ಇದೀಗ ಜಮೀನಿನ ತಗ್ಗು ಪ್ರದೇಶ, ಕೆರೆ, ಹಳ್ಳಗಳಲ್ಲಿ ಅಲ್ಪಸ್ವಲ್ಪ ನೀರು ಸಂಗ್ರಹವವಾಗಿ ಜನ ನಿಟ್ಟುಸಿರು ಬಿಡುವಂತಾಗಿದೆ.
ತಾಲೂಕಿನ ಯಳವತ್ತಿ, ಯತ್ನಳ್ಳಿ, ಮಾಗಡಿ, ಗೊಜನೂರ, ಅಕ್ಕಿಗುಂದ, ಆದ್ರಳ್ಳಿ, ಬಡ್ನಿ, ಬಟ್ಟೂರ, ಸೂರಣಗಿ, ಹುಲ್ಲೂರ, ಬಾಲೆಹೊಸೂರ, ಶಿಗ್ಲಿ, ದೊಡ್ಡೂರ, ರಾಮಗೇರಿ, ಬಸಾಪುರ, ಅಡರಕಟ್ಟಿ ಮೊದಲಾದೆಡೆ ಉತ್ತಮ ಮಳೆಯಾಗಿದೆ.
ಮುಂಗಾರಿನ ಮೊದಲ ಮಳೆಯಿಂದ ಪಟ್ಟಣದಲ್ಲಿ ಪೌರಕಾರ್ಮಿಕರ ಕೊರತೆಯಿದ ತ್ಯಾಜ್ಯದಿಂದ ತುಂಬಿದ್ದ ಚರಂಡಿಗಳ ಕೊಳಚೆ ನೀರು ರಸ್ತೆಯ ಮೇಲೆ ಹರಿದು ಸಂಚಾರಕ್ಕೆ ಅಡಚಣೆಯಾಯಿತು. ಎರಡು ದಿನಗಳಿಂದ ಹೆಚ್ಚಿನ ವೇಳೆ ವಿದ್ಯುತ್ ಸಂಪರ್ಕ ಕಡಿತದಿಂದ ಜನರು ಪರದಾಡಿದರು. ತಾಲೂಕಿನಲ್ಲಿನ ಬಹುತೇಕ ರಸ್ತೆಗಳು ಹದಗೆಟ್ಟಿದ್ದರಿಂದ ಸವಾರರು ತೊಂದರೆಪಟ್ಟರು.
ಮಳೆಯಾಗಿದ್ದರಿಂದ ಬೇಗ ಬಿತ್ತನೆ ಮಾಡಿದರೆ ಅನಕೂಲವಾಗಬಹುದು. ಕೃಷಿ ಇಲಾಖೆಯವರು ರಸಗೊಬ್ಬರದ ಕೊರತೆ, ಸಮಸ್ಯೆ ನಿವಾರಿಸುವ ಜತೆಗೆ ಸಹಾಯಧನದಲ್ಲಿ ಬಿತ್ತನೆ ಬೀಜ, ಯಂತ್ರೋಪಕರಣ ಪೂರೈಸಲು ಸಿದ್ಧತೆ, ತುರ್ತು ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರಾದ ಸೋಮನಗೌಡ್ರ ಪಾಟೀಲ, ಚನ್ನಪ್ಪ ಷಣ್ಮುಕಿ, ಬಾಪೂಗೌಡ ಭರಮಗೌಡ್ರ ಒತ್ತಾಯಿಸಿದ್ದಾರೆ.