ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ
ಕೊಬ್ಬಿನ ಅಂಶ, ಹೃದಯಾಘಾತ, ಕೆಂಪು ರಕ್ತಕಣಗಳ ಉತ್ಪತ್ತಿ ಹೀಗೆ ಅನೇಕ ಕಾಯಿಲೆಗಳನ್ನು ವಾಸಿಮಾಡಬಲ್ಲ ಕರ್ಚಿಕಾಯಿಗೆ ಇದೀಗ ಎಲ್ಲೆಡೆ ಭಾರಿ ಬೇಡಿಗೆ ಬಂದಿದೆ.
ನರೇಗಲ್ ಹೋಬಳಿಯ ಎರೆ ಭೂಮಿಯಲ್ಲಿ ಅಧಿಕವಾಗಿ ನೈಸರ್ಗಿಕವಾಗಿಯೇ ಬೆಳೆಯುತ್ತದೆ. ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಕೃಷಿಕರ ಪಾಲಿಗೆ ಆದಾಯದ ಮೂಲವಾಗಿದೆ.
ನರೇಗಲ್ಲ ಹೋಬಳಿ ವ್ಯಾಪ್ತಿಯ ಬೂದಿಹಾಳ, ತೋಟಗಂಟಿ, ಹಾಲಕೆರೆ, ಜಕ್ಕಲಿ, ಮಾರನಬಸರಿ, ಅಬ್ಬಿಗೇರಿ, ನಿಡಗುಂದಿ, ನಿಡಗುಂದಿಕೊಪ್ಪ, ಕಳಕಾಪುರ, ಹೊಸಳ್ಳಿ, ಯರೇಬೇಲೇರಿ, ಕುರುಡಗಿ ಗ್ರಾಮಗಳ ವ್ಯಾಪ್ತಿಗೆ ಒಳಪಡುವ ಬಯಲು ಸೀಮೆಯ ಮಳೆಯಾಶ್ರಿತ ಜಮೀನುಗಳಲ್ಲಿ ಯಾವುದೇ ಆರೈಕೆ, ಗೊಬ್ಬರ, ಬಿತ್ತನೆ ಬೇಡದೆ ಬೆಳೆಯುವ ಅಪಾರ ಪ್ರಮಾಣದಲ್ಲಿ ಬೆಳೆಯು ಔಷಧ ತರಕಾರಿಯಾಗಿದೆ. ನೆಲದಲ್ಲಿ ಬಳ್ಳಿಯ ರೂಪದಲ್ಲಿ ಹರಡುವ ಕರ್ಚಿಕಾಯಿ ಸಸ್ಯ ಉಳಿದ ಸಮಯದಲ್ಲಿ ಗಡ್ಡೆಯ ರೂಪದಲ್ಲಿ ಜಮೀನ ಅಡಿಯಲ್ಲಿ ಅಡಗಿರುತ್ತದೆ. ಹಲವಾರು ರೈತರು ಇದೊಂದು ಕಳೆ ಸಸ್ಯ ಎಂದು ಭಾವಿಸುತ್ತಾರೆ. ಆದರೆ, ಶತಮಾನಗಳಿಂದ ಕರ್ಚಿಕಾಯಿ ಇಂತಹ ಹಲವಾರು ಅಡಚಣೆಗಳ ನಡುವೆ ಬೇಸಿಗೆಯ ಸಂದರ್ಭದಲ್ಲಿ ಉದುರುವ ಕೆಲವು ಹನಿಗಳಿಂದ ಭೂಮಿಯಲ್ಲಿ ಅಡಗಿ ಕುಳಿತ ಗಡ್ಡೆ ಮರು ಜೀವ ಪಡೆದು ಸಮೃದ್ಧವಾಗಿ ಬೆಳೆದು ರುಚಿಕರ ಆಹಾರವಾಗಿ ದೊರೆಯುತ್ತದೆ.
ಕೆಜಿಗೆ 100-150 ರೂ.: ಕೆಲವು ಮಹಿಳೆಯರು ಕರ್ಚಿಕಾಯಿಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿ ಗಾಡಿ ಮೂಲಕ ಮಾರಾಟ ಮಾಡುವ ಸಂಚಾರಿ ವ್ಯಾಪಾರಸ್ಥರು ಮನೆಮನೆಗೆ ಹೋಗಿ ಪ್ರತಿ ಕೆಜಿಗೆ 100 ರಿಂದ 150 ರೂ. ವರೆಗೆ ಮಾರಾಟ ಮಾಡುತ್ತಾರೆ. ಕರ್ಚಿಕಾಯಿ ಒಟ್ಟಾಗಿದ್ದರೆ ಉಂಟಾಗುವ ಕಾವಿನಿಂದ ಬೀಜಗಳು ಒಡೆದು ಹೋಗುತ್ತವೆ. ಆಗ ಪಲ್ಯ ಮಾಡಲು ಬರುವುದಿಲ್ಲ. ಹಾಗಾಗಿ ಬೇಗನೆ ಮಾರಾಟ ಮಾಡುವ ಉದ್ದೇಶದಿಂದ ಕೆಲವೊಮ್ಮೆ ಕಡಿಮೆ ಬೆಲೆಗೂ ಮಾರಾಟ ಮಾಡುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ರೈತ ಮಹಿಳೆ ಫಕೀರವ್ವ ತಳವಾರ.
ಔಷಧೀಯ ಗುಣ: ಔಷಧೀಯ ಗುಣಗಳ ಆಗರವಾಗಿರುವ ಕರ್ಚಿಕಾಯಿಯನ್ನು ರಕ್ತನಾಳಗಳಲ್ಲಿ ತುಂಬಿರುವ ಕೊಬ್ಬಿನ ಅಂಶವನ್ನು ಪರಿಣಾಮಕಾರಿಯಾಗಿ ಹೋಗಲಾಡಿಸುತ್ತದೆ. ಹೃದಯಾಘಾತವನ್ನು ತಡೆಗಟ್ಟುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಕೆಂಪು ರಕ್ತಕಣಗಳ ಉತ್ಪತ್ತಿಗೆ ಸಹಕರಿಸಿ ಉತ್ತೇಜನ ನೀಡುತ್ತದೆ. ಕೀಲು, ಸಂಧು ನೋವುಗಳ ನಿವಾರಣೆಗೂ, ಯಕೃತ್ ಸಂರಕ್ಷಕವಾಗಿಯೂ, ಮೂತ್ರಪಿಂಡದ ಹರಳುಗಳನ್ನು ಕರಗಿಸಲೂ ಬಳಕೆಯಾಗುತ್ತದೆ. ಕರ್ಚಿಕಾಯಿ ಸೇವನೆಯಿಂದ ಹೊಟ್ಟೆಯ ಜಂತುಗಳು ನಾಶವಾಗುತ್ತವೆ. ಇದನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ ಎನ್ನುವ ಪಾರಂಪರಿಕ ನಂಬಿಕೆ ಇಂದಿಗೂ ಜನರಲ್ಲಿ ಉಳಿದಿದೆ.