ಲಕ್ಷ್ಮೇಶ್ವರದಲ್ಲಿ ನಸುಕಿನಲ್ಲಿ ಭಜನಾ ಪದ, ತಾಳದ ನೀನಾದ shravan bhajane

ಲಕ್ಷ್ಮೇಶ್ವರದಲ್ಲಿ ಶ್ರಾವಣ ಮಾಸದ ನಿಮಿತ್ತ ನಸುಕಿನ ಜಾವ ಸಂಚರಿಸುವ ಭಜನಾ ತಂಡಗಳ ವಿಶಿಷ್ಟ ಸಂಪ್ರದಾಯ.
ಲಕ್ಷ್ಮೇಶ್ವರದಲ್ಲಿ ಶ್ರಾವಣ ಮಾಸದ ನಿಮಿತ್ತ ನಸುಕಿನ ಜಾವ ಸಂಚರಿಸುವ ಭಜನಾ ತಂಡಗಳ ವಿಶಿಷ್ಟ ಸಂಪ್ರದಾಯ.
Published on

ಪ್ರಮುಖ ಮುಖ್ಯಾಂಶಗಳು

  • ಶ್ರಾವಣದ ಭಜನೆ ವಿಶೇಷ

ಲಕ್ಷ್ಮೇಶ್ವರ: ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಲಕ್ಷ್ಮೇಶ್ವರದ ವಿವಿಧ ಬಡಾವಣೆಗಳಲ್ಲಿ ಭಕ್ತಿಯ ವಾತಾವರಣ ಕಳೆಗಟ್ಟುತ್ತದೆ. ನಸುಕಿನ ಜಾವದಲ್ಲಿ ಆಯಾ ಓಣಿಯ ಭಜನಾ ಮಂಡಳಿ ಸದಸ್ಯರು ಒಂದೆಡೆ ಸೇರಿ ತಾಳ, ಜಾಗಟೆ, ಮದ್ದಳೆಗಳೊಂದಿಗೆ ಭಜನೆ ಮಾಡುತ್ತ ಪ್ರಮುಖ ದೇವಸ್ಥಾನಗಳಿಗೆ ತೆರಳುವ ಸಂಪ್ರದಾಯ ಮಾಸದುದ್ದಕ್ಕೂ ನಡೆಯುತ್ತದೆ. 

ಪಟ್ಟಣದ ಸೊಪ್ಪಿನಕೇರಿಯ ಜಂತ್ಲಿ ಬಸವೇಶ್ವರ, ಇಟಗಿ ಬಸವೇಶ್ವರ, ಬಸ್ತಿಕೇರಿ, ಹಾವಳಿ ಆಂಜನೇಯ ದೇವಸ್ಥಾನ ಸೇರಿದಂತೆ ಹತ್ತಾರು ಕಡೆ ಭಜನಾ ಮಂಡಳಿಯವರು ನಿತ್ಯ ಬೆಳಗಿನ ಜಾವ ಭಜನೆ ಮಾಡುತ್ತಾ ಪಟ್ಟಣದ ಸೋಮೇಶ್ವರ, ವೀರಭದ್ರೇಶ್ವರ, ಆಂಜನೇಯ, ಈಶ್ವರ ಪ್ರಮುಖ ದೇವಸ್ಥಾನಗಳಿಗೆ ತೆರಳುತ್ತಾರೆ, ಬಳಿಕ ತಮ್ಮ ಓಣಿಗೆ ಮರಳುತ್ತಾರೆ. ಶ್ರಾವಣದಲ್ಲಿ ನಸುಕಿನ ಜಾವ ಮೊಳಗುವ ಭಜನೆಯ ನಾದ, ತಾಳ, ಜಾಗಟೆಗಳ ಸದ್ದು ಹಾಗೂ ದೇವರ ನಾಮಸ್ಮರಣೆ ಇಡೀ ಬಡಾವಣೆಯಲ್ಲೇ ಆಧ್ಯಾತ್ಮಿಕ ವಾತಾವರಣ ನಿರ್ಮಿಸುತ್ತದೆ.
ಬಿಳಿ ಬಟ್ಟೆ, ಕೇಸರಿ ಶಾಲು: 
ಭಜನಾ ಸೇವೆಯಲ್ಲಿ ಆಯಾ ಓಣಿಯ ಹಿರಿಯರು, ಯುವಕರು ಹಾಗೂ ಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳುವುದು ವಿಶೇಷ. ಬಿಳಿ ಬಟ್ಟೆ ಧರಿಸಿ, ಕೇಸರಿ ಶಾಲು ಹೊದ್ದು ಭಜನಾ ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಾರೆ. 
ಯುವಕರ ಪಾಲ್ಗೊಳ್ಳುವಿಕೆ ಕಡಿಮೆ:
ಸಾಂಪ್ರದಾಯಿಕ ಭಜನಾ ಪರಂಪರೆಯ ಮುಂದುವರಿಕೆಗೆ ಸವಾಲುಗಳು ಎದುರಾಗುತ್ತಿವೆ. ಯುವಕರು ಮೊಬೈಲ್ ಬಳಕೆ ಹಾಗೂ ವಿವಿಧ ದುಶ್ಚಟಗಳತ್ತ ಹೆಚ್ಚು ಆಕರ್ಷಿತರಾಗುತ್ತಿರುವ ಪರಿಣಾಮ ಭಜನಾ ಮಂಡಳಿಗಳಲ್ಲಿ ಯುವಕರ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತಿದೆ. ಇದರಿಂದ ಹಲವು ಭಜನಾ ಸಂಘಗಳು ನಿಧಾನವಾಗಿ ತೆರೆಮರೆಗೆ ಸರಿಯುತ್ತಿರುವುದು ಆತಂಕದ ಸಂಗತಿಯಾಗಿದೆ.
ನಮ್ಮ ಓಣಿಯಲ್ಲಿ ಹಿಂದಿನಿಂದ ಪಾಲಿಸಿಕೊಂಡು ಬಂದಿರುವ ಭಜನಾ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಬರಲಾಗುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಯುವಕರ ಸಂಖ್ಯೆ ಕಡಿಮೆ ಆಗುತ್ತಿದೆ. ಪರಿಣಾಮವಾಗಿ ಹಲವು ಭಜನಾ ಸಂಘಗಳು ಕ್ರಮೇಣ ತೆರೆಮರೆಗೆ ಸರಿಯುತ್ತಿವೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಜನಾ ಪರಂಪರೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸುವ ಅಗತ್ಯವಿದೆ ಎನ್ನುತ್ತಾರೆ ಚನ್ನಪ್ಪ ಚಿಂಚಲಿ, ಭರಮಪ್ಪ ಕೊಡ್ಲಿ. 
ಶ್ರಾವಣ ಮಾಸದ ನಸುಕಿನಲ್ಲಿ ಲಕ್ಷ್ಮೇಶ್ವರದ ಬೀದಿಗಳಲ್ಲಿ ಮೊಳಗುವ ಭಜನೆಯ ನಾದ, ಕೇಸರಿ ಶಾಲು ಧರಿಸಿ ಸಾಗುವ ಭಕ್ತರ ಸಾಲು ಹಾಗೂ ಮಕ್ಕಳ ಉತ್ಸಾಹ ಇವೆಲ್ಲವೂ ಪಟ್ಟಣದ ಭಕ್ತಿ ಪರಂಪರೆಗೆ ಸಾಕ್ಷಿಯಾಗಿವೆ. ಈ ಪರಂಪರೆ ಮುಂದಿನ ಪೀಳಿಗೆಗೂ ಉಳಿಯಬೇಕೆಂಬುದು ಭಕ್ತರ ಆಶಯವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net