ಗ್ರಾಪಂಗಳಲ್ಲಿ ದೊರೆಯುತ್ತಿಲ್ಲ ಜನನ, ಮರಣ ಪ್ರಮಾಣ ಪತ್ರ.

Gadag DC Office
Gadag DC Office
Published on
ಸಚಿವರು ಚಾಲನೆ ನೀಡಿದ ನಂತರವೂ ಯೋಜನೆಗೆ ಸಮಪರ್ಕವಾಗಿ ವೇಗ ಸಿಗುತ್ತಿಲ್ಲ.
ವಿಜಯವಾಣಿ ವಿಶೇಷ ಗದಗ
ಗ್ರಾಪಂಗಳ ಭಲವರ್ಧನೆ ಮತ್ತು ಸ್ಥಳಿಯ ಗ್ರಾಮೀಣ ಜನರಿಗೆ ಪಾರದರ್ಶಕ ಮತ್ತು ತುರ್ತು ಸೇವೆ ನೀಡಬೇಕೆನ್ನುವ ಸದುದ್ದೇಶದಿಂದ ಗ್ರಾಪಂಗಳಲ್ಲೇ ಹಲವು ಪ್ರಮಾಣ ಪತ್ರಗಳನ್ನು ವಿತರಿಸುವ ಯೋಜನೆ ಜಾರಿಯಾಗಿ 5 ವರ್ಷ ಕಳೆದರೂ ಸಹ ಜಿಲ್ಲೆಯ ಭಾಗಶಃ ಗ್ರಾಮ ಪಂಚಾಯಿತಿಗಳಲ್ಲಿ ಜನನ, ಮರಣ ಪ್ರಮಾಣ ಪತ್ರ ಸಿಗುವುದು ಕಷ್ಟವಾಗಿದೆ. ಆಡಳಿತಾತ್ಮಕ ಕಾರಣ ನೀಡಿ ಸರ್ಕಾರದ ಯೋಜನೆಯನ್ನು ಸಮಪರ್ಕವಾಗಿ ಅನುಷ್ಠಾನ ಗೊಳಿಸಲಾಗುತ್ತಿಲ್ಲ. ಕಳೆದ ವರ್ಷ ಸಚಿವ ಎಚ್​.ಕೆ. ಪಾಟೀರು ಗ್ರಾಪಂ ಗಳಲ್ಲಿ ಪ್ರಮಾಣ ಪತ್ರ ನೀಡುವ ಯೋಜನೆಗೆ ಚಾಲನೆ ನೀಡಿದ್ದರು. ಆದರೆ, ಪಂಚಾಯತ್​ ರಾಜ್​ ಮತ್ತು ಕಂದಾಯ ಇಲಾಖೆ ಸಮನ್ವಯ ಕೊರತೆಯಿಂದ ಈ ಯೋಜನೆ ಗ್ರಾಪಂಗಳಲ್ಲಿ ಅನುಷ್ಠಾನಗೊಳಿಸುವುದು ಕಷ್ಟವಾಗುತ್ತಿದೆ. ಹಲವು ವರ್ಷಗಳ ಹಿಂದಿನ ಜನನ ಮರಣ ಪ್ರಮಾಣ ಪತ್ರಗಳನ್ನು ಆನ್​ಲೈನ್​ ಮೂಲಕ ಸ್ಕಾ$ನಿಂಗ್​ ಮಾಡದೇ ಇದ್ದರೆ ಅಂತಹ ದಾಖಲೆಗಳನ್ನು ತಾಪಂ ನಲ್ಲೇ ಪಡೆಯಬೇಕಿದೆ.
ಇಲಾಖೆ ಸಮರ:
ಜನನ, ಮರಣ ಹಾಗೂ ಮದುವೆ ನೋಂದಣಿ ಪ್ರಮಾಣ ಪತ್ರ ನೀಡುವ ಅಧಿಕಾರಕ್ಕಾಗಿ ಪಂಚಾಯತ್​ ರಾಜ್​ ಮತ್ತು ಕಂದಾಯ ಇಲಾಖೆಗಳ ನಡುವೆ ಶೀತಲ ಸಮರ ಏರ್ಪಟ್ಟಿದೆ. ಸರ್ಕಾರದ ಆದೇಶ ಪಾಲನೆಗೆ ಪಂಚಾಯತ್​ ರಾಜ್​ ಇಲಾಖೆ ಆಸಕ್ತಿ ತೋರಿದೆ. ಆದರೆ, ಮೂಲಗಳ ಪ್ರಕಾರ ಆಥಿರ್ಕ ಸಂಪನ್ಮೂಲ ಕಳೆದುಕೊಳ್ಳು ಬೀತಿಯಲ್ಲಿ ಕಂದಾಯ ಇಲಾಖೆ ಸರ್ಕಾರದ ಆದೇಶವನ್ನು ಹಿಂಬದಿ ಸರಿಸಿದೆ ಎನ್ನಲಾಗಿದೆ. ಹೀಗಾಗಿ ಸಾರ್ವನಿಕರ ಹಿತದೃಷ್ಟಿ ಮತ್ತು ಆಡಳಿತ ಪ್ರಕ್ರಿಯೆ ಸರಳೀಕರಣ ದೃಷ್ಟಿಯಿಂದ ಗ್ರಾಪಂ ನಲ್ಲೇ ಜನನ, ಮರಣ ಪ್ರಮಾಣ ಪತ್ರ ನೀಡಬೇಕೆನ್ನು ಸರ್ಕಾರದ ಆದೇಶವನ್ನು ಕಂದಾಯ ಇಲಾಖೆ ಸಂರ್ಪೂಣವಾಗಿ ಜಾರಿಗೊಳಿಸುತ್ತಿಲ್ಲ.
ಏನಿದು ಯೋಜನೆ?
ಗ್ರಾಪಂಗಳಲ್ಲಿ ಆದಾಯ ಸಂಪನ್ಮೂಲ ಸೃಷ್ಟಿಸುವ ಹಿನ್ನೆಲೆ ಮತ್ತು ಗ್ರಾಮೀಣ ಜನರ ಅನುಕೂಲಕ್ಕಾಗಿ ಸರ್ಕಾರಿ ಸೌಲಭ್ಯಗಳು ಕೈಗೆಟಕುವಂತೆ ಸುಲಭಗೊಳಿಸಲು ಜನನ, ಮರಣ ಮತ್ತು ಮದುವೆ ನೋಂದಣಿ ಅಧಿಕಾರವನ್ನು ಗ್ರಾಪಂಗಳಿಗೆ ವರ್ಗಾಯಿಸಿ 2020ರಲ್ಲೇ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದೇಶವು ಪತ್ರ ವ್ಯವಹಾರಕ್ಕೆ ಮಾತ್ರ ಸೀಮಿತವಾಗಿದೆ. ಯೋಜನೆ ಜಾರಿಯಾಗದ ಹಿನ್ನೆಲೆ ಜಿಲ್ಲೆಯ 123 ಗ್ರಾಪಂ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ಜನರು ವಿಧಿಯಿಲ್ಲದೇ ನಗರ ಪ್ರದೇಶಕ್ಕೆ ಅಲೆದಾಡುವ ಸ್ಥಿತಿ ಎದುರಾಗಿದೆ. ಉದ್ಯೋಗ, ನೇಮಕಾತಿ, ಸ್ಥಳಿಯ ವಿಳಾಸ ಪತ್ರ, ಪರಿಹಾರ ಸೇರಿದಂತೆ ನಾನಾ ಪ್ರಕ್ರಿಯೆಗೆ ಅಗತ್ಯ ಇರುವ ಜನನ, ಮರಣ ಪ್ರಮಾಣ ಪತ್ರ ಪಡೆಯಲು ನಗರ ಪ್ರದೇಶಕ್ಕೆ ಬರುವಂತಾಗಿದೆ.
ಸಮಸ್ಯೆ ಏನು?
ಸ್ಥಳಿಯ ಸ್ವಾಯತ್ತ ಸರ್ಕಾರವಾಗಿರುವ ಗ್ರಾಪಂಗಳಲ್ಲಿ ಗ್ರಾಮೀಣ ಜನರಿಗೆ ಅಗತ್ಯ ಇರುವ ಜನನ, ಮರಣ ಪ್ರಮಾಣ ಪತ್ರ ಒದಗಿಸಲು ಪಂಚಾಯತ್​ ರಾಜ್​ ಅಧಿನಿಯಮ 1993/58ರ ಪ್ರಕಾರ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಅಧಿಕಾರ ವರ್ಗಾಯಿಸಿ 2020ರಲ್ಲಿ ಸರ್ಕಾರ ಆದೇಶ ಹೊರಡಿಸಿದೆ. ಅದೇ ರೀತಿ ಗ್ರಾಮ ಲೆಕ್ಕಾಧಿಕಾರಿಯನ್ನು ಉಪ ನೋಂದಣಿ ಅಧಿಕಾರಿಯಾಗಿ ನೇಮಿಸಿ, ಗ್ರಾಪಂ ನಲ್ಲೇ ವಿವಾಹ ನೋಂದಣಿಗೆ ಅವಕಾಶ ಕಲ್ಪಿಸಲಾದೆ. ಗ್ರಾಪಂಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಾಪೂಜಿ ಸೇವಾ ಕೇಂದ್ರದ ತಂತ್ರಾಂಶ ಅಭಿವೃದ್ಧಿ ಪಡಿಸಿ, ಈ ಸೇವೆಗಳನ್ನು ಬಾಪೂಜಿ ಕೇಂದ್ರದ ಮೂಲಕ ಒದಗಿಸಲು ಸೂಚಿಸಲಾಗಿತ್ತು. ಆದರೆ, ಆದಾಯ ಸಂಪನ್ಮೂಲಗಳು ಕೈಬಿಟ್ಟು ಹೋಗುತ್ತವೆ ಎಂಬ ಕಾರಣಕ್ಕಾಗಿ ಕಂದಾಯ ಇಲಾಖೆಯು ಆದೇಶ ಜಾರಿಗೊಳಿಸಲು ಆಸಕ್ತಿ ತೋರುತ್ತಿಲ್ಲ.
ಇಜನ್ಮ ತಂತ್ರಾಂಶ:
ಗ್ರಾಪಂಗಳಲ್ಲಿ ಜನನ, ಮರಣ ಪ್ರಮಾಣ ಪತ್ರ ವಿತರಿಸಲು ಸರ್ಕಾರದ ಇ&ಆಡಳಿತ ವಿಭಾಗದ ಲಾಂತರ ರೂ. ವ್ಯಯಿಸಿ ಇ&ಜನ್ಮ ತಂತ್ರಾಶ ಅಭಿವೃದ್ಧಿ ಪಡಿಸಿದೆ. ಆದರೆ, ಕಂದಾಯ ಇಲಾಖೆ ಆಸಕ್ತಿ ವಹಿಸದ ಕಾರಣ ಇ&ಜನ್ಮ ತಂತ್ರಾಶವನ್ನು ಬಾಪೂಜಿ ಸೇವಾ ಕೇಂದ್ರ ಪಂಚತಂತ್ರಕ್ಕೆ ಸಂಯೋಜನೆ ಮಾಡಲೇ ಇಲ್ಲ. ಹಾಗೂ ಪ್ರಮಾಣ ಪತ್ರ ವಿತರಣೆಗೆ ಅಗತ್ಯವಿರುವ ಖಾಲಿ ನಮೂನೆ ಮತ್ತು ಹಲೋಗ್ರಾಂ ಗಳನ್ನು ಜಿಲ್ಲೆಯ ಗ್ರಾಪಂಗಳಿಗೆ ಕಂದಾಯ ಇಲಾಖೆ ಉದ್ದೇಶಪೂರ್ವಕವಾಗಿ ವಿತರಿಸಿಲ್ಲ ಎಂಬ ಆರೋಪವಿದೆ.
ಕೋಟ್​:
ಎಲ್ಲ ಗ್ರಾಪಂಗಳಲ್ಲಿ ಮೊದಲ ಆಧ್ಯತೆ ಮೇರೆಗೆ ಪ್ರಮಾಣ ಪತ್ರಗಳನ್​ಉ ವಿತರಿಸಬೇಕೆನ್ನುವ ಆದೇಶವಿದೆ. ಪ್ರತಿ ಸಭೆಯಲ್ಲೂ ಈ ವಿಷಯದ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಪ್ರಮಾಣಪತ್ರ ವಿತರಣೆ ಮಾಡಲಾಗುತ್ತಿದೆ. ಯಾವ ಗ್ರಾಪಂಗಳಲ್ಲಿ ವಿತರಣೆ ಮಾಡಲು ಅಡತಡೆ ಇದೆಯೋ ಅಂತಹ ಗ್ರಾಪಂಗಳ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರೆ ಸಮಸ್ಯೆ ಬಗೆಹರಿಸುತ್ತೇವೆ.
ಸಿ.ಎನ್​. ಶ್ರೀಧರ, ಜಿಲ್ಲಾಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net