stolen: ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ನಾಲ್ವರ ಮಾಂಗಲ್ಯ ಸರ ಕಳವು

(stolen) ಲಕ್ಷ್ಮೇಶ್ವರ ಬಸ್ ನಿಲ್ದಾಣ ಜನಜಂಗುಳಿಯಿಂದ ತುಂಬಿರುವುದು.
(stolen) ಲಕ್ಷ್ಮೇಶ್ವರ ಬಸ್ ನಿಲ್ದಾಣ ಜನಜಂಗುಳಿಯಿಂದ ತುಂಬಿರುವುದು.
Published on
ಲಕ್ಷ್ಮೇಶ್ವರ: ಪಟ್ಟಣದ ಬಸ್ ನಿಲ್ದಾಣದಲ್ಲಿ ದುಷ್ಕರ್ಮಿಗಳು ನಾಲ್ಕೈದು ಮಹಿಳೆಯರ ಮಾಂಗಲ್ಯ ಸರ ಕದ್ದು (stolen) ಪರಾರಿಯಾದ ಘಟನೆ ಬುಧವಾರ ಸಂಜೆ ಜರುಗಿದೆ.
ಮಾಂಗಲ್ಯ ಸರ ಕಳೆದುಕೊಂಡು ದಿಕ್ಕು ತೋಚದಂತಾದ ಮಹಿಳೆಯರು ಅಳುತ್ತಾ ಪೊಲೀಸ್ ಠಾಣೆಯ ಮೊರೆ ಹೋಗಿದ್ದಾರೆ.
ಸಂತೆ, ಮದುವೆ ಇತರೆ ಕೆಲಸ ಕಾರ್ಯಗಳ ನಿಮಿತ್ತ ಪಟ್ಟಣಕ್ಕೆ ಬಂದ ಕಳಸ, ಬಾಲೆಹೊಸೂರ, ಹರ್ಲಾಪುರ ವಿವಿಧ ಗ್ರಾಮಗಳ ಅಮಾಯಕ ಮಹಿಳೆಯರು ಸಂಜೆ ಊರಿಗೆ ವಾಪಸ್ ಹೋಗಲು ಬಸ್ ಹತ್ತುವ ವೇಳೆ ಕಳ್ಳಿಯರ ಕೈ ಚಳಕಕ್ಕೆ ಬಲಿಯಾಗಿದ್ದಾರೆ.
ಸರ ಕಳೆದುಕೊಂಡ ಬಾಲೆಹೊಸೂರಿನ ಮಲ್ಲವ್ವ ಮಾಯಕೊಂಡ, ಸುಲ್ತಾನಪುರದ ಶೋಭಾ ಬಡಿಗೇರ, ಹರ್ಲಾಪುರದ ಲಕ್ಷ್ಮೀ ದೇವರಮನಿ, ಕಳಸದ ಗಂಗವ್ವ ಹೊಸಳ್ಳಿ ಎಂಬುವವರು ಪೊಲೀಸ್ ಠಾಣೆಗೆ ದೌಡಾಯಿಸಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಇವರಲ್ಲದೇ ಇನ್ನೂ ಇಬ್ಬರು ಮಹಿಳೆಯರು ಸರ ಕಳೆದುಕೊಂಡು ಅಳುತ್ತಾ ಬಸ್ ಹತ್ತಿ ಹೋಗಿದ್ದಾರೆ ಎನ್ನಲಾಗಿದೆ. ಕೇಸ್ ದಾಖಲಿಸಲು ಹಿಂದೇಟು ಹಾಕಿದ ಮಹಿಳೆಯರಿಂದ ಮಾಹಿತಿ ಪಡೆದ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿಸಿ ಕ್ಯಾಮರಾ ಪರಿಶೀಲನೆ ಮೂಲಕ ಕಳ್ಳರ ಪತ್ತೆಗೆ ಮುಂದಾಗಿದ್ದಾರೆ. ಬಸ್ ನಿಲ್ದಾಣದಲ್ಲಿ ಈ ರೀತಿ ಪದೇಪದೆ ನಡೆಯುವ ಕಳ್ಳತನ ತಡೆಯುವ ನಿಟ್ಟಿನಲ್ಲಿ ಡಿಪೋದವರ 4 ಕ್ಯಾಮರಾ ಹೊರತಾಗಿ ಪೊಲೀಸ್ ಠಾಣೆಯಿಂದ 12 ಸಿಸಿ ಕ್ಯಾಮರಾ ಅಳವಡಿಸಿದ್ದರೂ ಕಳ್ಳತನದ ಘಟನೆಗಳು ನಡೆಯುತ್ತಲೇ ಇರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಶಕ್ತಿ ಯೋಜನೆ ಜಾರಿಯಾಗಿರುವುದು ಮತ್ತು ಬಂಗಾರದ ಬೆಲೆ ಗಗನಕ್ಕೇರಿರುವುದರಿಂದ ಅಂತರ್ ಜಿಲ್ಲಾ ಮಹಿಳಾ ಸರಗಳ್ಳಿಯರ ಗ್ಯಾಂಗ್‌ನವರು ತಮ್ಮ ದಂಧೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಬೇಕು ಮತ್ತು ಪೊಲೀಸರು, ಸಾರಿಗೆ ಘಟಕದವರು ಇನ್ನಷ್ಟು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net