RURAL: ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಮರೀಚಿಕೆ!

ಗಜೇಂದ್ರಗಡ ಪಟ್ಟಣದ ಗದಗ ರಸ್ತೆಯಲ್ಲಿರುವ ತಾಲೂಕು ಪಂಚಾಯತ್ ಕಾರ್ಯಾಲಯ.
ಗಜೇಂದ್ರಗಡ ಪಟ್ಟಣದ ಗದಗ ರಸ್ತೆಯಲ್ಲಿರುವ ತಾಲೂಕು ಪಂಚಾಯತ್ ಕಾರ್ಯಾಲಯ.
Published on

ಪ್ರಮುಖ ಮುಖ್ಯಾಂಶಗಳು

  • ಜನಪ್ರತಿನಿಧಿಗಳಿಲ್ಲದೆ ಬಿಕೋ ಎನ್ನುತ್ತಿವೆ ಪಂಚಾಯಿತಿಗಳು
  • ಜನರ ಸಮಸ್ಯೆಗೆ ಸ್ಪಂದಿಸದ ಆಡಳಿತಾಧಿಕಾರಿಗಳು
  • ಅಧಿಕಾರ ವಿಕೇಂದ್ರೀಕರಣದ ಆಶಯಕ್ಕೆ ದೊಡ್ಡ ಹೊಡೆತ
ಮಂಜುನಾಥ ಕುದರಿಕೋಟಿ ಗಜೇಂದ್ರಗಡ
ಗ್ರಾಮ ಪಂಚಾಯಿತಿಗಳಲ್ಲಿ ಚುನಾಯಿತ ಜನಪ್ರತಿನಿಧಿಗಳಿಲ್ಲದ ಕಾರಣ ಅಭಿವೃದ್ಧಿ ಕುಂಠಿತಗೊಂಡಿದ್ದು ಕುಡಿಯುವ ನೀರು, ಸೂರು, ಸ್ವಚ್ಛತೆ, ಆರೋಗ್ಯ ಸೇರಿದಂತೆ ಮೂಲ ಸೌಕರ್ಯಗಳ ಸಮಸ್ಯೆ ತಾಂಡವವಾಡುತ್ತಿದೆ. ಗ್ರಾಮಸ್ಥರ ಸಮಸ್ಯೆಗೆ ಆಡಳಿತಾಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ.
ಜನರ ಸಮಸ್ಯೆಗಳನ್ನು ಆಲಿಸಬೇಕಾದ ಅಧಿಕಾರಿಗಳು ಗ್ರಾಮಗಳತ್ತ ಮುಖ ಮಾಡುತ್ತಿಲ್ಲ ಎನ್ನುವ ದೂರುಗಳು ಸಾಮಾನ್ಯವಾಗಿವೆ. ಕಳೆದ ಫೆಬ್ರವರಿ-ಮಾರ್ಚ್ ಮೊದಲ ವಾರದಲ್ಲಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಅಧಿಕಾರದ ಅವಧಿ ಮುಕ್ತಾಯಗೊಂಡಿದ್ದು ಬಳಿಕ ಸರ್ಕಾರ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿದೆ. ಆದರೆ, ಈ ವ್ಯವಸ್ಥೆಯಿಂದ ಜನರಿಗೆ ಮತ್ತಷ್ಟು ತೊಂದರೆ ಉಂಟಾಗಿದೆ.
ಅಧಿಕಾರಿಗಳು ಸಾರ್ವಜನಿಕರ ಅಹವಾಲುಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಪಿಡಿಒಗಳ ಸಮಯಕ್ಕೆ ಸರಿಯಾಗಿ ಪಂಚಾಯಿತಿಗೆ ಬರುತ್ತಿಲ್ಲ. ಅವರ ನಿರ್ಲಕ್ಷೃದಿಂದ ಗ್ರಾಮಗಳಲ್ಲಿ ಸ್ವಚ್ಛತೆ ಹದಗೆಟ್ಟಿದ್ದು ಸಾರ್ವಜನಿಕ ಸ್ಥಳಗಳು ಕಸದ ತಾಣಗಳಾಗಿ ಮಾರ್ಪಟ್ಟಿವೆ. ಪಂಚಾಯಿತಿ ಚುನಾವಣೆಗಳು ವಿಳಂಬವಾಗುತ್ತಿರುವುದು ಅಧಿಕಾರ ವಿಕೇಂದ್ರೀಕರಣದ ಆಶಯಕ್ಕೆ ದೊಡ್ಡ ಹೊಡೆತವಾಗಿದೆ. ಗ್ರಾಮ ಸಭೆಗಳ ಮಹತ್ವ ಕುಸಿದಿದ್ದು, ಪಂಚಾಯಿತಿ ಆಡಳಿತದಲ್ಲಿ ಸರ್ಕಾರದ ನೇರ ಹಸ್ತಕ್ಷೇಪ ಹೆಚ್ಚಾಗಿದೆ. ಗ್ರಾಮ ಮಟ್ಟದ ಸಮಸ್ಯೆಗಳಿಗೂ ಜನರು ಶಾಸಕರ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಆಡಳಿತಾಧಿಕಾರಿಗಳ ನೇಮಕ

ಪಿಡಿಒಗಳೊಂದಿಗೆ ಗ್ರಾಮಗಳ ಆಡಳಿತವನ್ನು ನೋಡಿಕೊಳ್ಳಲು ತಾಲೂಕಿನ ಎಲ್ಲ ಇಲಾಖೆಯ ಮೇಲಾಧಿಕಾರಿಗಳನ್ನು ಗ್ರಾಪಂ ಆಡಳಿತಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಆದರೆ, ಆಡಳಿತಾಧಿಕಾರಿಗಳು ಯಾರು ಎಂಬುದೇ ಜನರಿಗೆ ಇನ್ನೂ ತಿಳಿಯುತ್ತಿಲ್ಲ. ಬಹುತೇಕ ಆಡಳಿತಾಧಿಕಾರಿಗಳು ಪಂಚಾಯತಿಗಳಿಗೆ ಭೇಟಿ ನೀಡಿಲ್ಲ. ಆಡಳಿತಾಧಿಕಾರಿಗಳು ಕೆಲವ ಚೆಕ್‌ಗಳಿಗೆ ಸಹಿ ಮಾಡಲು ಮಾತ್ರ ನೇಮಕ ಗೊಂಡಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎನ್ನುವ ಆರೊಪಗಳು ಕೇಳಿಬಂದಿವೆ.

ಹಳ್ಳಿಗಳ ಅಭಿವೃದ್ಧಿಗಾಗಿ ಮಹಾತ್ಮ ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಪರಿಕಲ್ಪನೆ ನೀಡಿದ್ದರು. ಗ್ರಾಮ ಪಂಚಾಯಿತಿಗಳ ಮೂಲಕ ಜನರ ಕೈಗೆ ಅಧಿಕಾರ ಕೊಟ್ಟಿದ್ದರು. ಆದರೆ ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸದೇ ಆ ಆಶಯವನ್ನು ಮಣ್ಣು ಮಾಡಲಾಗುತ್ತಿದೆ. ಅಧಿಕಾರಿಗಳು ಪಂಚಾಯಿತಿಗಳಲ್ಲಿ ದರ್ಪ ತೋರುತ್ತಿದ್ದಾರೆ. ಪಿಡಿಒಗಳು ಯಾವುದಾದರೊಂದು ಕಾರಣ ಹೇಳಿ ಪಂಚಾಯತಿಗೆ ಬರುವದನ್ನೇ ಬಿಟ್ಟಿದ್ದಾರೆ. ಇದರಿಂದ ಜನರು ಮೂಲ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ. ಮೇಲಧಿಕಾರಿಗಳು ಗ್ರಾಮೀಣ ಭಾಗದ ಜನರ ಕಡೆ ಗಮನ ಹರಿಸಬೇಕು.

— ಆಯಿಷಾ ಬೇಗಂ ಮೋಕಾಸಿ, ನಿಕಟಪೂರ್ವ ಗ್ರಾಪಂ ಅಧ್ಯಕ್ಷೆ, ಸೂಡಿ

ಅನಿವಾರ್ಯ ಕಾರಣದಿಂದ ಕೆಲವೆಡೆ ಎರಡು ಪಂಚಾಯಿತಿಗಳಿಗೆ ಒಬ್ಬರೇ ಪಿಡಿಒಗಳನ್ನು ನೇಮಿಸಲಾಗಿದೆ. ಇದು ಪಿಡಿಒಗಳಿಗೆ ಹೊರೆಯಾಗುತ್ತಿದೆ. ವಾರದಲ್ಲಿ ಒಂದು ಪಂಚಾಯಿತಿಗೆ 3 ದಿನದಂತೆ ಎರಡು ಪಂಚಾಯಿತಿಗಳನ್ನು ಪಿಡಿಒಗಳು ನಿಭಾಯಿಸುತ್ತಿದ್ದಾರೆ. ಎಲ್ಲ ಪಂಚಾಯಿತಿಗಳಲ್ಲೂ ಆಡಳಿತಧಿಕಾರಿಗಳು ಇದ್ದು ಅವರು ಪಂಚಾಯಿತಿಗಳಿಗೆ ಬರದೇ ಇರುವುದು ಗಮಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ವಾರಕ್ಕೆ ಮೂರು ದಿನವಾದರೂ ಭೇಟಿ ನೀಡುವಂತೆ ಸೂಚಿಸಲಾಗುತ್ತದೆ.

— ಚಂದ್ರಶೇಖರ ಕಂದಕೂರ, ತಾಪಂ ಇಒ, ಗಜೇಂದ್ರಗಡ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net