ಮಲಪ್ರಭಾ ನದಿ ತಟದಲ್ಲಿರುವ ಹಳ್ಳಿಕೇರಿ ಓಣಿಯ ಅಲ್ಲಾಸಾಬ್ ಮಸೀದಿ ಐತಿಹಾಸಿಕ ಪ್ರತೀತಿ ಹೊಂದಿದೆ. ಈ ಮಸೀದಿಯ ಚಾಕರಿಯನ್ನು ಮುಸ್ಲಿಂ ಸಮಾಜದವರು ಮಾಡುತ್ತಿದ್ದರೆ ಮೊಹರಂನಲ್ಲಿ ಮಾತ್ರ ಕುರುಬ ಸಮಾಜದವರಿಂದಲೇ ಗುದ್ದಲಿ ಸೇವೆ ನಡೆಸಲಾಗುತ್ತಿದೆ. ಮಸೀದಿಯಲ್ಲಿ ಪ್ರತಿಷ್ಠಾಪಿಸಿದ ಪಂಜಾ (ಅಲಾಯಿ) ದೇವರುಗಳನ್ನು ಎಲ್ಲ ಸಮಾಜದವರು ಹೊತ್ತು ಸಾಗುವುದು ವಿಶೇಷ. ಮೊಹರಂ ಮೆರವಣಿಗೆಯಲ್ಲಿ ಸರ್ವ ಸಮಾಜದ ಗುರು- ಹಿರಿಯರು ಬಿದರಿನ ಕಟ್ಟಿಗೆಯಿಂದ ಡೋಲಿ ನಿರ್ಮಿಸಿ ಅದಕ್ಕೆ ಬಣ್ಣ-ಬಣ್ಣದ ಹಾಳೆ, ಗೊಂಡೆ, ಝರಿಗಳಿಂದ ಸಿಂಗರಿಸಿ ಮೆರವಣಿಗೆ ಮಾಡುತ್ತಿದ್ದರು. ಇಂದಿನ ಕಾಲದ ಯುವಕರು ಹಳೇ ಕಾಲದ ಬಿದಿರಿನ ಕಲಾಕುಸುರಿ ಸಂಪ್ರದಾಯಕ್ಕೆ ಒಗ್ಗೂಡುತ್ತಿಲ್ಲ. ಹನುಮಂತಪ್ಪ ಸುಂಕದ ಅವರು ತಮ್ಮ ಕುಟುಂಬಕ್ಕೆ ಮಕ್ಕಳಾಗಿ ಒಳ್ಳೆಯ ವಿದ್ಯಾಭ್ಯಾಸ ಕಲಿತು, ಸರ್ಕಾರಿ ನೌಕರಿ ದೊರೆತರೆ ಹೊಸದಾಗಿ ಡೋಲಿ ಮಾಡಿಸಿಕೊಡುವ ಹರಕೆ ಕಟ್ಟಿಕೊಂಡಿದ್ದರು. ಈಗ ಹನುಮಂತಪ್ಪ ಅವರ ಮಗಳು ಶಿಲ್ಪಾ ಸರ್ಕಾರಿ ನೌಕರಿಗೆ ಹಾಜರಾಗಿದ್ದು, ಎಲ್ಲ ಬೇಡಿಕೆಗಳು ಈಡೇರಿದ ಹಿನ್ನೆಲೆಯಲ್ಲಿ ಮಸೀದಿಗೆ 1.80 ಲಕ್ಷ ರೂಪಾಯಿ ವೆಚ್ಚದ ಡೋಲಿ ನಿರ್ಮಿಸಿಕೊಟ್ಟಿದ್ದಾರೆ. ಹೂವಿನ ಮಾಲೆ, ಝರಿ, ಬಣ್ಣ-ಬಣ್ಣದ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿರುವ ನೂತನ ಡೋಲಿಯ ಮೆರವಣಿಗೆ ಶುಕ್ರವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.