ತಾಂತ್ರಿಕ ಜ್ಞಾನದೊಂದಿಗೆ ಕೌಶಲ ಬೆಳೆಸಿಕೊಳ್ಳಲಿ Technical skill
ಲಕ್ಷ್ಮೇಶ್ವರದ ಅಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಟೆಕ್-ಟು-ಕಾರ್ಪೊರೇಟ್ ಕಾರ್ಯಕ್ರಮದಲ್ಲಿ ಬೆಂಗಳೂರ ಟಾಟಾ ಸಂಸ್ಥೆಯ ನೇಮಕಾತಿ ವಿಭಾಗದ ಮುಖ್ಯಸ್ಥ ಕಿರಣ ಕುಮಾರ ಮತ್ತು ಪ್ರಾಚಾರ್ಯ ಡಾ. ಪರಶುರಾಮ ಬಾರಕಿ ವಿದ್ಯಾರ್ಥಿಗಳೊಂದಿಗೆ ಪಾಲ್ಗೊಂಡಿದ್ದರು.
ಲಕ್ಷ್ಮೇಶ್ವರ: ಪಟ್ಟಣದ ವೆಂಕಪ್ಪ ಅಗಡಿ ಮತ್ತು ಕಮಲಾ ಅಗಡಿ ತಾಂತ್ರಿಕ ಮಹಾವಿದ್ಯಾಯದ ತರಬೇತಿ ಮತ್ತು ಉದ್ಯೋಗ ನಿಯೋಜನಾ ವಿಭಾಗದಿಂದ ಟೆಕ್-ಟು-ಕಾರ್ಪೊರೇಟ್ ಕಾರ್ಪೊರೇಟ್ ಡೇ ಸೆಲೆಬ್ರೇಷನ್ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ಮುಖ್ಯ ಅತಿಥಿ ಬೆಂಗಳೂರಿನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆ ಪ್ರಾದೇಶಿಕ ಪ್ರತಿಭಾ ನೇಮಕಾತಿ ವಿಭಾಗದ ಮುಖ್ಯಸ್ಥ ಕಿರಣ್ ಕುಮಾರ್, ವಿದ್ಯಾರ್ಥಿಗಳ ನೇಮಕಾತಿಗೆ ಇರುವ ಅರ್ಹತೆ, ಅದಕ್ಕೆ ವಿದ್ಯಾರ್ಥಿಗಳು ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಿದರು. ವಿದ್ಯಾರ್ಥಿಗಳು ತಾಂತ್ರಿಕ ಜ್ಞಾನದೊಂದಿಗೆ ಉದ್ಯಮಕ್ಕೆ ಅಗತ್ಯವಾದ ಕೌಶಲಗಳನ್ನು ಬೆಳೆಸಿಕೊಳ್ಳಬೇಕು, ಯಾವುದೇ ಹುದ್ದೆಯಲ್ಲಿ ನೇಮಕಾತಿಯಾಗುವ ಮೊದಲು ವಿದ್ಯಾರ್ಥಿಗಳು ಎದುರಿಸುವ ಪ್ರಶ್ನೆಗಳಿಗೆ ಸಮರ್ಪಕವಾಗಿ ಸಿದ್ಧರಾಗಬೇಕು. ಇದು ಸ್ಪರ್ಧಾತ್ಮಕ ಜಗತ್ತು, ಇಲ್ಲಿ ಸ್ವಲ್ಪ ಹಿನ್ನಡೆ ಕಂಡರೂ ಯಶಸ್ಸು ಕಾಣಲು ಪರದಾಡಬೇಕಾಗುತ್ತದೆ. ವಿದ್ಯಾರ್ಥಿಗಳು ಭವಿಷ್ಯ ಗಮನದಲ್ಲಿಟ್ಟುಕೊಂಡು ಓದಬೇಕು ಎಂದರು.
ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪರಶುರಾಮ ಬಾರ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡೀನ್ (ಶೈಕ್ಷಣಿಕ), ಡೀನ್ (ಸಂಶೋಧನೆ), ವಿವಿಧ ವಿಭಾಗಗಳ ಮುಖ್ಯಸ್ಥರು, ತರಬೇತಿ ಮತ್ತು ಉದ್ಯೋಗ ನಿಯೋಜನಾ ವಿಭಾಗದ ಸಂಯೋಜಕರು, ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.
ಎಲ್ಲ ವಿಭಾಗಗಳಿಂದ ತಲಾ 8 ವಿದ್ಯಾರ್ಥಿಗಳನ್ನು ಒಳಗೊಂಡ 28 ತಂಡಗಳು ಭಾಗವಹಿಸಿ, ಕೈಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ನವೀನ ಹಾಗೂ ಪ್ರಾಯೋಗಿಕ ಪರಿಹಾರ ಕ್ರಮ ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳ ಸೃಜನಶೀಲತೆ, ತಂಡದ ಕಾರ್ಯಪದ್ಧತಿ, ಸಂವಹನ ಕೌಶಲ ಹಾಗೂ ಸಮಸ್ಯೆ ಪರಿಹಾರ ಸಾಮರ್ಥ್ಯವನ್ನು ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಮಾಡಲಾಯಿತು.
ಕಾರ್ಯಕ್ರಮದ ಯಶಸ್ಸಿಗೆ ಆಡಳಿತ ಮಂಡಳಿ, ಮುಖ್ಯ ಅತಿಥಿಗಳು, ಪ್ರಾಂಶುಪಾಲರು, ಡೀನ್‌ಗಳು, ವಿಭಾಗಗಳ ಮುಖ್ಯಸ್ಥರು, ಬೋಧಕ ವೃಂದ, ವಿದ್ಯಾರ್ಥಿ ಸ್ವಯಂಸೇವಕರು ಹಾಗೂ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಉದ್ಯೋಗ ನಿಯೋಜನಾ ವಿಭಾಗದ ವತಿಯಿಂದ ಅಭಿನಂದಿಸಲಾಯಿತು.