ಜಿಲ್ಲೆಯಾದ್ಯಂತ ಔಷಧಿ ಅಂಗಡಿ ಮಾಲೀಕರ ಪ್ರತಿಭಟನೆ: ಔಷಧಿ ವಿತರಣೆ ಸ್ಥಗಿತ, ಸಾರ್ವಜನಿಕರಿಗೆ ತೊಂದರೆ

ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಜಿಲ್ಲಾ ಔಷಧ ಅಂಗಡಿಗಳ ಮಾಲೀಕರು ಔಷಧ ಅಂಗಡಿಗಳನ್ನು ಮುಚ್ಚಿ ಬುಧವಾರ ಪ್ರತಿಭಟನೆ ನಡೆಸಿದರು.
ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಜಿಲ್ಲಾ ಔಷಧ ಅಂಗಡಿಗಳ ಮಾಲೀಕರು ಔಷಧ ಅಂಗಡಿಗಳನ್ನು ಮುಚ್ಚಿ ಬುಧವಾರ ಪ್ರತಿಭಟನೆ ನಡೆಸಿದರು.
Published on

ವಿಜಯವಾಣಿ ಸುದ್ದಿಜಾಲ ಗದಗ


ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯಾದ್ಯಂತ ಔಷಧಿ ಅಂಗಡಿ ಮಾಲೀಕರು ಬುಧವಾರ ಪ್ರತಿಭಟನೆ ನಡೆಸಿದರು. ಔಷಧಿ ವ್ಯಾಪಾರಿಗಳ ಸಂಘದ ಕರೆ ಮೇರೆಗೆ ನಗರ ಹಾಗೂ ತಾಲೂಕು ಕೇಂದ್ರಗಳಲ್ಲಿನ ಬಹುತೇಕ ಮೆಡಿಕಲ್ ಅಂಗಡಿಗಳು ಬಂದ್ ಆಗಿದ್ದು, ಸಾರ್ವಜನಿಕರು ಔಷಧಿಗಾಗಿ ಪರದಾಡುವಂತಾಯಿತು.

ಗದಗ ನಗರ ಸೇರಿದಂತೆ ಮುಂಡರಗಿ, ರೋಣ, ನರಗುಂದ, ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ಭಾಗಗಳಲ್ಲಿ ಔಷಧಿ ಅಂಗಡಿ ಮಾಲೀಕರು ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಕೆಲವೆಡೆ ವ್ಯಾಪಾರಿಗಳು ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತುರ್ತು ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಔಷಧಿ ವಹಿವಾಟು ಸ್ಥಗಿತಗೊಂಡಿತ್ತು.

ಔಷಧ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ರಾಮನಗೌಡ ಮಾತನಾಡಿ, ಇತ್ತೀಚೆಗೆ ಔಷಧಿ ವ್ಯಾಪಾರ ಕ್ಷೇತ್ರದ ಮೇಲೆ ಹೆಚ್ಚುತ್ತಿರುವ ಕಟ್ಟುನಿಟ್ಟಿನ ನಿಯಮಗಳು, ಆನ್‌ಲೈನ್ ಔಷಧಿ ಮಾರಾಟದಿಂದ ಸಣ್ಣ ವ್ಯಾಪಾರಿಗಳಿಗೆ ಉಂಟಾಗುತ್ತಿರುವ ಸಂಕಷ್ಟ, ಪರವಾನಗಿ ನವೀಕರಣದ ಗೊಂದಲ, ಔಷಧಿ ಪರಿಶೀಲಕರ ಕಿರುಕುಳ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಔಷಧಿ ಅಂಗಡಿಗಳನ್ನು ಕೇವಲ ವ್ಯಾಪಾರ ಕೇಂದ್ರಗಳಂತೆ ನೋಡದೇ ಆರೋಗ್ಯ ಸೇವೆಯ ಭಾಗವಾಗಿ ಪರಿಗಣಿಸಬೇಕು. ಗ್ರಾಮೀಣ ಭಾಗಗಳಲ್ಲಿ ಜನರಿಗೆ ತುರ್ತು ಸಂದರ್ಭದಲ್ಲಿ ಔಷಧಿ ಒದಗಿಸುವ ಕೆಲಸವನ್ನು ಮೆಡಿಕಲ್ ಅಂಗಡಿಗಳು ಮಾಡುತ್ತಿವೆ. ಆದರೆ ಸರ್ಕಾರದ ನೀತಿಗಳಿಂದ ಸಣ್ಣ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಔಷಧಿ ವಿತರಣೆಯ ಹೊಸ ನಿಯಮಾವಳಿಗಳು ಅನುಷ್ಠಾನಕ್ಕೆ ಬಂದರೆ ಹಾಗೂ ಆನ್ ಲೈನ್ ಮೂಲಕ ಔಷಧ ಮಾರಾಟ ನಡೆಸುತ್ತಿದ್ದರೆ ಸಣ್ಣ ಅಂಗಡಿಗಳನ್ನು ನಡೆಸುವುದು ಕಷ್ಟವಾಗುತ್ತದೆ. ಸರ್ಕಾರ ವ್ಯಾಪಾರಿಗಳೊಂದಿಗೆ ಚರ್ಚೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಔಷಧಿ ಅಂಗಡಿಗಳಲ್ಲಿ ವೈದ್ಯರ ಶಿಫಾರಸ್ಸಿನ ಚೀಟಿಯಿಲ್ಲದೇ ಗ್ರಾಹಕರಿಗೆ ಆಂಟಿಬಯೋಟಿಕ್ ಹಾಗೂ ನಾರ್ಕೊಟಿಕ್ ಡ್ರಗ್ಸ್ ವಿತರಿಸಲಾಗುವುದಿಲ್ಲ. ಆದರೆ, ಇದನ್ನು ದುರ್ಬಳಕೆ ಮಾಡಿಕೊಂಡು ಆನ್‌ಲೈನ್ ಇ-ಫಾರ್ಮಸಿ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಆನ್‌ಲೈನ್ ಇ ಫಾರ್ಮಸಿ ಡಿಸ್ಕೌಂಟ್ ಮೂಲಕ ನಕಲಿ ಹಾಗೂ ಗುಣಮಟ್ಟವಲ್ಲದ ಔಷಧಿಗಳನ್ನು ವಿತರಿಸುವ ಸೇವೆಯನ್ನು ಬಂದ್ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಬಳಿಯೂ ಜನರು ಔಷಧಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ತುರ್ತು ಔಷಧಿಗಳಿಗಾಗಿ ಕೆಲವರು ಖಾಸಗಿ ಆಸ್ಪತ್ರೆಗಳ ಮೆಡಿಕಲ್ ಸ್ಟೋರ್‌ಗಳನ್ನು ಅವಲಂಬಿಸಬೇಕಾಯಿತು. ವೃದ್ಧರು ಮತ್ತು ದೀರ್ಘಕಾಲದ ರೋಗಿಗಳು ಹೆಚ್ಚಿನ ತೊಂದರೆ ಅನುಭವಿಸಿದರು.

ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಬೇಡಿಕೆಗಳನ್ನು ಶೀಘ್ರ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಸಂಘ ಎಚ್ಚರಿಕೆ ನೀಡಿದೆ.

ಪ್ರತಿಭಟನೆಯಲ್ಲಿ ಎಂ.ಬಿ. ರಮಣಿ, ಜ್ಞಾನೇಶ ಗೋಕಲೆ, ಪ್ರಭು ಕಾಬಳ್ಳಿ, ರಂಜಾನಸಾಬ ನದಾಫ್, ಸುರೇಶ ನಿಡಗುಂಡಿ, ಸದಾನಂದ ಚವಡಿ, ಜಗದೀಶ ಹಿರೇಮಠ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net