ವೀರಪ್ಪ ಕಡ್ಲಿಕೊಪ್ಪ ಸ್ಮಾರಕಕ್ಕೆ ಶಿಲಾನ್ಯಾಸ

ನರಗುಂದದಲ್ಲಿ ಹುತಾತ್ಮ ರೈತನ ಸ್ಮಾರಕ ನಿರ್ಮಾಣಕ್ಕೆ ಶಾಸಕ ಸಿ.ಸಿ.ಪಾಟೀಲ, ಮಾಜಿ ಸಚಿವ ಬಿ.ಆರ್.ಯಾವಗಲ್‌ಲ್ ಮಂಗಳವಾರ ಶಿಲಾನ್ಯಾಸ ನೆರವೇರಿಸಿದರು. ಡಾ.ಸಂಗಮೇಶ ಕೊಳ್ಳಿಯವರ, ರಾಜುಗೌಡ ಕೆಂಚನಗೌಡ್ರ, ಶಂಕರಪ್ಪ ಅಂಬಲಿ, ಉಮೇಶ ಮರ್ಚಪ್ಪನವರ, ವಿವೇಕ ಯಾವಗಲ್ಲ, ಉಮೇಶಗೌಡ ಪಾಟೀಲ, ರಾಜು ಕಲಾಲ, ನಾಗನಗೌಡ ತಿಮ್ಮನಗೌಡ್ರ, ಇತರರಿದ್ದರು.
ನರಗುಂದದಲ್ಲಿ ಹುತಾತ್ಮ ರೈತನ ಸ್ಮಾರಕ ನಿರ್ಮಾಣಕ್ಕೆ ಶಾಸಕ ಸಿ.ಸಿ.ಪಾಟೀಲ, ಮಾಜಿ ಸಚಿವ ಬಿ.ಆರ್.ಯಾವಗಲ್‌ಲ್ ಮಂಗಳವಾರ ಶಿಲಾನ್ಯಾಸ ನೆರವೇರಿಸಿದರು. ಡಾ.ಸಂಗಮೇಶ ಕೊಳ್ಳಿಯವರ, ರಾಜುಗೌಡ ಕೆಂಚನಗೌಡ್ರ, ಶಂಕರಪ್ಪ ಅಂಬಲಿ, ಉಮೇಶ ಮರ್ಚಪ್ಪನವರ, ವಿವೇಕ ಯಾವಗಲ್ಲ, ಉಮೇಶಗೌಡ ಪಾಟೀಲ, ರಾಜು ಕಲಾಲ, ನಾಗನಗೌಡ ತಿಮ್ಮನಗೌಡ್ರ, ಇತರರಿದ್ದರು.
Published on
ನರಗುಂದ: ಬಂಡಾಯ ನಾಡಿನ ಜನರ ಬಹುದಿನಗಳ ಬೇಡಿಕೆಯಾಗಿದ್ದ ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪ ಅವರ ಸ್ಮಾರಕದ ಶಿಲಾನ್ಯಾಸ ಕಾರ್ಯಕ್ರಮವನ್ನು 46 ವರ್ಷದ ಬಳಿಕ ಸ್ವಾಭಿಮಾನಿ ರೈತರು ಮಂಗಳವಾರ ನೆರವೇರಿಸಿದರು. 
ಈ ಮಹತ್ವದ ಕಾರ್ಯಕ್ಕೆ ರಾಜ್ಯದೆಲ್ಲೆಡೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಮಾರಕದ ನಿರ್ಮಾಣ ಕಾಮಗಾರಿಗೆ ಒಂದೇ ದಿನ 10 ಲಕ್ಷ ರೂ. ದೇಣಿಗೆ ಸಂಗ್ರಹಗೊಂಡಿದೆ. ಪರಿಣಾಮ ಡಿಸೆಂಬರ್‌ನಲ್ಲಿ ಜರುಗುವ ರಾಷ್ಟ್ರೀಯ ರೈತ ದಿನಾಚರಣೆಯಂದು ಶಿಲಾಮಂಟಪ ಲೋಕಾರ್ಪಣೆಗೊಳ್ಳಲಿದೆ.   
ರಾಜ್ಯ ರೈತ ಸಂಘ, ಹಸಿರು ಸೇನೆ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮಾತನಾಡಿ, ನರಗುಂದದಲ್ಲಿ ಹುತಾತ್ಮ ರೈತನ ಸ್ಮಾರಕ ನಿರ್ಮಾಣ 45 ವರ್ಷಗಳಿಂದ ತೀವ್ರ ಕಗ್ಗಂಟಾಗಿ ಪರಿಣಿಮಿಸಿತ್ತು. ಆದರೆ, ಸಮಸ್ತ ರೈತಕುಲಕ್ಕೆ ಗೌರವವನ್ನು ಕೊಟ್ಟು ದೇಸಾಯಿಗೌಡ ಪಾಟೀಲ, ಸಲೀಂಸಾಬ ಮೇಗಲಮನಿ ಅರ್ಧ ಗುಂಟೆ ನಿವೇಶನ ಭೂ-ದಾನಗೈದಿದ್ದರಿಂದ ಸ್ಮಾರಕದ ಕನಸು ನನಸಾಗಿಸಿದೆ. ಸ್ಮಾರಕ ನಿರ್ಮಾಣಕ್ಕೆ 50 ಸಾವಿರ ರೂ. ವೈಯಕ್ತಿಕ ದೇಣಿಗೆ ನೀಡುವುದಾಗಿ ಘೋಷಿಸಿದರು. 
ರಾಜ್ಯದ ರೈತರು ಬರಗಾಲದಿಂದ ನೀರು ಮತ್ತು ಮೇವಿಗಾಗಿ ಪರಿತಪಿಸುತ್ತಿದ್ದಾರೆ. ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡುವುದರ ಜತೆಗೆ ಹಿಂಗಾರು ಬಿತ್ತನೆಗೆ ಉಚಿತ ಬೀಜ, ಗೊಬ್ಬರ, ಔಷಧ ವಿತರಣೆ ಮಾಡಬೇಕು. ಮಹದಾಯಿ, ಕಳಸಾ-ಬಂಡೂರಿ ಯೋಜನೆಗೆ ವನ್ಯಜೀವಿ ಇಲಾಖೆಯಿಂದ ತಕ್ಷಣ ಪರವಾನಗಿ ಕೊಡಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿ, ರಾಜಕಾರಣಿಗಳು ಶ್ರಮಿಸಬೇಕು. ಕೇವಲ ಗ್ಯಾರಂಟಿ ಯೋಜನೆಗಳ ಭ್ರಮೆಯಲ್ಲಿದ್ದರೆ ನಿಮ್ಮ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಬದಲಾಗಿ ರೈತಪರವಾದ ಅಭಿವೃದ್ಧಿ ಕೆಲಸ ಮಾಡಬೇಕು ಎಂದು ಕೇಂದ್ರ, ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. 
ಶಾಸಕ ಸಿ.ಸಿ.ಪಾಟೀಲ ಮಾತನಾಡಿ, ಕಳಸಾ-ಬಂಡೂರಿ ಹೋರಾಟದಿಂದ ಅನೇಕರು ಶಾಸಕ, ಸಚಿವ, ಸಂಸದ, ಮುಖ್ಯಮಂತ್ರಿಗಳಾಗಿ ಅಧಿಕಾರ ಅನುಭವಿಸಿರುವುದು ನಿಜ. ಆದರೆ, ಈ ಮಹತ್ವದ ಯೋಜನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ವಿನಾಕಾರಣ ಅಡೆತಡೆ ತಂದೊಡ್ಡುತ್ತಿದ್ದಾರೆ. ಕಳಸಾ-ಬಂಡೂರಿ ನಾಲೆಗೆ ನಿರ್ಮಿಸಿದ ತಡೆಗೋಡೆ ತೆರವುಗೊಳಿಸಿದರೆ 2 ಟಿಎಂಸಿ ನೀರು ಮಲಪ್ರಭೆಗೆ ಹರಿದು ಬರಲಿದೆ. ಈ ತಡೆಗೋಡೆ ತೆರವುಗೊಳಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ. ಹುತಾತ್ಮ ರೈತನ ಸ್ಮಾರಕ ನಿರ್ಮಾಣಕ್ಕೆ ವೈಯಕ್ತಿಕವಾಗಿ 2.50 ಲಕ್ಷ ರೂ. ದೇಣಿಗೆ ನೀಡುತ್ತೇನೆ. ಸ್ವಾಭಿಮಾನಿ ರೈತರು ಒಪ್ಪಿದರೆ ಶಾಸಕರ ಅನುದಾನದಲ್ಲಿ ಎಷ್ಟು ಬೇಕೋ ಅಷ್ಟು ಅನುದಾನ ನೀಡುತ್ತೇನೆ. ಇಲ್ಲಿ ನಿರ್ಮಾಣವಾಗುತ್ತಿರುವ ಸ್ಮಾರಕವು ಭ್ರಷ್ಟ್ಟಾಚಾರದ ಅಧಿಕಾರಿ, ರಾಜಕಾರಣಿಗಳಿಗೆ ಸಿಂಹ ಸ್ವಪ್ನದಂತೆ ಗೋಚರಿಸುವಂತೆ ಅಭಿವೃದ್ಧಿಪಡಿಸಬೇಕು ಎಂದರು.
ಮಾಜಿ ಸಚಿವ ಬಿ.ಆರ್. ಯಾವಗಲ್ಲ ಮಾತನಾಡಿ, ಒಂದು ಸಣ್ಣ ಸ್ಮಾರಕ ನಿರ್ಮಾಣಕ್ಕೆ 46 ವರ್ಷ ಗತಿಸಿದ್ದು, ಅತ್ಯಂತ ಕಳವಳಕರ ಸಂಗತಿ. 1980ರಲ್ಲಿನ ಹೋರಾಟದ ಕಿಡಿಗಿಂತ ಇಂದಿನ ಹೋರಾಟ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ರೈತರ ಆದಾಯ ದ್ವಿಗುಣಗೊಂಡರೆ ನಿಜವಾದ ಅಭಿವೃದ್ಧಿ ಸಾಧಿಸಿದಂತಾಗುತ್ತದೆ. ಹುತಾತ್ಮ ರೈತನ ಸ್ಮಾರಕ ನಿರ್ಮಾಣಕ್ಕೆ 1 ಲಕ್ಷ ರೂ. ವೈಯಕ್ತಿಕ ದೇಣಿಗೆ ನೀಡುತ್ತೇನೆ ಎಂದು ತಿಳಿಸಿದರು. 
ಜಿಪಂ ಮಾಜಿ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ ಮಾತನಾಡಿ, ಮಾಜಿ ಸಚಿವ ಎಚ್.ಕೆ. ಪಾಟೀಲ ಅವರು ಕಳೆದ ವರ್ಷ ಹುತಾತ್ಮ ರೈತನ ಸ್ಮಾರಕ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದರು. ಆದರೆ, ಕಾರಣಾಂತರದಿಂದ ಕೆಲಸ ಆರಂಭಗೊಂಡಿರಲಿಲ್ಲ. ಆದರೀಗ ಕೆಲಸ ಪ್ರಾರಂಭಗೊಂಡಿದ್ದರಿಂದ ಕಳೆದ ವರ್ಷ ಎಚ್.ಕೆ.ಪಾಟೀಲರು ಘೋಷಿಸಿದ್ದ ಸಂಪೂರ್ಣ ಅನುದಾನವನ್ನು ಒಂದು ತಿಂಗಳಲ್ಲಿ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.  
ಕೆಪಿಸಿಸಿ ಮಾಧ್ಯಮ ವಕ್ತಾರ ಡಾ.ಸಂಗಮೇಶ ಕೊಳ್ಳಿಯವರ ಮಾತನಾಡಿ, ಸ್ಮಾರಕ ನಿರ್ಮಾಣಕ್ಕೆ 2.60 ಲಕ್ಷ ರೂ. ದೇಣಿಗೆ ನೀಡುವುದಾಗಿ ಹಾಗೂ ಎಲ್ಲರಿಗಿಂತ 10 ಸಾವಿರ ರೂ. ಹೆಚ್ಚಿನ ಅನುದಾನ ನೀಡುವುದಾಗಿ ತಿಳಿಸಿದರು.    
ಶಂಕರಪ್ಪ ಅಂಬಲಿ, ಉಮೇಶ ಮರ್ಚಪ್ಪನವರ, ವಿವೇಕ ಯಾವಗಲ್ಲ, ಉಮೇಶಗೌಡ ಪಾಟೀಲ, ರಾಜು ಕಲಾಲ, ನಾಗನಗೌಡ ತಿಮ್ಮನಗೌಡ್ರ, ರಾಚನಗೌಡ ಪಾಟೀಲ, ಬಸು ಪಾಟೀಲ, ವಿವಿಧ ರೈತಪರ, ಕನ್ನಡಪರ ಸಂಘಟನೆಗಳ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

10 ಲಕ್ಷ ರೂ. ದೇಣಿಗೆ ಸಂಗ್ರಹ

ಎಚ್.ಆರ್. ಬಸವರಾಜಪ್ಪ 50 ಸಾವಿರ, ಶಾಸಕ ಸಿ.ಸಿ. ಪಾಟೀಲ, 2.50 ಲಕ್ಷ ರೂ., ಮಾಜಿ ಸಚಿವ ಬಿ.ಆರ್. ಯಾವಗಲ್ಲ 1 ಲಕ್ಷ ರೂ., ಡಾ.ಸಂಗಮೇಶ ಕೊಳ್ಳಿಯವರ 2.60 ಲಕ್ಷ ರೂ., ದೇಸಾಯಿಗೌಡ ಪಾಟೀಲ 10 ಸಾವಿರ ರೂ., ಹರಳಿಕಟ್ಟಿ ಗ್ರಾಮದ ರೈತರು 10 ಸಾವಿರ ರೂ., ಶಿಕಾರಿಪುರ ರೈತಸಂಘ 10 ಸಾವಿರ ರೂ., ನಟರಾಜ ಸವದಿ 5 ಸಾವಿರ ರೂ., ಚಿಕ್ಕಮಂಗಳೂರು ಕಾಫಿ ಬೆಳೆಗಾರರ ಸಂಘ 10 ಸಾವಿರ ರೂ., ದಾವಣಗೆರೆ ಹೊನ್ನೂರ ಮುನಿಯಪ್ಪ 25 ಸಾವಿರ ರೂ., ರಾಮದುರ್ಗದ ರೈತ ಸಂಘ 10 ಸಾವಿರ ರೂ., ಚಿತ್ರನಟ, ಚನ್ನಪಟ್ಟಣ ಶಾಸಕ ಸಿ.ಸಿ.ಯೋಗೇಶ್ವರ 1 ಲಕ್ಷ ರೂ., ನವಲಗುಂದ ಶಾಸಕ ಎನ್.ಎಚ್. ಕೊನರೆಡ್ಡಿ 1 ಲಕ್ಷ ರೂ., ಟಿ.ಸಿ. ಕಲವಟಗಿ 10 ಸಾವಿರ ಸೇರಿ ವಿವಿಧ ರೈತರಿಂದ ಒಂದೇ ದಿನದಲ್ಲಿ 10 ಲಕ್ಷ ರೂ. ದೇಣಿಗೆ ಸಂಗ್ರಹವಾಯಿತು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net