protest: ವಿದ್ಯುತ್ ಖಾಸಗೀಕರಣ ಕೈಬಿಡಲು ಆಗ್ರಹ

ಲಕ್ಷ್ಮೇಶ್ವರ ಪಟ್ಟಣದಲ್ಲಿ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸದಂತೆ ರೈತರು, ಬಳಕೆದಾರರು ಮತ್ತು ಹೆಸ್ಕಾಂ ನೌಕರರಿಗಾಗಿ ಹಮ್ಮಿಕೊಂಡಿದ್ದ ಆಕ್ಷೇಪಣಾ ಅರ್ಜಿ ಸಲ್ಲಿಸುವುದು ಹಾಗೂ ಜನಜಾಗೃತಿ ಕಾರ್ಯಕ್ರಮ ಜರುಗಿತು. ರಾಜೇಶ ಕಲ್ಯಾಣಶೆಟ್ಟಿ,  ಅಂಜನೇಪ್ಪ ಬಿ., ಇತರರಿದ್ದರು.
ಲಕ್ಷ್ಮೇಶ್ವರ ಪಟ್ಟಣದಲ್ಲಿ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸದಂತೆ ರೈತರು, ಬಳಕೆದಾರರು ಮತ್ತು ಹೆಸ್ಕಾಂ ನೌಕರರಿಗಾಗಿ ಹಮ್ಮಿಕೊಂಡಿದ್ದ ಆಕ್ಷೇಪಣಾ ಅರ್ಜಿ ಸಲ್ಲಿಸುವುದು ಹಾಗೂ ಜನಜಾಗೃತಿ ಕಾರ್ಯಕ್ರಮ ಜರುಗಿತು. ರಾಜೇಶ ಕಲ್ಯಾಣಶೆಟ್ಟಿ, ಅಂಜನೇಪ್ಪ ಬಿ., ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯುತ್ ಖಾಸಗೀಕರಣ ಕೈಬಿಡಬೇಕು
  • ಜನಜಾಗೃತಿ ಕಾರ್ಯಕ್ರಮ
  • ಸಬ್ಸಿಡಿ ಸೌಲಭ್ಯಗಳು ರದ್ದಾಗುವ ಸಾಧ್ಯತೆ
ವಿಜಯವಾಣಿ ಸುದ್ದಿಜಾಲ ಲಕ್ಷ್ಮೇಶ್ವರ
ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣ ಕೈಬಿಡಬೇಕು. ಇದು ರೈತರು, ವಿದ್ಯುತ್ ಬಳಕೆದಾರರು ಹಾಗೂ ವಿದ್ಯುತ್ ವಲಯದ ನೌಕರರ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಗದಗ ಪಾಲನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಜೇಶ ಕಲ್ಯಾಣಶೆಟ್ಟಿ ಹೇಳಿದರು.
ಅವರು ಪಟ್ಟಣದ ಹೆಸ್ಕಾಂ ಉಪವಿಭಾಗ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ವತಿಯಿಂದ ಟಾಟಾ ಪವರ್ ಕಂಪನಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡದಂತೆ ಹಾಗೂ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸದಂತೆ ರೈತರು, ಬಳಕೆದಾರರು ಮತ್ತು ಹೆಸ್ಕಾಂ ನೌಕರರಿಗಾಗಿ ಹಮ್ಮಿಕೊಂಡಿದ್ದ ಆಕ್ಷೇಪಣಾ ಅರ್ಜಿ ಸಲ್ಲಿಸುವುದು ಹಾಗೂ ಜನಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಹೆಸ್ಕಾಂ ಸಂಸ್ಥೆಯು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ವಿದ್ಯುತ್ ಕಂಬಗಳು, ಉಪಕೇಂದ್ರಗಳು ಸೇರಿದಂತೆ ಮೂಲಸೌಕರ್ಯಗಳನ್ನು ಖಾಸಗಿ ಕಂಪನಿಗಳಿಗೆ ಬಳಸಲು ಅವಕಾಶ ನೀಡಿದರೆ ಅದು ಸರ್ಕಾರಿ ಆಸ್ತಿಯನ್ನು ಖಾಸಗಿ ಸಂಸ್ಥೆಗಳಿಗೆ ಒಪ್ಪಿಸಿದಂತಾಗುತ್ತದೆ. ಖಾಸಗೀಕರಣದಿಂದ ರೈತರಿಗೆ ನೀಡುತ್ತಿರುವ ಉಚಿತ ವಿದ್ಯುತ್ ಸೌಲಭ್ಯ ರದ್ದಾಗುವ ಸಾಧ್ಯತೆ ಇದ್ದು, ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಕಡ್ಡಾಯವಾಗಬಹುದು. ಸರ್ಕಾರದ ಗೃಹಜ್ಯೋತಿ, ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಹಾಗೂ ಗಂಗಾ ಕಲ್ಯಾಣ ಸೇರಿದಂತೆ ಹಲವು ಜನಪರ ಯೋಜನೆಗಳು ಸ್ಥಗಿತಗೊಳ್ಳುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದಲ್ಲದೆ ಕೈಮಗ್ಗ ನೇಕಾರರು ಹಾಗೂ ಕಾಫಿ ಬೆಳೆಗಾರರಿಗೆ ನೀಡಲಾಗುತ್ತಿರುವ ಸಬ್ಸಿಡಿ ಸೌಲಭ್ಯಗಳು ರದ್ದಾಗುವ ಸಾಧ್ಯತೆ ಇದೆ. ವಿದ್ಯುತ್ ಬಳಕೆಗೆ ಮುಂಗಡ ಹಣ ಪಾವತಿ ವ್ಯವಸ್ಥೆ ಜಾರಿಯಾಗುವ ಅಪಾಯವಿದೆ. ಸರ್ಕಾರಿ ಉದ್ಯೋಗಾವಕಾಶಗಳು ಕಡಿಮೆಯಾಗುವ ಮೂಲಕ ಯುವಜನತೆಗೆ ಅನ್ಯಾಯವಾಗಲಿದೆ ಎಂದರು.
ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಟಾಕಪ್ಪ ಸಾತಪುತೆ, ಈಗಾಗಲೇ ಕೆಲವು ರಾಜ್ಯಗಳಲ್ಲಿ ಖಾಸಗಿ ಕಂಪನಿಗಳು ವಿದ್ಯುತ್ ಕ್ಷೇತ್ರಕ್ಕೆ ಪ್ರವೇಶಿಸಿದ ಪರಿಣಾಮ ರೈತರು ಹಾಗೂ ಬಳಕೆದಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಜೂನ್ 23ರೊಳಗೆ ಆಕ್ಷೇಪಣಾ ಪತ್ರ ಅಭಿಯಾನವನ್ನು ಯಶಸ್ವಿಗೊಳಿಸಿ ಜನಪರ ಹೋರಾಟ ನಡೆಸಬೇಕಾಗಿದೆ ಎಂದು ಕರೆ ನೀಡಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುರೇಶ ಸ್ವಾದಿ, ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಮುಕ್ತಾರ ಅಹ್ಮದ್ ಗದಗ, ಬಾಬಣ್ಣ ಉಮಚಗಿ, ಬಸವರಾಜ ಸೂರಣಗಿ ಹಾಗೂ ಬಸವರಾಜ ಟೋಕಾಳಿ ಮಾತನಾಡಿದರು.
ಈ ಸಂದರ್ಭದಲ್ಲಿ ಹೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ) ಅಂಜನೇಪ್ಪ ಬಿ., ಶಾಖಾಧಿಕಾರಿಗಳಾದ ಕಿರಣಕುಮಾರ ಪಮ್ಮಾರ, ರಘುಪತಿ ನಾಯಕ, ಇರನಗೌಡ, ಬಸವರಾಜ, ವಿಜಯ, ಸಂತೋಷ ನಾಯಕ, ಅಂಬರೀಷ ಹುಲಗೂರ, ಅಮರೇಶ್ವರ ಹುಲಗೂರ, ಮಹಾಂತೇಶ ಇಟಗಿ, ಮುಖಂಡರಾದ ಚಂಬಣ್ಣ ಬಾಳಿಕಾಯಿ, ಸುಲೇಮಾನಸಾಬ ಕಣಕೆ, ಸಿ.ಆರ್. ಲಕ್ಕುಂಡಿಮಠ, ಪಂಚಯ್ಯ ಸಾಲಿಮಠ, ಮಂಜುನಾಥ ಹೊಗೆಸೊಪ್ಪಿನ, ಹನುಮಂತಪ್ಪ ಬಾರ್ಕಿ, ಯಲ್ಲಪ್ಪ ತಳವಾರ, ಹನುಮಂತಗೌಡ ಪಾಟೀಲ್, ಬಸಪ್ಪ ಧರ್ಮಂತರ, ಮಹಮ್ಮದಸಾಬ್ ಸಿದ್ದಿ, ಲಕ್ಷ್ಮಣ ಕಾರಬಾರಿ, ಚಂದ್ರಕಾಂತ ಕಾರಬಾರಿ, ಪ್ರಭಾಕರ ಜಾದವ, ನಾಗನಗೌಡ ಪಾಟೀಲ್ ಸೇರಿದಂತೆ ಅನೇಕ ರೈತರು, ಲೈನ್‌ಮನ್‌ಗಳು ಹಾಗೂ ವಿದ್ಯುತ್ ಬಳಕೆದಾರರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net