ಅಂತೂ ಧರೆಗಿಳಿದ ಮಳೆ ಮಣ್ಣೆತ್ತಿನ ಹಬ್ಬಕ್ಕೆ ಕಳೆ basavanna

ಲಕ್ಷ್ಮೇಶ್ವರ: ಮಣ್ಣೆತ್ತಿನ ಮೂರ್ತಿಗಳಿಗೆ ಬಣ್ಣ ಹಚ್ಚಿ, ಅಂತಿಮ ರೂಪ ನೀಡಲಾಗುತ್ತಿದೆ.
ಲಕ್ಷ್ಮೇಶ್ವರ: ಮಣ್ಣೆತ್ತಿನ ಮೂರ್ತಿಗಳಿಗೆ ಬಣ್ಣ ಹಚ್ಚಿ, ಅಂತಿಮ ರೂಪ ನೀಡಲಾಗುತ್ತಿದೆ.
Published on

ಪ್ರಮುಖ ಮುಖ್ಯಾಂಶಗಳು

  • ಲಕ್ಷ್ಮೇಶ್ವರ ಕುಂಬಾರರ ಮಣ್ಣೆತ್ತಿನ ಮೂರ್ತಿಗಳಿಗೆ ವಿವಿಧ ಜಿಲ್ಲೆಗಳಲ್ಲಿ ಬಲು ಬೇಡಿಕೆ
ಲಕ್ಷ್ಮೇಶ್ವರ: ಕೃಷಿಕರ ಬದುಕಿಗೆ ಆಧಾರವಾದ ಮಣ್ಣು ಮತ್ತು ರೈತರ ಜೀವನಾಡಿ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸುವ ಸಂಪ್ರದಾಯದ ಮಣ್ಣೆತ್ತಿನ ಅಮಾವಾಸ್ಯೆ (ಜುಲೈ 14) ಹಬ್ಬಕ್ಕಾಗಿ ಪಟ್ಟಣದ ಕುಂಬಾರರ ಮನೆಗಳಲ್ಲಿ ಮಣ್ಣೆತ್ತಿನ (ಬಸವಣ್ಣ) ಮೂರ್ತಿಗಳ ನಿರ್ಮಾಣ ಕಾರ್ಯ ಜೋರಾಗಿದೆ. 
ಮಣ್ಣೆತ್ತಿನ ಮೂರ್ತಿಗಳಿಗೆ ಬಣ್ಣ ಹಚ್ಚಿ, ಅಂತಿಮ ರೂಪ ನೀಡಲಾಗುತ್ತಿದೆ. ಮಣ್ಣೆತ್ತಿನ ಸಾವಿರಾರು ಸುಂದರ ಮೂರ್ತಿಗಳು ಕಣ್ಮನ ಸೆಳೆಯುತ್ತಿವೆ. ಲಕ್ಷ್ಮೇಶ್ವರದ ಎತ್ತುಗಳು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಪೂಜೆಗೊಳ್ಳಲು ಹೋಗುತ್ತವೆ.  
ಮಣ್ಣಿನ ಕೊರತೆ, ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಾಗೂ ತಯಾರಿಕಾ ವೆಚ್ಚ ಹೆಚ್ಚಳ ಇತರೆ ಕಾರಣಗಳಿಂದ ಮಣ್ಣೆತ್ತಿನ ಮೂರ್ತಿಗಳನ್ನು ಸಿದ್ಧಪಡಿಸುವ ಕಾರ್ಯದಿಂದ ಪಟ್ಟಣ, ಮಹಾನಗರಗಳ ಕಲಾವಿದರು, ಕುಂಬಾರರು ಹಿಂದೆ ಸರಿದಿದ್ದಾರೆ. ಆದರೆ, ಪಟ್ಟಣದ ಕುಂಬಾರ ಓಣಿಯ ಹತ್ತಾರು ಕುಟುಂಬಗಳು ಗಡಗಿ, ಒಲೆ, ಗಣಪತಿ, ಗೌರಿ, ರತಿ-ಮನ್ಮಥ, ಮಣ್ಣೆತ್ತಿನ ಮತ್ತು ನಾಗರ ಮೂರ್ತಿ ಹೀಗೆ ತಮ್ಮ ಸಾಂಪ್ರದಾಯಿಕ ಕಲೆ/ಉದ್ಯೋಗವನ್ನು ಅತ್ಯಂತ ಆಸಕ್ತಿ, ಪ್ರೀತಿಯಿಂದ ಮಾಡುತ್ತಾ ಬಂದಿದ್ದಾರೆ. ಇವರು ನಿರ್ಮಿಸಿದ ಗಣಪತಿ, ಮಣ್ಣೆತ್ತಿನ ಮೂರ್ತಿಗಳಿಗೆ ಉತ್ತಮ ಬೇಡಿಕೆ ಇದೆ. ಬೇರೆ ಜಿಲ್ಲೆಯ ಕಲಾವಿದರು ಇಲ್ಲಿಂದ ಸಗಟು (ಹೋಲ್‌ಸೇಲ್) ದರದಲ್ಲಿ ಖರೀದಿಸಿ ಮಾರಾಟ ಮಾಡುತ್ತಾರೆ.  
ಜೂನ್‌ನಲ್ಲಿ ಮಳೆ ಆಗದ್ದರಿಂದ ರೈತರ ಮುಖ ಬಾಡಿತ್ತು. ಇದೀಗ ಉತ್ತಮ ಮಳೆಯಾಗಿದ್ದರಿಂದ ರೈತರಲ್ಲಿ ಹೊಸ ಭರವಸೆ ಮೂಡಿದೆ.
ವಿವಿಧ ಜಿಲ್ಲೆಗಳಿಂದ ಬೇಡಿಕೆ: ಪಟ್ಟಣದ 20ಕ್ಕೂ ಹೆಚ್ಚು ಕುಂಬಾರ ಕುಟುಂಬಗಳು ಪ್ರತಿವರ್ಷ 50 ಸಾವಿರಕ್ಕೂ ಹೆಚ್ಚು ಮಣ್ಣೆತ್ತಿನ ಮೂರ್ತಿಗಳನ್ನು ಸಿದ್ಧಪಡಿಸುತ್ತಾರೆ. ಇಲ್ಲಿನ ಮೂರ್ತಿಗಳು ದಾವಣಗೆರೆ, ತುಮಕೂರು, ಹರಿಹರ, ರಾಣೆಬೆನ್ನೂರು, ಧಾರವಾಡ, ಶಿವಮೊಗ್ಗ, ಗದಗ, ಕೊಪ್ಪಳ, ಬೆಳಗಾವಿ, ಹಾವೇರಿ, ಹುಬ್ಬಳ್ಳಿ ಸೇರಿದಂತೆ ಹತ್ತಾರು ಜಿಲ್ಲೆ ಹಾಗೂ ಸುತ್ತಲಿನ ಗ್ರಾಮಗಳಿಗೆ ಸಾಗುತ್ತಿವೆ. ಮೂರ್ತಿಗಳ ತಯಾರಿಕೆಗೆ ವಿಶೇಷ ಗುಣಮಟ್ಟದ ಮಣ್ಣನ್ನು ತಿಂಗಳು ಮುಂಚಿತವಾಗಿಯೇ ಸಂಗ್ರಹಿಸಲಾಗುತ್ತದೆ. ಬಳಿಕ ಬಣ್ಣಗಳಿಂದ ಅಲಂಕರಿಸಿ ಕೊಂಬುಗಳಿಗೆ ಬಣ್ಣ, ಗಂಟೆಸರ, ಹಣೆಪಟ್ಟಿ, ಕಾಲ್ಗೆಜ್ಜೆ, ಮೂಗುದಾರ, ವಿಭೂತಿ, ಕಣ್ಣು, ಕಿವಿ, ಮೂಗು, ಬಾಯಿ ಮೊದಲಾದ ಅಲಂಕಾರ ನೀಡಿ ಜೀವಂತ ಬಸವಣ್ಣನಂತೆ ರೂಪಿಸಲಾಗುತ್ತದೆ. 
ಈ ಮೂರ್ತಿಗಳ ಮತ್ತೊಂದು ವಿಶೇಷ ಎಂದರೆ ಕೆಳಗೆ ಬಿದ್ದರೂ ಬೇಗ ಒಡೆಯುವುದಿಲ್ಲ, ವಷರ್ಪೂರ್ತಿ ಇಟ್ಟರೂ ಬಣ್ಣ ಮಾಸುವುದಿಲ್ಲ. ಜೋಡೆತ್ತಿನ ಸಣ್ಣ ಮೂರ್ತಿಗಳು 50 ರೂ.ನಿಂದ ಆರಂಭವಾಗಿ ಮಧ್ಯಮ ಗಾತ್ರದವು 80ರಿಂದ 100 ಹಾಗೂ 200 ರೂ.ಗೆ ಮಾರಾಟವಾಗುತ್ತವೆ. ದೊಡ್ಡ ಮೂರ್ತಿಗಳು 500 ರೂ.ವರಗೆ, ಚಕ್ಕಡಿಯೊಂದಿಗೆ ಸಿದ್ಧಪಡಿಸಿದ ಮೂರ್ತಿಗಳಿಗೆ 2,000 ರೂ.ರವರೆಗೂ ಮಾರಾಟವಾಗುತ್ತಿವೆ.
"

ಎತ್ತುಗಳು ರೈತರ ಜೀವನಾಡಿ. ಯಂತ್ರೋಪಕರಣ ಬಂದಿದ್ದರೂ ಕೃಷಿಯಲ್ಲಿ ಎತ್ತುಗಳ ಮಹತ್ವ ಕಡಿಮೆಯಾಗಿಲ್ಲ. ನಮ್ಮ ಬದುಕಿಗೆ ಹೆಗಲು ಕೊಡುವ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದಲೇ ಮಣ್ಣೆತ್ತಿನ ಅಮಾವಾಸ್ಯೆ ಆಚರಿಸುತ್ತೇವೆ. ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಜಾನುವಾರುಗಳ ಆರೋಗ್ಯಕ್ಕಾಗಿ ಮಣ್ಣೆತ್ತಿನ ಹಬ್ಬದ ದಿನ ಎಲ್ಲರೂ ಮನೆಯ ಜಗುಲಿ ಮೇಲೆ ಮಣ್ಣೆತ್ತಿನ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತೇವೆ.
 ಬಸವರಾಜ ಉಮಚಗಿರಮೇಶ ಶಿರಹಟ್ಟಿ-ರೈತರು ಲಕ್ಷ್ಮೇಶ್ವರ

"

ನಮ್ಮ ಹಿರಿಯರ ಕಾಲದಿಂದಲೂ ಕುಂಬಾರಿಕೆ ಮಾಡುತ್ತಾ ಬಂದಿದ್ದು, ಕಾಲ ಕ್ರಮೇಣ ಗಣಪತಿ, ಮಣ್ಣೆತ್ತಿನ ಮೂರ್ತಿಗಳ ತಯಾರಿಕೆಯೇ ನಮ್ಮ ಬದುಕಿನ ಆಧಾರವಾಗಿದೆ. ಉತ್ತಮ ಮಣ್ಣಿನ ಕೊರತೆ ಹಾಗೂ ಮಣ್ಣು ತರಲು ಇರುವ ನಿಯಮಗಳಿಂದ ತೊಂದರೆಯಾಗುತ್ತಿದೆ. ಅಲ್ಲದೆ, ಬಣ್ಣ, ಅಲಂಕಾರಿನ ಸಾಮಗ್ರಿಗಳ ಬೆಲೆ ಹೆಚ್ಚಳದ ನಡುವೆಯೂ ನಮ್ಮ ನಾಡಿನ ಹಬ್ಬಗಳ ಸಂಪ್ರದಾಯ ಉಳಿಸುವ ನಿಟ್ಟಿನಲ್ಲಿ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ. ಮಳೆ-ಬೆಳೆ ಚೆನ್ನಾಗಿ ಬಂದು ರೈತರ ಬದುಕು ಹಸನಾಗಲಿ ಎಂಬುದೇ ನಮ್ಮ ಹಾರೈಕೆ.
 ಕುಮಾರ ಕುಂಬಾರಫಕೀರೇಶ ಕುಂಬಾರ, ಮೂರ್ತಿ ತಯಾರಕರು


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net