ನರಗುಂದ ತಾಲೂಕಿನ ಚಿಕ್ಕನರಗುಂದದ ಡಿ.ಎಸ್. ಕೆಂಚನಗೌಡ್ರ ಸರ್ಕಾರಿ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳು ಗುರುನಮನ ಗೀತೆ ಪ್ರಸ್ತುತಪಡಿಸಿದರು. ನಿವೃತ್ತ ಸಂಗೀತ ಶಿಕ್ಷಕ ಶ್ರೀನಿವಾಸ ಇನಾಂದಾರ, ರೇಣುಕಾ ಹೂಲಿ, ನಿರ್ಮಲಾ ಹನಸಿ, ಗೀತಾ ಕಂಬಳಿ ಇತರರಿದ್ದರು.
ನರಗುಂದ: ವಿಶ್ವ ಸಂಗೀತ ದಿನಾಚರಣೆ ಅಂಗವಾಗಿ ತಾಲೂಕಿನ ಚಿಕ್ಕನರಗುಂದ ಗ್ರಾಮದ ಡಿ.ಎಸ್. ಕೆಂಚನಗೌಡ್ರ ಸರ್ಕಾರಿ ಪ್ರೌಢ ಶಾಲೆಯಲ್ಲಿ 2002-03ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳು ನಿವೃತ್ತ ಸಂಗೀತ ಶಿಕ್ಷಕ (TEACHER) ಶ್ರೀನಿವಾಸ ಇನಾಂದಾರ ಅವರಿಗೆ ಗುರುನಮನ ಗೀತೆ ಪ್ರಸ್ತುತಪಡಿಸಿ ಅಭಿನಂದಿಸಿದರು.
ದ.ರಾ.ಬೇಂದ್ರೆ ಅವರ ರಚನೆಯ ಶ್ರೀಗುರುವೇ ಅರುವೆ ಶರಣಾಗಿ ಬರುವೆ ಗುರು ನಮನ ಭಾವ ಗೀತೆಯನ್ನು ಹಾಡಿದರು. ತಾವು ಕಲಿತ ತರಗತಿ ಕೋಣೆಯಲ್ಲಿ ಹಳೇಯ ಹಾರ್ಮೋನಿಯಂ ವಾದ್ಯದ ಶ್ರುತಿಯಲ್ಲಿ ತಮಗೆ ಸಂಗೀತ ಶಿಕ್ಷಣ ನೀಡಿದ ಪಂ. ಶ್ರೀನಿವಾಸ ಇನಾಮದಾರ ಎದುರಿನಲ್ಲಿ ಬೈರಾಗಿ ಭೈರವ ರಾಗದಲ್ಲಿ ನಿರರ್ಗಳವಾಗಿ ಗುರು ನಮನ ಗೀತೆ ಹಾಡಿ ಗಮನಸೆಲೆದರು.
ಶ್ರೀನಿವಾಸ ಇನಾಂದಾರ ಮಾತನಾಡಿ, ‘ಶ್ರದ್ಧೆ, ಭಕ್ತಿ ವಿನಮ್ರ ಮನೋಭಾವನೆಯಿಂದ ಸಂಗೀತ ಕಲಿಯುವ ವಿದ್ಯಾರ್ಥಿಗಳಿಗೆ ಸಂಗೀತದ ಶ್ರೇಷ್ಠತೆಯನ್ನು ಉಳಿಸಿ ಬೆಳೆಸಲು ಸಂಗೀತ ಕಛೇರಿಗಳು ಪ್ರೇರಣೆ ನೀಡುತ್ತವೆ. ಜತೆಗೆ ಗುರು ಶಿಷ್ಯರ ಶ್ರೇಷ್ಠತೆ ಸಾರುತ್ತವೆ’ ಎಂದರು.