ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಇಸ್ಮಾಯಿಲ್ ಆಡೂರ ಮಾತನಾಡಿ, ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ನಿಯಮಗಳನ್ನು ಗಾಳಿ ತೂರಲಾಗಿದೆ. ಪುರಸಭೆಯ ವಾಣಿಜ್ಯ ಮಳಿಗೆಗಳನ್ನು ಪುರಸಭೆಯ ಸದಸ್ಯರೇ ಪಡೆದುಕೊಂಡಿದ್ದಾರೆ. ಅವುಗಳನ್ನು ಲಾಭದ ಉದ್ದೇಶಕ್ಕಾಗಿ ಬೇರೆಯವರಿಗೆ ಬಾಡಿಗೆ ಕೊಟ್ಟಿದ್ದಾರೆ ಎಂದು ದೂರಿದರು. ಮಳಿಗೆಗಳ ಸುಣ್ಣ- ಬಣ್ಣ ಕಾಣದೆ ಹಾಳಾಗಿವೆ. ಮೂಲಸೌಲಭ್ಯಗಳು ವಾಣಿಜ್ಯ ಮಳಿಗೆಗಳಲ್ಲಿಲ್ಲ. 15 ದಿನಗಳೊಳಗಾಗಿ ಅವಧಿ ಮುಗಿದ ಮಳಿಗೆಗಳನ್ನು ಪುರಸಭೆಯ ವಶಕ್ಕೆ ಪಡೆದುಕೊಂಡು ಅವುಗಳ ದುರಸ್ತಿ, ಸುಣ್ಣ ಬಣ್ಣಗಳನ್ನು ಮಾಡಿಸಿ ಹೊಸದಾಗಿ ಟೆಂಡರ್ ಪ್ರಕ್ರಿಯೆ ಮೂಲಕ ಬಾಡಿಗೆ ಕೊಡಬೇಕು ಎಂದು ಆಗ್ರಹಿಸಿದರು. ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಅವಧಿ ಮುಗಿದ ಮಳಿಗೆಗಳ ಮಾಲೀಕರಿಗೆ ನೋಟಿಸ್ ನೀಡಲಾಗುವುದು. 15 ದಿನಗಳೊಳಗಾಗಿ ವಶಕ್ಕೆ ಪಡೆದು ಕ್ರಮ ಕೈಕೊಳ್ಳಲಾಗುವುದು ಎಂದು ಭರವಸೆ ನೀಡಿದರು.