Hindu Samajotsava: ದೇವರ ಕೋಣೆಗೆ ಸೀಮಿತವಾಗಲಿ ಜಾತಿ

 ಲಕ್ಷ್ಮೇಶ್ವರ ತಾಲೂಕಿನ ಪು. ಬಡ್ನಿ ಗ್ರಾಮದಲ್ಲಿ ಹಿಂದೂ ಸಮಾಜೋತ್ಸವ ಅಂಗವಾಗಿ ಹೊಸರಿತ್ತಿಯ ಶ್ರೀ ಗುದ್ದಲಿ ಶಿವಯೋಗೇಶ್ವರ ಮಹಾಸ್ವಾಮಿಗಳು ಗೋವಿಗೆ ಪೂಜೆ ಸಲ್ಲಿಸಿದರು.
ಲಕ್ಷ್ಮೇಶ್ವರ ತಾಲೂಕಿನ ಪು. ಬಡ್ನಿ ಗ್ರಾಮದಲ್ಲಿ ಹಿಂದೂ ಸಮಾಜೋತ್ಸವ ಅಂಗವಾಗಿ ಹೊಸರಿತ್ತಿಯ ಶ್ರೀ ಗುದ್ದಲಿ ಶಿವಯೋಗೇಶ್ವರ ಮಹಾಸ್ವಾಮಿಗಳು ಗೋವಿಗೆ ಪೂಜೆ ಸಲ್ಲಿಸಿದರು.
Published on
ಲಕ್ಷ್ಮೇಶ್ವರ: ಪ್ರತಿಯೊಬ್ಬ ಹಿಂದೂ ತಮ್ಮ ಜಾತಿ-ಉಪಜಾತಿ ಮರೆತು ನಾವೆಲ್ಲ ಒಂದು, ನಾವೆಲ್ಲ ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಂಡು ಅದರಂತೆ ಬಾಳಿದಾಗ ಮಾತ್ರ ನಮ್ಮ ಒಗ್ಗಟ್ಟಿನ ಶಕ್ತಿಗೆ ಯಾವ ದುಷ್ಟಶಕ್ತಿಗಳು ಏನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ಯುವ ವಾಗ್ಮಿ ಕು. ಹಾರಿಕಾ ಮಂಜುನಾಥ ಹೇಳಿದರು.
ತಾಲೂಕಿನ ಪು. ಬಡ್ನಿ ಗ್ರಾಮದಲ್ಲಿ ಏರ್ಪಡಿಸಿದ್ದ ಹಿಂದೂ ಸಮಾಜೋತ್ಸವದ ಧರ್ಮಸಭೆಯಲ್ಲಿ ಅವರು ಮಾತನಾಡಿದರು. ಎಲ್ಲ ಹಿಂದೂಗಳ ಒಳಜಾತಿ ವಿಷಯ ಮನೆಯ ದೇವರ ಕೋಣೆಗೆ ಮಾತ್ರ ಸೀಮಿತವಾಗಬೇಕು. ಮನೆಯಿಂದ ಹೊರಗೆ ನಾವೆಲ್ಲರೂ ಹಿಂದೂ ಎಂಬ ಮನೋಭಾವ ಅಂತರ್ಗತವಾಗಬೇಕು. ಹಿಂದೂ ಧರ್ಮದ ವೈಭವಕ್ಕೆ ಧಾರ್ಮಿಕ ಕ್ಷೇತ್ರಗಳೇ ಕಾರಣ. ಸನಾತನ ಹಿಂದೂ ಧರ್ಮ ಸಂರಕ್ಷಣೆ ಆದಾಗ ಮಾತ್ರ ದೇಶ ಸುರಕ್ಷಿತವಾಗಿರುತ್ತದೆ. ಧರ್ಮ ಜಾಗೃತಿಗಾಗಿ ಪ್ರತಿಯೊಬ್ಬ ಹಿಂದೂವಿನ ಮನೆಯಲ್ಲಿ ನಿತ್ಯ ಪೂಜೆ, ಧ್ಯಾನ, ಕುಂಕುಮ, ವಿಭೂತಿ ಧಾರಣೆಯಾಗಬೇಕು. ಆರ್‌ಎಸ್‌ಎಸ್ 100ನೇ ವರ್ಷ ಪೂರೈಸಿದೆ. ಇಂದಿನ ಮಕ್ಕಳು ಹಿಂದೂ ಧರ್ಮ ಸಂರಕ್ಷಣೆಗೆ ಬದ್ದರಾಗಲಿ ಎಂದು ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದರು.
ಹೊಸರಿತ್ತಿಯ ಶ್ರೀ ಗುದ್ದಲಿ ಶಿವಯೋಗೇಶ್ವರ ಮಹಾಸ್ವಾಮಿಗಳು ಮಾತನಾಡಿ, ಹಿಂದೂ ಎಂದರೆ ಹಿಂಸೆಯಿಂದ ದೂರ ಇರುವುದು. ಅನ್ಯ ಪಂಥದವರು ಅದನ್ನೇ ದೌರ್ಬಲ್ಯ ಎಂದು ತಿಳಿದುಕೊಂಡಿವೆ. ಕೆಲವರು ಆರ್‌ಎಸ್‌ಎಸ್ ಬ್ಯಾನ್ ಮಾಡುವ ಕುರಿತು ಮಾತನಾಡುತ್ತಿರುವುದು ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳಲು. ಇವರಲ್ಲಿ ದೇಶ, ಧರ್ಮದ ಬಗ್ಗೆ ಚಿಂತನೆಯಿಲ್ಲ. ಭಾರತ ದೇಶದ ಮೇಲೆ ಲೆಕ್ಕವಿಲ್ಲದಷ್ಟು ದಾಳಿಯಾದರೂ ಹಿಂದೂ ಧರ್ಮ ನಶಿಸಿ ಹೋಗಿಲ್ಲ. ಹಿಂದೂ ಧರ್ಮ ಎಲ್ಲ ಧರ್ಮದವರನ್ನು ಅಪ್ಪಿಕೊಳ್ಳುತ್ತದೆ ಎಂದರು. ಸಂಕದಾಳದ ಹಾಲಸ್ವಾಮಿಮಠದ ವಾಗೀಶ ಪಂಡಿತಾರಾಧ್ಯ ಹಾಲಶಿವಾಯೋಗಿಗಳು ಮಾತನಾಡಿ, ಪ್ರತಿಯೊಬ್ಬ ಹಿಂದೂ ಮಕ್ಕಳಿಗೆ ಧರ್ಮದ ಸಂಸ್ಕಾರ ಬೆಳೆಸಬೇಕು. ಈ ನಿಟ್ಟನಲ್ಲಿ ಪಾಲಕರು, ಹಿಂದೂಪರ ಸಂಘಟನೆಗಳು, ಮಠಮಾನ್ಯಗಳ ಪಾತ್ರ ಮಹತ್ವದ್ದಾಗಿದೆ ಎಂದರು. ಧರ್ಮಸಭೆಗೂ ಮೊದಲು ಗ್ರಾಮದಲ್ಲಿ ಅದ್ದೂರಿಯಾಗಿ ಶೋಭಾಯಾತ್ರೆ ನಡೆಯಿತು. ಭಾರತಮಾತೆ, ಶ್ರೀರಾಮನ ಭಾವಚಿತ್ರದೊಂದಿಗೆ ಸಾಗಿದ ಮೆರವಣಿಗೆಗೆ ಪೂರ್ಣ ಕುಂಭ, ಭಜನೆ, ಡೊಳ್ಳು, ಜಾಂಜ್ ವಿವಿಧ ವಾದ್ಯಗಳು ಮೆರುಗು ಹೆಚ್ಚಿಸಿದ್ದವು. ಮೆರವಣಿಗೆಯಲ್ಲಿ ಲಕ್ಷ್ಮೇಶ್ವರ, ಅಡರಕಟ್ಟಿ, ಮಾಡಳ್ಳಿ, ಯತ್ತಿನಹಳ್ಳಿ, ಯಳವತ್ತಿ, ಗೊಜನೂರ, ಅಕ್ಕಿಗುಂದ, ಅಕ್ಕಿಗುಂದತಾಂಡಾ, ಶೆಟ್ಟಿಕೇರಿ, ಕುಂದ್ರಳ್ಳಿ, ಬಟ್ಟೂರ, ಸಂಕದಾಳ, ನಾದಿಗಟ್ಟಿ, ವಡ್ಡರಪಾಳ್ಯ, ಆದರಹಳ್ಳಿ, ಹಿರೇಮಲ್ಲಾಪೂರ, ಅಮರಾಪೂರ ಗ್ರಾಮಗಳ ಹಿಂದೂ ಬಾಂಧವರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net