ರಸ್ತೆ ಅಪಘಾತದಲ್ಲಿ ಮಾಜಿ ಯೋಧ ಸಾವು

ಆನಂದ ಅಂಗಡಿ
ಆನಂದ ಅಂಗಡಿ
Published on

ನರಗುಂದ: ಬೈಕ್ ಹಾಗೂ ಕಾರು ಡಿಕ್ಕಿಯಾಗಿ ಬೈಕ್ ಸವಾರ, ಮಾಜಿ ಯೋಧ ಸ್ಥಳದಲ್ಲೇ ಮೃತಪಟ್ಟ ಘಟನೆ ನವಲಗುಂದ ತಾಲೂಕು ಅಮರಗೋಳ ಕ್ರಾಸ್ ಬಳಿ ಗುರುವಾರ ರಾತ್ರಿ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಬೈಕ್ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. 

ನರಗುಂದ ತಾಲೂಕು ಹಿರೇಕೊಪ್ಪ ಗ್ರಾಮದ ಆನಂದ ಗಿರಿಮಲ್ಲಪ್ಪ ಅಂಗಡಿ (45) ಮೃತಪಟ್ಟವರು. 
ಆನಂದ ಅವರು ನವಲಗುಂದ ವಿನಾಯಕಪೇಟೆ ಬಡಾವಣೆಯ ಪರಪ್ಪ ಬ್ಯಾಳಿ ಎಂಬುವವರ ಮಗಳನ್ನು ಮದುವೆಯಾಗಿದ್ದಾರೆ. ಅನಾರೋಗ್ಯದಿಂದ ಮಾವ ಪರಪ್ಪ ಗುರುವಾರ ನಿಧನ ಹೊಂದಿದ್ದರು. ಅಂತ್ಯ ಸಂಸ್ಕಾರಕ್ಕೆಂದು ಪತ್ನಿ ಶಿಲ್ಪಾ ಹಾಗೂ ಸಂಬಂಧಿಕರು ಹಿರೇಕೊಪ್ಪದಿಂದ ಪ್ರತ್ಯೇಕ ವಾಹನದಲ್ಲಿ ನವಲಗುಂದಕ್ಕೆ ತೆರಳಿದ್ದರು. ಮಾವನ ಅಂತ್ಯಸಂಸ್ಕಾರಕ್ಕೆ ಆನಂದ ಅವರು ಪೂಜಾ ಸಾಮಗ್ರಿಗಳನ್ನು ಬೈಕ್‌ನಲ್ಲಿ ಕೊಂಡೊಯ್ಯುತ್ತಿದ್ದಾಗ ಅಮರಗೋಳ ಕ್ರಾಸ್ ಹತ್ತಿರ ಬಾಗಲಕೋಟೆ ಜಿಲ್ಲೆ ಕುಳಗೇರಿ ಕ್ರಾಸ್‌ನ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ. ಘಟನೆಯಿಂದ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ವ್ಯತ್ಯಯವಾಗಿತ್ತು. ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪತ್ನಿಗೆ ಆಘಾತ!

ತಂದೆ ತೀರಿಕೊಂಡ ನೋವಿನಲ್ಲಿ ಶಿಲ್ಪಾ ನವಲಗುಂದಕ್ಕೆ ತೆರಳಿದ್ದರು. ಆದರೆ, ತಂದೆಯ ಅಂತ್ಯಸಂಸ್ಕಾರಕ್ಕೂ ಮೊದಲೇ ಗಂಡನ ಸಾವಿನ ಸುದ್ದಿ ಕೇಳಿ ತೀವ್ರ ಆಘಾತಕ್ಕೀಡಾದರು. ಸುದ್ದಿ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ತಂದೆಯ ಅಂತ್ಯಸಂಸ್ಕಾರ ಮುಗಿಸುತ್ತಿದ್ದಂತೆ ಅದೇ ಊರಿನ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಗಂಡನ ಮರಣೋತ್ತರ ಪರೀಕ್ಷೆ ಬಳಿಕ ಶುಕ್ರವಾರ ಸಂಜೆ ಹಿರೇಕೊಪ್ಪದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದು, ಘೋರ ಘಟನೆಗೆ ಸಾಕ್ಷಿಯಾಯಿತು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net