CRIME: ತಾಯಿ ಮಗಳನ್ನು ದೂರ ಮಾಡಿದ ವಿಧಿ!

ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.
Published on

ಪ್ರಮುಖ ಮುಖ್ಯಾಂಶಗಳು

  • ಕಾರು ಡಿಕ್ಕಿಯಾಗಿ ಮಹಿಳೆ ದುರ್ಮರಣ
  • ಆರು ವರ್ಷದ ಮಗಳು, ಚಾಲಕನಿಗೆ ಗಾಯ
  • ಗಾಯಾಳುಗಳಿಗೆ ನರಗುಂದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ
ನರಗುಂದ: ಕಾಲುವೆಗೆ ಬಟ್ಟೆ ತೊಳೆಯಲು ಹೋಗಿದ್ದ ತಾಯಿ-ಮಗಳಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ತಾಯಿ ಸ್ಥಳದಲ್ಲೇ ಮೃತಪಟ್ಟು, ಮಗಳು ಹಾಗೂ ಕಾರು ಚಾಲಕ ಗಾಯಗೊಂಡಿರುವ ಘಟನೆ ತಾಲೂಕಿನ ಚಿಕ್ಕ ನರಗುಂದ ಗ್ರಾಮದ ಬಳಿ ಮಂಗಳವಾರ ನಡೆದಿದೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬನ್ನೂರ ತಾಂಡಾ ನಿವಾಸಿ ಶ್ರುತಿ ಪುಂಡಲೀಕ ಲಮಾಣಿ (30) ಮೃತಪಟ್ಟ ಮಹಿಳೆ. ಈಕೆಯ 6 ವರ್ಷದ ಮಗಳು ರಶ್ಮಿಕಾ ಲಮಾಣಿ ಹಾಗೂ ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದ ಕಾರು ಚಾಲಕ ಮಾಳಪ್ಪ ಪಡಿಯಪ್ಪ ಗೊಬ್ಬರಗುಂಪಿ ಅವರಿಗೆ ತಲೆ, ಕೈ-ಕಾಲು ಹಾಗೂ ದೇಹದ ವಿವಿಧ ಭಾಗಗಳಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಇಬ್ಬರು ಬದುಕುಳಿದಿದ್ದಾರೆ. ನರಗುಂದ ಬಾಬಾಸಾಹೇಬ ಭಾವೆ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ನರಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಚಿಕ್ಕನರಗುಂದದ ಮಾಳಪ್ಪ ಪಡಿಯಪ್ಪ ಗೊಬ್ಬರಗುಂಪಿ ಎಂಬುವರ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಘಟನೆಯ ವಿವರ

ರಾಮದುರ್ಗ ತಾಲೂಕಿನ ಬನ್ನೂರ ತಾಂಡಾದ ಅನೇಕ ಕೂಲಿ ಕಾರ್ಮಿಕರು ನರಗುಂದ ತಾಲೂಕಿ ಚಿಕ್ಕನರಗುಂದ ಗ್ರಾಮಕ್ಕೆ ಕೂಲಿ ಕೆಲಸಕ್ಕೆ ಆಗಮಿಸಿದ್ದಾರೆ. ಸುಗ್ಗಿ ಕಾಲವಾಗಿದ್ದರಿಂದ ಕೆಲವು ತಿಂಗಳಿಂದ ಗ್ರಾಮದ ಹೊರ ವಲಯದಲ್ಲಿಯೇ ಸಣ್ಣ-ಪುಟ್ಟ ಗುಡಿಸಲಲ್ಲಿ ವಾಸವಾಗಿದ್ದಾರೆ. ಮಂಗಳವಾರ ಕೂಲಿ ಕೆಲಸಕ್ಕೆ ರಜೆ ಇರುವುದರಿಂದ ಬಟ್ಟೆ ತೊಳೆಯಲು ಮಗಳೊಂದಿಗೆ ಕಾಲುವೆಗೆ ತೆರಳಿದ್ದರು. ಬಟ್ಟೆ ತೊಳೆದು ಮನೆಗೆ ತೆರಳುತ್ತಿದ್ದಾಗ ನರಗುಂದದಿಂದ ಚಿಕ್ಕನರಗುಂದಕ್ಕೆ ತೆರಳುತ್ತಿದ್ದ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net