ಸೌಲಭ್ಯಗಳಿಲ್ಲದೆ ಬಡವಾಗುತ್ತಿವೆ ಬಡಾವಣೆಗಳು!: Lack of basic amenities

ರಸ್ತೆ ಪಕ್ಕದ ಚರಂಡಿಗಳಲ್ಲಿ ಆಳೆತ್ತರ ಕಸ ಬೆಳೆದು ನೀರು ಹರಿದು ಹೋಗದಂತಾಗಿರುವುದು.
ರಸ್ತೆ ಪಕ್ಕದ ಚರಂಡಿಗಳಲ್ಲಿ ಆಳೆತ್ತರ ಕಸ ಬೆಳೆದು ನೀರು ಹರಿದು ಹೋಗದಂತಾಗಿರುವುದು.
Published on
ಮಲ್ಲು ಕಳಸಾಪುರಬ ಲಕ್ಷ್ಮೇಶ್ವರ
ಲಕ್ಷ್ಮೇಶ್ವರ ಪಟ್ಟಣವು ದಿನದಿಂದ ದಿನಕ್ಕೆ ವಿಸ್ತರಿಸುತ್ತಿದೆ. ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಜನಸಂಖ್ಯೆ ಬೆಳೆಯುತ್ತಿದೆ. ಆದರೆ, ಪಟ್ಟಣದ ಅಭಿವೃದ್ಧಿಯ ವೇಗಕ್ಕೆ ತಕ್ಕಂತೆ ಮೂಲ ಸೌಲಭ್ಯಗಳಿಲ್ಲದೇ ಜನರು ಹತ್ತಾರು ವರ್ಷಗಳಿಂದ ಪರಿತಪಿಸುತ್ತಿದ್ದಾರೆ. ಪಟ್ಟಣದ ಬಹುತೇಕ ಬಡಾವಣೆಗಳ ಜನರು ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿದೀಪ ಹಾಗೂ ಸ್ವಚ್ಛತೆ ಎಂಬ ಕನಿಷ್ಠ ನಾಗರಿಕ ಹಕ್ಕುಗಳಿಂದ ವಂಚಿತರಾಗಿದ್ದಾರೆ.
ಪಟ್ಟಣದಲ್ಲಿನ ಈಶ್ವರ, ಸೋಮೇಶ್ವರ, ಬಸವೇಶ್ವರ, ಕೌಡೇಶ್ವರಿ, ರಂಭಾಪುರಿ, ಗಡ್ಡದೇವರಮಠ, ಮುಕ್ತಿ ನಗರ, ಜನ್ನತ್ ನಗರ, ಕರೆಗೋರಿ ಪ್ಲಾಟ್, ಆಶ್ರಯ ಬಡಾವಣೆ ಸೇರಿದಂತೆ ಅನೇಕ ಪ್ರದೇಶಗಳ ಸ್ಥಿತಿ ಒಂದೇ ಕಥೆ ಹೇಳುತ್ತಿದೆ. ಮಳೆ ಬಂದರೆ ರಸ್ತೆಗಳು ಕೆಸರಿನ ಕೊಳವಾಗುತ್ತವೆ. ಚರಂಡಿಗಳಿಲ್ಲದೆ ಕೊಳಚೆ ನೀರು ಮನೆಗಳ ಮುಂದೆ ನಿಂತು ದುರ್ವಾಸನೆ ಹರಡುತ್ತದೆ. ಬೀದಿ ದೀಪಗಳಿಲ್ಲದೆ ರಾತ್ರಿ ಕತ್ತಲೆ ಆವರಿಸುತ್ತದೆ. ಚರಂಡಿ, ಖಾಲಿ ನಿವೇಶನಗಳ ಗಿಡಗಂಟೆಗಳಲ್ಲಿ ಹಾವು-ಚೇಳುಗಳು ಆಶ್ರಯ ಪಡೆಯುತ್ತವೆ. ಬೀದಿ ನಾಯಿಗಳು ಮತ್ತು ಹಂದಿಗಳ ಹಾವಳಿ ಸಾರ್ವಜನಿಕರ ನೆಮ್ಮದಿ ಕಸಿದುಕೊಂಡಿದೆ. ರಸ್ತೆಗಳು ಕೊರಲು, ಕಂದಕ, ಗಿಡ ಗಡೆಗಳಿಂದ ಕೂಡಿದ್ದು ಸಂಚಾರಕ್ಕಾಗಿ ಹರಸಾಹಸವನ್ನೇ ಪಡಬೇಕಾಗಿದೆ. ದೇವರ ಹೆಸರಿನ ಬಡಾವಣೆಗಳಲ್ಲಿ ದೇವರ ಅನುಗ್ರಹಕ್ಕಾಗಿ ಅಲ್ಲ, ಅಭಿವೃದ್ಧಿಯ ಅನುಗ್ರಹಕ್ಕಾಗಿ ಜನರು ಕಾಯುವ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ.
ಯೋಜನಾರಹಿತ ನಗರಾಭಿವೃದ್ಧಿಯ ದುರಂತವೂ ಹೌದು. ಆಶ್ರಯ ಯೋಜನೆಗಳು ಹಾಗೂ ಎನ್.ಎ. ನಿವೇಶನಗಳಲ್ಲಿ ಮೂಲ ನಕ್ಷೆ, ರಸ್ತೆ ಮತ್ತು ಚರಂಡಿಗಳ ವ್ಯವಸ್ಥೆಯನ್ನು ಕಡೆಗಣಿಸಿ ಮನೆಗಳು ನಿರ್ಮಾಣಗೊಂಡಿರುವುದರಿಂದ ಈಗ ಅಭಿವೃದ್ಧಿ ಕಾಮಗಾರಿಗಳಿಗೆ ತಾಂತ್ರಿಕ ಅಡ್ಡಿಗಳು ಎದುರಾಗಿವೆ. ಇಂತಹ ಅವ್ಯವಸ್ಥೆಗೆ ಯಾರು ಹೊಣೆ ಎಂಬ ಪ್ರಶ್ನೆಗೆ ಉತ್ತರ ಇಲ್ಲದಂತಾಗಿದೆ.
ಚುನಾವಣೆ ವೇಳೆ ಭರವಸೆಗಳ ಮಹಾಪೂರವೇ ಹರಿಯುತ್ತವೆ. ಆದರೆ, ಚುನಾವಣೆ ಮುಗಿದ ನಂತರ ಅಭಿವೃದ್ಧಿಯ ಹೆಜ್ಜೆಗಳು ಮಾತ್ರ ಆ ಬಡಾವಣೆಗಳತ್ತ ಸುಳಿಯಲ್ಲ. ತೆರಿಗೆ ಪಾವತಿಸುವ ನಾಗರಿಕರಿಗೆ ಕನಿಷ್ಠ್ಠ ಸೌಲಭ್ಯಗಳನ್ನೂ ಒದಗಿಸಲಾಗದಿದ್ದರೆ ಅದು ಆಡಳಿತದ ವೈಫಲ್ಯವೇ ಸರಿ. ಜನರ ಸಹನೆಯೂ ಒಂದು ಮಿತಿಯವರೆಗೆ ಮಾತ್ರ. ಸಮಸ್ಯೆಗಳು ವಷರ್ದಿಂದ ವಷರ್ಕ್ಕೆ ಮುಂದುವರಿದರೆ ಅಸಮಾಧಾನ ಸಹಜವಾಗಿಯೇ ಪ್ರತಿಭಟನೆಗೆ ದಾರಿ ಮಾಡಿಕೊಡುತ್ತದೆ. ಅಭಿವೃದ್ಧಿ ಎಂಬುದು ಭಾಷಣಗಳಲ್ಲಿ ಅಲ್ಲ, ಜನರ ಬದುಕಿನಲ್ಲಿ ಕಾಣಬೇಕು.
---
ಕೋಟ್-1
"

ಲಕ್ಷ್ಮೀನಗರದಲ್ಲಿ ಹತ್ತಾರು ವರ್ಷಗಳ ಹಿಂದೇಯೇ ಅಗೆದ ಕಚ್ಚಾ ಗಟಾರದಲ್ಲಿ ಆಳೆತ್ತರ ಗಿಡಗಂಟೆ ಬೆಳೆದು, ಗಲೀಜು ನೀರು ನಿಂತು ಸೊಳ್ಳೆ, ವಿಷಜಂತುಗಳು ಭಯದಲ್ಲಿ ಮತ್ತು ಹಂದಿಗಳ ಕಾಟ, ಸಂಕಷ್ಟದಿಂದ ಬದುಕುತ್ತಿದ್ದೇವೆ. ಸಂಬಂಧಿಸಿದ ಅಧಿಕಾರಿಗಳಿಗೆ ಸಮಸ್ಯೆ ಹೇಳಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ನಮ್ಮ ಸಮಸ್ಯೆಗಳಿಗೆ ಪರಿಹಾರ ಕೊಡಲಿ

— ರಮೇಶ ಬಾವಿಕಟ್ಟಿ-, ಲಕ್ಷ್ಮೀ ನಗರ ನಿವಾಸಿ
"

ಹೊಸ ಬಡಾವಣೆಗಳಲ್ಲಿ ತಾತ್ಕಾಲಿಕವಾಗಿ ಕಚ್ಚಾ ರಸ್ತೆ, ಚರಂಡಿ ನಿರ್ಮಾಣ ಮಾಡಲಾಗುವುದು. ಕ್ರಿಯಾಯೋಜನೆ ಸಿದ್ಧ್ದಪಡಿಸಿ 16ನೇ ಹಣಕಾಸಿನಲ್ಲಿ ಆದ್ಯತೆಯಾನುಸಾರ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. ಚರಂಡಿಗಳಲ್ಲಿ ಬೆಳೆದ ಗಿಡಗಂಟೆ-ಕಸ, ತ್ಯಾಜ್ಯ ಸ್ವಚ್ಛಗೊಳಿಸಲಾಗುವ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೊಳ್ಳಲಾಗುವುದು.

— ಪರಶುರಾಮ ಗುಡಾದರಿ, ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net