power grid: ವಿದ್ಯುತ್ ಗ್ರಿಡ್ ನಿರ್ಮಾಣ ನನೆಗುದಿಗೆ

ಮುಳಗುಂದ ಕಣವಿ ರಸ್ತೆಯಲ್ಲಿ ವಿದ್ಯತ್ ಗ್ರಿಡ್ ನಿರ್ಮಾಣಕ್ಕೆ ಜಾಗ ಗುರುತಿಸಿ ಬೇಲಿ ಹಾಕುವ ಕೆಲಸ ನಡೆದಿರುವುದು.
ಮುಳಗುಂದ ಕಣವಿ ರಸ್ತೆಯಲ್ಲಿ ವಿದ್ಯತ್ ಗ್ರಿಡ್ ನಿರ್ಮಾಣಕ್ಕೆ ಜಾಗ ಗುರುತಿಸಿ ಬೇಲಿ ಹಾಕುವ ಕೆಲಸ ನಡೆದಿರುವುದು.
Published on
ಮುಳಗುಂದ: ಗದಗ ಮತಕ್ಷೇತ್ರದಲ್ಲೆ ದೊಡ್ಡ ಪಟ್ಟಣವಾಗಿರುವ ಮುಳಗುಂದದಲ್ಲಿ ವಿದ್ಯುತ್ ಗ್ರಿಡ್ (power grid) ನಿರ್ಮಾಣವು ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದೆ. ವಿದ್ಯುತ್ ಅವಲಂಬಿತ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದ್ದು, ವೋಲ್ವೇಜ್ ವ್ಯತ್ಯಾಸ, ಪದೇಪದೆ ವಿದ್ಯುತ್ ಕಡಿತದಿಂದ ಬೇಸತ್ತಿರುವ ಸಾರ್ವಜನಿಕರು ವಿದ್ಯುತ್‌ಗಾಗಿ ನಿತ್ಯ ಪರಿತಪಿಸುವಂತಾಗಿದೆ.
ಸುಮಾರು 25 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣವು ಬಹುತೇಕ ಕೃಷಿ ಅವಲಂಬಿತವಾಗಿದೆ. ಜೊತೆಗೆ ಸಣ್ಣ ಕೈಗಾರಿಕೆ ಉದ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಕೃಷಿ, ತೋಟಗಾರಿಕೆ, ಕುಡಿಯುವ ನೀರು, ಸಣ್ಣ ಉದ್ಯಮಗಳಿಗೆ ಅಗತ್ಯವಿರುವ ವಿದ್ಯುತ್ ನಿರಂತರವಾಗಿ ಲಭ್ಯವಾಗುತ್ತಿಲ್ಲ. ಹೀಗಾಗಿ ಹಲವು ವರ್ಷಗಳಿಂದ ನಿರಂತರವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯಥೆಯ ಉಂಟಾಗುತ್ತಿದೆ.
ಮುಳಗುಂದ ಸೇರಿದಂತೆ ಚಿಂಚಲಿ, ಕಲ್ಲೂರ, ನೀಲಗುಂದ, ಬಸಾಪೂರ, ಸೀತಾಲಹರಿ ಗ್ರಾಮಾಂತರ ಪ್ರದೇಶಗಳಿಗೂ ಸುಮಾರು 25 ಕಿ.ಮೀ ದೂರದ ಗದಗ ಗ್ರಿಡ್ ಮೂಲಕ ವಿದ್ಯುತ್ ಪೂರೈಕೆಯಾಗುತ್ತಿದೆ. ಮಾರ್ಗ ಮಧ್ಯೆ ವಿದ್ಯುತ್ ಕಂಬಗಳಲ್ಲಿ ಒಂದಿಲ್ಲೊಂದು ಅಡೆತಡೆ (ಲೈನ್ ಫಾಲ್ಟ್) ಉಂಟಾಗಿ, ಪೂರೈಕೆ ಸ್ಥಗಿತವಾಗುವುದು ಸಾಮಾನ್ಯವಾಗಿದೆ. ಅಡತಡೆ ಪತ್ತೆಗೆ 20-30 ಕಿ.ಮೀ ಸುತ್ತುವ ಅನಿವಾರ್ಯತೆ ಇದ್ದು, 4-5 ತಾಸು ತೆಗೆದುಕೊಳ್ಳುತ್ತಿದೆ. ಸಿಬ್ಬಂದಿ ಇದರಿಂದ ದಿನವು ಹರಸಾಹಸ ಪಡುವ ಸ್ಥಿತಿ ಎದುರಾಗಿದೆ. ಮಳೆಗಾಲ ಆರಂಭವಾದರೆ ಸಾಕು ದಿನವಿಡಿ ವಿದ್ಯುತ್ ಇರೊದೇ ಇಲ್ಲ ಎನ್ನುವಂತಾಗಿದೆ.
ಇತ್ತಿಚಿನ ದಿನಗಳಲ್ಲಿ ನಿರಂತರವಾಗಿ ವಿದ್ಯುತ್ ವ್ಯತ್ಯಯವಾಗುತ್ತಿರುವ ಕಾರಣ ಪಟ್ಟಣದಲ್ಲಿ ಕುಡಿಯುವ ನೀರಿಗೂ ಬರ ಎದುರಾಗಿದೆ. ರೊಟ್ಟಿ ತಯಾರಿಸುವ ಯಂತ್ರಗಳು ಸ್ಥಗಿತವಾಗುತ್ತಿದ್ದು, ನೂರಾರು ಕಾರ್ಮಿಕರಿಗೆ ಕೆಲಸ ಇಲ್ಲದಾಗುತ್ತಿದೆ. ಕೃಷಿ ಉಪಕರಣ, ಯಂತ್ರ ಚಾಲಿತ ಟೇಲರಿಂಗ್ ವೃತ್ತಿಗೂ ಸಮಸ್ಯೆ ಎದುರಾಗಿದೆ. ಪಂಚರ್ ಶಾಪ್‌ಗಳಿಗೂ ವ್ಯಾಪಾರ ಇಲ್ಲದಾಗಿದ್ದು, ಗ್ರಾಹಕರು ದಿನವಿಡಿ ಕಾಯುವ ಸ್ಥಿತಿ ಇದೆ. ವಿದ್ಯುತ್ ಇಲ್ಲದ ಕಾರಣ ಮನೆಯಲ್ಲಿನ ಫ್ಯಾನ್-ಎಸಿ ಬಂದ್ ಆಗಿದ್ದು, ಸಾರ್ವಜನಿಕರಿಗೆ ಬಿಸಿಲಿನ ತಾಪ ಹೈರಾಣಾಗಿಸಿದೆ. ಹಿಟ್ಟಿನ ಗಿರಣಿಗಳು, ವಿದ್ಯುತ್ ಚಾಲಿತ ಎಣ್ಣೆ ಗಾಣಗಳು, ಮೋಟಾರ್ ವೈಂಡಿಂಗ್ ದುರಸ್ತಿ ಮಾಡುವವರಿಗೂ ತೊಂದರೆ ಆಗುತ್ತಿದೆ. ಅಲ್ಲದೆ ವೋಲ್ವೇಜ್ ವ್ಯತ್ಯಾಸ ಉಂಟಾಗುತ್ತಿದೆ.
ಮುಳಗುಂದ, ಬಸಾಪೂರ, ಸೀತಾಲಹರಿ, ನೀಲಗುಂದ ವ್ಯಾಪ್ತಿಯ ನೂರಾರು ಎಕರೆ ತೋಟಗಳಲ್ಲಿ ಬೇಸಿಗೆ ಶೇಂಗಾ ಹಾಗೂ ತರಕಾರಿ ಬೆಳೆಗಳು ನೀರಿಲ್ಲದೆ ಒಣಗುವ ಆತಂಕ ರೈತರಿಗೆ ಎದುರಾಗಿದೆ. ತೋಟದಲ್ಲಿ ದನಕರುಗಳನ್ನು ಕಟ್ಟಿಕೊಂಡು ಹೈನೋದ್ಯಮ ಮಾಡುತ್ತಿರುವ ರೈತರಿಗೂ ಸಮಯಕ್ಕೆ ಸರಿಯಾಗಿ ವಿದ್ಯುತ್ ಇಲ್ಲದ ಕಾರಣ ಸಮಸ್ಯೆ ಉಂಟಾಗಿದೆ. ಪದೇಪದೆ ವಿದ್ಯುತ್ ಕಡಿತದ ಪರಿಣಾಮ ಬೆಳೆಗಳಿಗೆ ನೀರೊದಗಿಸಲು ಸಾಧ್ಯವಾಗುತ್ತಿಲ್ಲ, ಹಗಲು-ರಾತ್ರಿ ಕಾಯುವ ಸ್ಥಿತಿ ಒದಗಿದೆ ಎಂದು ಹೆಸ್ಕಾಂ ವಿರುದ್ದ ರೈತ ಬಸವರಾಜ ಕರಿಗಾರ ಆಕ್ರೋಶ ವ್ಯಕ್ತಪಡಿಸಿದರು.
ಗ್ರಿಡ್ ನಿರ್ಮಾಣ ಸಂಬಂಧ ಎರಡು ದಶಕಗಳಿಂದ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಕೊಟ್ಟರೂ ಪ್ರಯೋಜನಕ್ಕೆ ಬಾರದಾಗಿದೆ. ಕಳೆದ ವರ್ಷವಷ್ಟೆ ಕಣವಿ ರಸ್ತೆಯಲ್ಲಿ ಗ್ರಿಡ್ ನಿರ್ಮಾಣಕ್ಕೆ 2 ಎಕರೆ ಭೂಮಿ ಖರೀದಿ ಮಾಡಿದ್ದು, ಈಗ ಬೇಲಿ ಹಾಕುವ ಕೆಲಸ ನಡೆದಿದೆ. ಆದರೆ ಗ್ರಿಡ್ ನಿಮಾರ್ಣಕ್ಕೆ ಇನ್ನೆಷ್ಟು ವರ್ಷಬೇಕು ಆ ದೇವರೇ ಬಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸ್ಥಳೀಯರು. ಸರ್ಕಾರ ಹೆಸ್ಕಾಂ ಇಲಾಖೆ ಗ್ರಿಡ್ ನಿರ್ಮಾಣ ತ್ವರಿತಗತಿಯಲ್ಲಿ ಮಾಡಬೇಕು, ಪದೇಪದೆ ವಿದ್ಯುತ್ ಕಡಿತ ಆಗುವುದನ್ನ ತಪ್ಪಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net