ಕಡು ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ, ಶಾಲೆಗಳತ್ತ ಅವರನ್ನು ಸೆಳೆಯುವ ಉದ್ದೇಶದಿಂದ ಸರ್ಕಾರವು ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಇದೇ ಉದ್ದೇಶದಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ ಮಾಡಲಾಗುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ, ಕೆಲವು ಹಳ್ಳಿಗಳ ಮಕ್ಕಳು ಶಾಲೆಗೆ ಹೋಗಿ ಬರಬೇಕೆಂದರೆ ಕಿ.ಮೀ.ಗಟ್ಟಲೆ ನಡೆದುಕೊಂಡೆ ಹೋಗಬೇಕಾದ ಸ್ಥಿತಿ ಇದೆ. ಎಲ್ಲ ಕಡೆಗಳಲ್ಲೂ ಕೆಎಸ್‌ಆರ್‌ಟಿಸಿ ಬಸ್ ಅಥವಾ ಸಾರಿಗೆಯ ವ್ಯವಸ್ಥೆ ಇರುವುದಿಲ್ಲ. ಹೀಗೆ ನಡೆದುಕೊಂಡು ಹೋಗುವ ಮಕ್ಕಳಿಗೆ ಶೂ, ಸಾಕ್ಸ್ ಸಕಾಲಕ್ಕೆ ದೊರೆತರೆ ಅನುಕೂಲ ಆಗುತ್ತದೆ. ಸರ್ಕಾರದ ವಿಳಂಬ ಧೋರಣೆಗೆ ಪೋಷಕರು ಹಾಗೂ ಪ್ರಜ್ಞಾವಂತ ವಲಯದಿಂದ ಅಸಮಾಧಾನ ವ್ಯಕ್ತವಾಗಿದೆ.