egg rate hike: ಮುಖ್ಯಶಿಕ್ಷಕರ ಜೇಬಿಗೆ ಮೊಟ್ಟೆ ಭಾರ!

ಮುಂಡರಗಿ ಪಟ್ಟಣದ ಪಿಎಂಶ್ರೀ ಎಸ್.ಎಂ.ಭೂಮರಡ್ಡಿ ಸ.ಹಿ.ಪ್ರಾ. ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟದೊಂದಿಗೆ ಮೊಟ್ಟೆ ವಿತರಿಸಲಾಗುತ್ತಿದೆ.
ಮುಂಡರಗಿ ಪಟ್ಟಣದ ಪಿಎಂಶ್ರೀ ಎಸ್.ಎಂ.ಭೂಮರಡ್ಡಿ ಸ.ಹಿ.ಪ್ರಾ. ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟದೊಂದಿಗೆ ಮೊಟ್ಟೆ ವಿತರಿಸಲಾಗುತ್ತಿದೆ.
Published on
ಸಂತೋಷ ಮುರಡಿ ಮುಂಡರಗಿ
ಶಾಲಾ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸುವ ಸಲುವಾಗಿ ಸರ್ಕಾರ ಮಕ್ಕಳಿಗೆ ಬಿಸಿಯೂಟದ ಜತೆಗೆ ಮೊಟ್ಟೆ ನೀಡುತ್ತಿದೆ. ಆದರೆ, ಇದೀಗ ಮಾರುಕಟ್ಟೆಯಲ್ಲಿ ಮೊಟ್ಟೆ ದರ ಏರಿಕೆ ಮುಖ್ಯಶಿಕ್ಷಕರು, ಎಸ್‌ಡಿಎಂಸಿ ಅವರ ಜೇಬಿನಿಂದ ಭಾರವಾಗಿದೆ.
ಸರ್ಕಾರ ಪ್ರತಿ ಮೊಟ್ಟೆ ಖರೀದಿಗೆ 5 ರೂ., ಮೊಟ್ಟೆ ಸಾಗಾಣಿಕೆಗೆ 20 ಪೈಸೆ, 30 ಪೈಸೆ ಮೊಟ್ಟೆ ಸುಲಿಯುವುದಕ್ಕೆ ಮತ್ತು 50 ಪೈಸೆ ಮೊಟ್ಟೆ ಬೇಯಿಸುವುದಕ್ಕೆ (ಗ್ಯಾಸ್ ಸಿಲಿಂಡರ್) ಸೇರಿ ಒಂದು ಮೊಟ್ಟೆಗೆ 6ನ ರೂ. ನೀಡಲಾಗುತ್ತಿದೆ. ಆದರೆ, ಇದೀಗ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಗೆ 7.50ರೂ. ದರ ಇದೆ. ದರ ಏರಿಕೆಯಿಂದ ಶಿಕ್ಷಕರಿಗೆ ಮೊಟ್ಟೆ ವಿತರಣೆಯದ್ದೇ ಚಿಂತೆಯಾಗಿದ್ದು, ಅನಿವಾರ್ಯವಾಗಿ ಸರ್ಕಾರದ ಆದೇಶವನ್ನು ಪಾಲಿಸುವ ನಿಟ್ಟಿನಲ್ಲಿ ತಮ್ಮ ಜೇಬಿನಿಂದ ಹೆಚ್ಚುವರಿ ಹಣ ತೆಗೆದು ಹಾಕುವಂತ ಸ್ಥಿತಿ ಮುಖ್ಯಶಿಕ್ಷಕರಿಗೆ ಎದುರಾಗುತ್ತಿದೆ.
ಮೊಟ್ಟೆ ಸೇವನೆ ಮಾಡದ ಮಕ್ಕಳಿಗೆ ಬಾಳೆ ಹಣ್ಣು ವಿತರಿಸಲಾಗುತ್ತದೆ. ಕೆಲವೊಮ್ಮೆ ಬಾಳೆ ಹಣ್ಣಿನ ದರದಲ್ಲೂ ಹೆಚ್ಚಳವಾಗುತ್ತದೆ. ಬಾಳೆ ಹಣ್ಣಿನ ದರ ಕಡಿಮೆ ಇದ್ದಾಗ ಶಿಕ್ಷಕರ ಜೇಬಿಗೆ ತಕ್ಕ ಮಟ್ಟಿಗೆ ಮೊಟ್ಟೆಯ ಹೊರೆ ಕಡಿಮೆಯಾಗುತ್ತದೆ. ಹೆಚ್ಚು ಮಕ್ಕಳು ಮೊಟ್ಟೆಯನ್ನು ಸೇವನೆ ಮಾಡಿದಾಗ ಮುಖ್ಯಶಿಕ್ಷಕರಿಗೆ ಹೆಚ್ಚುವರಿ ಖರ್ಚು ಬರುತ್ತಿದೆ.
ಪ್ರೆಟ್ರೋಲ್, ಡೀಸೆಲ್ ದರ ಏರಿಕೆ, ಸಾರಿಗೆ ಸಾಗಾಣಿಕೆ ವೆಚ್ಚ ಏರಿಕೆ, ಕೋಳಿ ಆಹಾರದ ದರ ಹೆಚ್ಚಳದಿಂದಾಗಿ ಮೊಟ್ಟೆ ದರ ಏರಿಕೆಗೆ ಕಾರಣವಾಗಿದೆ. ಕೆಲವೊಂದು ಕೋಳಿ ಫಾರ್ಮ್‌ಗಳಿಂದ ಗೋವಾ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಗೆ ಮೊಟ್ಟೆ ಪೂರೈಕೆಯಾಗುತ್ತಿರುವುದರಿಂದಲೂ ದರದಲ್ಲಿ ಏರಿಕೆಗೆ ಕಾರಣ ಇರಬಹುದು ಎನ್ನುತ್ತಾರೆ ಸ್ಥಳೀಯ ಮೊಟ್ಟೆ ವ್ಯಾಪಾರಿಯೊಬ್ಬರು.
"

ಸರ್ಕಾರ ಒಂದು ಮೊಟ್ಟೆ ಖರೀದಿಗೆ 6 ರೂ. ನೀಡುತ್ತದೆ. ಆದರೆ, ಈಗ ಮಾರುಕಟ್ಟೆಯಲ್ಲಿ ಮೊಟ್ಟೆಯ ದರ 7.50ರೂ.ಗೆ ತಲುಪಿದೆ. ಮೊಟ್ಟೆ ವಿತರಣೆಗೆ ಹೆಚ್ಚುವರಿ ಖರ್ಚಾಗುತ್ತಿರುವುದನ್ನು ಮುಖ್ಯಶಿಕ್ಷಕರು, ಎಸ್‌ಡಿಎಂಸಿ ಅವರೇ ಭರಿಸಬೇಕಾಗಿದೆ. ಸರ್ಕಾರ ಮೊಟ್ಟೆಗೆ ನೀಡುವ ಅನುದಾನ ಪರಿಷ್ಕರಣೆ ಮಾಡಿ ಹೆಚ್ಚುವರಿ ಅನುದಾನ ನೀಡಿ ಶಿಕ್ಷಕರಿಗಾಗುವ ಹೊರೆ ನಿವಾರಿಸಬೇಕು.

— ಎಂ.ಪಿ. ಶೀರನಹಳ್ಳಿ ತಾಲೂಕಾಧ್ಯಕ್ಷ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮುಂಡರಗಿ

"

ಮಾರುಕಟ್ಟೆಯಲ್ಲಿ ಮೊಟ್ಟೆ ದರ ಹೆಚ್ಚಿದೆ. ಮೊಟ್ಟೆ ಖರೀದಿಸುವುದಕ್ಕೆ ಶಿಕ್ಷಕರಿಗೆ ಕಷ್ಟ ಇದೆ. ಮೊಟ್ಟೆಯ ದರ 6ರೂ. ನಿಂದ 8ರೂ. ಗೆ ಏರಿಕೆ ಮಾಡಬೇಕೆನ್ನುವುದು 2 ವರ್ಷದಿಂದ ಶಿಕ್ಷಕರ ಬೇಡಿಕೆ ಇದೆ. ಈ ಬಗ್ಗೆ ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ಪತ್ರ ಸಹ ನೀಡಲಾಗಿದೆ. ಸರ್ಕಾರದ ಹಂತದಲ್ಲಿಯೇ ಇದು ಬಗೆಹರಿಯಬೇಕಾಗಿದೆ.

— ಎಸ್.ವೈ.ವಿಭೂತಿ ಸಹಾಯಕ ನಿರ್ದೇಶಕ, ಅಕ್ಷರ ದಾಸೋಹ ಮುಂಡರಗಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net