ಶಿರಹಟ್ಟಿ: ಕೃಷಿ ಹಾಗೂ ಜಲಸಂಪನ್ಮೂಲಗಳ ಪ್ರತ್ಯಕ್ಷ ಸ್ಥಿತಿಗತಿ ಆಧಾರದ ಮೇಲೆ ಸರ್ಕಾರಕ್ಕೆ ವರದಿ ಸಲ್ಲಿಸಿ, ಸಂಕಷ್ಟ್ಟದಲ್ಲಿರುವ ರೈತರಿಗೆ farmers ಸೂಕ್ತ ಪರಿಹಾರ ಕಲ್ಪಿಸಲಾಗುತ್ತದೆ ಎಂದು ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದ ತಾಲೂಕು ಸಾಮರ್ಥ್ಯ ಸೌಧದ ಸಭಾಂಗಣದಲ್ಲಿ ಶನಿವಾರ ಕರೆಯಲಾದ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ ಬರ ಪರಿಸ್ಥಿತಿ ಸಭೆಯಲ್ಲಿ ಅವರು ಮಾತನಾಡಿದರು.
‘ಈ ಭಾಗದಲ್ಲಿ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಯಾಗಿದ್ದು, ನಿಯಮಾವಳಿ ಪ್ರಕಾರ ‘ಬರಪೀಡಿತ ಪ್ರದೇಶ’ ಎಂದು ಘೋಷಿಸಲು ಪೂರ್ಣ ಅರ್ಹತೆ ಹೊಂದಿದೆ. ಬರ ಪರಿಸ್ಥಿತಿ ಕುರಿತು ಎರಡು ವಾರಗಳ ದತ್ತಾಂಶಗಳನ್ನು ಕ್ರೋಡೀಕರಿಸಿ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಾಗುತ್ತದೆ’ ಎಂದರು.
ಸಭೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಲ್ಲಿಸಿದ ಮಾಹಿತಿಯು ಅಪೂರ್ಣ ಹಾಗೂ ಗೊಂದಲದಿಂದ ಕೂಡಿದ್ದರಿಂದ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ ಅವರು ನೀಡಿದ ಮಾಹಿತಿ ಪತ್ರದ ಕುರಿತು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಶಿರಹಟ್ಟಿ ತಾಲೂಕಿನಲ್ಲಿ ಹೆಸರು ಬೆಳೆ ಬಿತ್ತನೆ ಕ್ಷೇತ್ರ 2,220 ಹೆಕ್ಟೇರ್ ಹಾಗೂ ಹಾನಿಗೊಳಗಾದ ಕ್ಷೇತ್ರ 2,220 ಹೆಕ್ಟೇರ್ ಎಂದು ಹೇಳಿ, ಶೇ. 50 ರಷ್ಟು ಹಾನಿಯಾಗಿದೆ ಎಂದು ವರದಿ ನೀಡಿದ್ದು, ಗೊಂದಲಕ್ಕೆ ಕಾರಣವಾಯಿತು.
ಮೆಕ್ಕೆಜೋಳ (27,070 ಹೆಕ್ಟೇರ್), ಶೇಂಗಾ (755 ಹೆಕ್ಟೇರ್), ಹತ್ತಿ (370 ಹೆಕ್ಟೇರ್) ತೊಗರಿ (1,550 ಹೆಕ್ಟೇರ್) ಬೆಳೆಗಳ ವರದಿಯಲ್ಲೂ ಬಿತ್ತನೆ ಹಾಗೂ ಹಾನಿಯ ಅಂದಾಜಿನಲ್ಲಿ ಸ್ಪಷ್ಟತೆ ಇರಲಿಲ್ಲ. ಲಕ್ಷ್ಮೇಶ್ವರ ತಾಲೂಕಿನ ವರದಿಯಲ್ಲೂ ಇದೇ ಲೋಪ ಕಂಡುಬಂತು.
ಇದು ಕೇವಲ ಪ್ರಾಥಮಿಕ ಅಂದಾಜು ವರದಿಯಾಗಿದ್ದು, ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಮಾಹಿತಿ ತಯಾರಿಸಬಾರದು. ಜಮೀನುಗಳಿಗೆ ಖುದ್ದು ಭೇಟಿ ನೀಡಿ ನಿಖರ ದತ್ತಾಂಶ ನೀಡಬೇಕು ಎಂದು ಸಚಿವರು ನಿರ್ದೇಶಿಸಿದರು. ಬೆಳೆವಿಮೆ ಪಾವತಿಸಿದ ಮತ್ತು ಪಾವತಿಸದ ರೈತರ ಸರಿಯಾದ ಸಂಖ್ಯೆ ಲಭ್ಯವಾಗದಿದ್ದರೆ, ಪರಿಹಾರ ಧನ ತಲುಪಿಸುವಲ್ಲಿ ತೊಂದರೆಯಾಗುತ್ತದೆ ಎಂದು ಸಚಿವರು ತಿಳಿಸಿದರು.
ಶಿರಹಟ್ಟಿ ತಾಲೂಕಿಗೆ ಬಹುಗ್ರಾಮ ಯೋಜನೆಯಡಿ ತುಂಗಭದ್ರಾ ನದಿಯಿಂದ 38 ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ. ಆದರೆ, ಲಕ್ಷ್ಮೇಶ್ವರ ತಾಲೂಕಿನಲ್ಲಿ ನೀರು ಪೂರೈಕೆ ವ್ಯವಸ್ಥೆ ಇರುವ ಗ್ರಾಮಗಳ ನಿಖರ ಸಂಖ್ಯೆ ನೀಡುವಲ್ಲಿ ಅಧಿಕಾರಿಗಳು ಗೊಂದಲ ಮೂಡಿಸಿದರು.
2026ರ ಜನಸಂಖ್ಯೆ ಆಧರಿಸಿ ನಗರಕ್ಕೆ ಅಗತ್ಯವಿರುವ ನೀರಿನ ಪ್ರಮಾಣದ ಬಗ್ಗೆ ಲಕ್ಷ್ಮೇಶ್ವರ ಪುರಸಭೆ ಮುಖ್ಯಾಧಿಕಾರಿಗಳು ಸೂಕ್ತ ಅಂಕಿ-ಅಂಶ ನೀಡಲು ವಿಫಲರಾದರು.
ಶಾಸಕ ಚಂದ್ರು ಡಾ. ಲಮಾಣಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ತಹಸೀಲ್ದಾರ್ ರಾಘವೇಂದ್ರ ರಾವು, ತಹಸೀಲ್ದಾರ್ ಧನಂಜಯ ಎಂ, ಜಿಪಂ ಯೋಜನಾಧಿಕಾರಿ ಜಿ.ಎಂ. ಮುಂಡರಗಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ, ವೀರಯ್ಯ ಮಠಪತಿ ಇತರರಿದ್ದರು.