ನರೇಗಲ್ಲ:ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ (GOLD) ಮನೆಯೊಂದರಲ್ಲಿ ಕಳ್ಳತನ ವಾಗಿದ್ದ 67.4 ಗ್ರಾಂ ಬಂಗಾರದ (GOLD) ಆಭರಣಗಳನ್ನು ಪತ್ತೆ ಹಚ್ಚಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ನರಗುಂದ ನಿವಾಸಿ ಪ್ರಭಾವತಿ ಹಾಗೂ ರಾಜಸ್ಥಾನ ಮೂಲದ ಲಖನಸಿಂಗ್ ಠಾಕೂರ ಬಂಧಿತರು. ಇವರಿಂದ ಕದ್ದಿರುವ ಆಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.
ನರೇಗಲ್ಲ ಠಾಣೆ ವ್ಯಾಪ್ತಿಯ ಡ. ಸ. ಹಡಗಲಿ ಗ್ರಾಮದ ನಿಂಗನಗೌಡ ಪಾಟೀಲ ಅವರ ಮನೆಯಲ್ಲಿ ಒಟ್ಟು 67.4ಗ್ರಾಂ ಬಂಗಾರದ ಆಭರಣಗಳು ಕಳವಾಗಿದ್ದವು. ನಿಂಗನಗೌಡರ ತಂಗಿ ಹೆರಿಗೆಗೆಂದು ಡ.ಸ. ಹಡಗಲಿ ಗ್ರಾಮಕ್ಕೆ ಬಂದಿದ್ದರು. ಅವರ ಒಂದು ತಿಂಗಳ ಮಗುವನ್ನು ನೋಡಿ ಮಾತನಾಡಿಸಲು ಕಲ್ಮಠದವರಾದ, ಸದ್ಯಕ್ಕೆ ನರಗುಂದದಲ್ಲಿ ವಾಸವಿರುವ ಪ್ರಭಾವತಿ ರವಿಗೌಡ ಪಾಟೀಲ(30) ಆಗಮಿಸಿದ್ದು. ಈಕೆಯೇ ಆಭರಣಗಳನ್ನು ಕಳವು ಮಾಡಿರುವುದು ತನಿಖೆಯಿಂದ ದೃಢಪಟ್ಟಿದೆ.
ಬೇಕರಿ ಕೆಲಸಗಾರ ಸಹಕಾರ
ಪ್ರಭಾವತಿಗೆ ನರಗುಂದ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನ ಮೂಲದ ಲಖನ್ ಸಿಂಗ್ ಠಾಕೂರ ಎಂಬಾತನ ಪರಿಷಯವಿತ್ತು. ಆತ ತನಗೆ ಲಕ್ಷಾಂತರ ರೂಪಾಯಿ ಹಣದ ಅವಶ್ಯಕತೆ ಇದೆ. ನನಗೆ ಕೊಡು ಎಂದು ಪ್ರಭಾವತಿಗೆ ಬೆನ್ನು ಬಿದ್ದಿದ್ದ. ಈಕೆಯ ಬಳಿ ಅವನು ಕೇಳಿದಷ್ಟು ಹಣ ಇರಲಿಲ್ಲ. ಆತನಿಗೆ ಹಣ ಕೊಡುವ ಉದ್ದೇಶದಿಂದಲೇ ಡ.ಸ .ಹಡಗಲಿಯ ಸಹೋದರ ಸಂಬಂಧಿಯಾದ ನಿಂಗನಗೌಡ ಪಾಟೀಲರ ಮನೆಗೆ ಮಗುವನ್ನು ಮಾತನಾಡಿಸುವ ನೆಪದಿಂದ ಬಂದು ಅಲ್ಲಿಂದ ಆಕೆ ಆಭರಣಗಳನ್ನು ಕದ್ದಿದ್ದಾಳೆ.
ಅಕ್ಟೋಬರ್ 18ರವರೆಗೆ ಮನೆಯ ತಿಜೋರಿಯಲ್ಲಿಯೇ ಇದ್ದ ಆಭರಣಗಳು ಕಾಣೆಯಾದ ಸಂಗತಿ 20ರಂದು ಮನೆಯ ಯಜಮಾನಿಯ ಗಮನಕ್ಕೆ ಬಂದಿದೆ. 21ರಂದು ನರೇಗಲ್ಲ ಠಾಣೆಗೆ ಬಂದು ದೂರು ನೀಡಿದ್ದರು. ಕೂಡಲೇ ಪೊಲೀಸರು ತನಿಖೆ ಚುರುಕುಗೊಳಿಸಿ, ಪ್ರಭಾವತಿ ಬರುವವರೆಗೂ ಇದ್ದ ಆಭರಣಗಳು ನಂತರ ಕಾಣೆಯಾಗಿರುವ ಜಾಡು ಹಿಡಿದು ತನಿಖೆ ಆರಂಭಿಸಿದ್ದಾರೆ. ಪ್ರಭಾವತಿಗೆ ನೋಟಿಸ್ ನೀಡಿದ್ದಾರೆ. ಪೊಲೀಸ್ ನೋಟಿಸ್ ಬರುತ್ತಿದ್ದಂತೆಯೇ ನರಗುಂದ ಠಾಣೆಗೆ ಹೋಗಿ ಇನ್ನಿಲ್ಲದ ನಾಟಕವಾಡಿದ ಪ್ರಭಾವತಿಯ ಮೇಲೆ ಅನುಮಾನಗೊಂಡ ಪೊಲೀಸರು ನರೇಗಲ್ಲ ಪೊಲೀಸರನ್ನು ಸಂಪರ್ಕಿಸಿದ್ದಾರೆ. ನರೇಗಲ್ಲ ಪೊಲೀಸರ ತಂಡ ನರಗುಂದಕ್ಕೆ ತೆರಳಿ ಪ್ರಭಾವತಿ ಮತ್ತು ಲಖನ ಸಿಂಗ್‌ನನ್ನು ವಿಚಾರಣೆಗೆ ಒಳಪಡಿಸಿದೆ. ವಿಚಾರಣೆ ವೇಳೆ ಆರೋಪಿಗಳು ನಿಜ ಸಂಗತಿ ಬಾಯಿಬಿಟ್ಟಿದ್ದಾರೆ.
"
ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಿ ಅವರಿಂದ 67.4 ಗ್ರಾಂ ಬಂಗಾರದ ಆಭರಣ, 1,40,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಆಭರಣಗಳ ಮೌಲ್ಯ ಅಂದಾಜು 4,80, 323 ರೂಪಾಯಿ. ಠಾಣೆಯ ವ್ಯಾಪ್ತಿಯಲ್ಲಿ ಇತ್ತೀಚೆಗೆ ವರದಿಯಾದ ದೊಡ್ಡ ಕಳ್ಳತನದ ಪ್ರಕರಣ ಇದಾಗಿದೆ.