WATER: ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹ

ನರಗುಂದ ನಗರಕ್ಕೆ ಸಮರ್ಪಕ ಕುಡಿಯುವ (WATER) ನೀರು ಪೂರೈಸುವಂತೆ ಆಗ್ರಹಿಸಿ ಪುರಸಭೆ ಕಚೇರಿ ಎದುರು ಮಹಿಳೆಯರು ಖಾಲಿ ಕೊಡಗಳೊಂದಿಗೆ ಬುಧವಾರ ಪ್ರತಿಭಟನೆ ನಡೆಸಿದರು. ಡಾ. ಎಚ್.ಆರ್. ಹಿರೇಹಾಳ, ಪ್ರಕಾಶ ಡಂಬಳ, ದತ್ತಾತ್ರೇಯ ಜೋಗಣ್ಣವರ, ಕಿರಣ ಜೋಗಣ್ಣವರ, ಗುರುನಾಥ ಕೆಂಗಾರಕರ ಇತರರಿದ್ದರು.
ನರಗುಂದ ನಗರಕ್ಕೆ ಸಮರ್ಪಕ ಕುಡಿಯುವ (WATER) ನೀರು ಪೂರೈಸುವಂತೆ ಆಗ್ರಹಿಸಿ ಪುರಸಭೆ ಕಚೇರಿ ಎದುರು ಮಹಿಳೆಯರು ಖಾಲಿ ಕೊಡಗಳೊಂದಿಗೆ ಬುಧವಾರ ಪ್ರತಿಭಟನೆ ನಡೆಸಿದರು. ಡಾ. ಎಚ್.ಆರ್. ಹಿರೇಹಾಳ, ಪ್ರಕಾಶ ಡಂಬಳ, ದತ್ತಾತ್ರೇಯ ಜೋಗಣ್ಣವರ, ಕಿರಣ ಜೋಗಣ್ಣವರ, ಗುರುನಾಥ ಕೆಂಗಾರಕರ ಇತರರಿದ್ದರು.
Published on
ನರಗುಂದ: ಸಮರ್ಪಕವಾಗಿ ಕುಡಿಯುವ (WATER) ನೀರು ಪೂರೈಸುವಂತೆ ಆಗ್ರಹಿಸಿ ಪಟ್ಟಣದ ವಿವಿಧ ಬಡಾವಣೆಯ ಮಹಿಳೆಯರು, ಸಾರ್ವಜನಿಕರು ಖಾಲಿ ಬಿಂದಿಗೆ, ಟಾಕಿ, ಬ್ಯಾರಲ್‌ಗಳೊಂದಿಗೆ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನರಗುಂದ ನಗರಕ್ಕೆ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರಂತರ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲಾಗಿದೆ. ಆದರೆ, ಅವೈಜ್ಞಾನಿಕ ಪೈಪ್‌ಲೈನ್ ಕಾಮಗಾರಿಯಿಂದ ವಿವೇಕಾನಂದ ನಗರ, ಕಸಬಾ, ಮಾರುತಿ ನಗರ, ಸೋಮಾಪೂರ, ರಾಚಯ್ಯನಗರ, ಅಂಬೇಡ್ಕರ್ ನಗರ, ಕೊರವರ ಓಣಿಯ ನಿವಾಸಿಗಳಿಗೆ ಸರಿಯಾಗಿ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಅವೈಜ್ಞಾನಿಕ ಪೈಪ್‌ಲೈನ್ ಕಾಮಗಾರಿಯಿಂದ ಸರಿಯಾಗಿ ನೀರು ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೀಗ ಬೇಸಿಗೆ ಕಾರಣ ನೆಪವೊಡ್ಡಿ ಪುರಸಭೆ ಅಧಿಕಾರಿಗಳು ಒಂದು ವಾರ ಅಥವಾ 10 ರಿಂದ 15 ದಿನಗಳಿಗೊಮ್ಮೆ ನೀರು ಸರಬರಾಜು ಮಾಡುತ್ತಿರುವುದರಿಂದ ಜನ ಸಾಮಾನ್ಯರಿಗೆ ವಿಪರೀತ ಸಮಸ್ಯೆ ಉಂಟಾಗುತ್ತಿದೆ.
ವಿವೇಕಾನಂದ ನಗರಕ್ಕೆ ಮಧ್ಯಾಹ್ನ 1 ಗಂಟೆಗೆ ನೀರು ಬಿಟ್ಟರೆ ರಾತ್ರಿ 10.30ರ ಸಮಾರಿಗೆ ಮನೆಗಳಿಗೆ ತಲುಪುತ್ತದೆ. ಇದಾದ ಒಂದೆರಡು ಗಂಟೆಗಳಲ್ಲೇ ನೀರು ಪೂರೈಕೆ ಬಂದ್ ಮಾಡುವುದರಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ರಾತ್ರಿ ವೇಳೆ ನೀರು ಬಿಡುವುದರಿಂದ ವಿಷ ಜಂತುಗಳ ಭಯ ಕಾಡುವುದರ ಜತೆಗೆ ಬಡಾವಣೆಯ ಜನರು ನಿದ್ರಾಹೀನ ಸಮಸ್ಯೆ ಎದುರಿಸುವಂತಾಗಿದೆ. ಈ ಬಗ್ಗೆ ಪುರಸಭೆ ಅಧಿಕಾರಿ, ಸಿಬ್ಬಂದಿಯನ್ನು ಪ್ರಶ್ನಿಸಿದರೆ ಅಸಮಂಜಸ ಉತ್ತರ ನೀಡುತ್ತಿದ್ದಾರೆ ಎಂದು ಪ್ರತಿಭಟನೆಕಾರರು ಆರೋಪಿಸಿದರು.
ಪುರಸಭೆ ನೀರು ಸರಬರಾಜು ವಿಭಾಗದ ವ್ಯವಸ್ಥಾಪಕ ಸಿದ್ದಪ್ಪ ಆಯಟ್ಟಿ, ಸಿದ್ದು ಕಿಲಾರಿ ಮಾತನಾಡಿ, ಬೇಸಿಗೆ ಹಿನ್ನೆಲೆಯಲ್ಲಿ ಆಗಾಗ ವಿದ್ಯುತ್ ಕೈ ಕೊಡುತ್ತಿದೆ. ಸವದತ್ತಿ ನವಿಲುತೀರ್ಥ ಜಲಾಶಯದಿಂದ ಚಿಕ್ಕನರಗುಂದ ಕ್ರಾಸ್‌ನಲ್ಲಿರುವ ನೀರು ಶುದ್ಧೀಕರಣ ಘಟಕಕ್ಕೆ ತಲುಪಬೇಕಾದ ಬಹುಪಾಲು ನೀರನ್ನು ಹೂಲಿಕಟ್ಟಿ, ಮನಿಕಟ್ಟಿ ಭಾಗದ ರೈತರು ರಾಜಾರೋಷವಾಗಿ ತಮ್ಮ ಜಮೀನಿನ ಕೃಷಿ, ತೋಟಗಾರಿಕೆ, ಜನ-ಜಾನುವಾರುಗಳ ಕುಡಿಯಲು ಬಳಸಿಕೊಳ್ಳುತ್ತಿದ್ದಾರೆ. ಪರಿಣಾಮ ಬೇಸಿಗೆಯಲ್ಲಿ ಸಮರ್ಪಕ ಕುಡಿಯುವ ನೀರಿನ ಪೂರೈಕೆ ಕಷ್ಟಕರವಾಗಿ ಪರಿಣಿಮಿಸುತ್ತಿದೆ. ವಿಪರೀತ ನೀರಿನ ಸಮಸ್ಯೆ ಎದುರಿಸುವ ವಿವೇಕಾನಂದ ನಗರಕ್ಕೆ ತಾತ್ಕಾಲಿಕವಾಗಿ ತಕ್ಷಣವೇ ಟ್ಯಾಂಕರ್ ಮೂಲಕ ನೀರು ಪೊರೈಸಲಾಗುತ್ತದೆ. ಹಂತ-ಹಂತವಾಗಿ ನಗರದ ಎಲ್ಲ ಬಡಾವಣೆಗಳಿಗೂ ನಲ್ಲಿಗಳ ಮೂಲಕ ಸಮರ್ಪಕ ಕುಡಿಯುವ ನೀರಿನ ಪೂರೈಕೆ ಮಾಡುವುದಾಗಿ ಭರವಸೆ ನೀಡಿದ್ದರಿಂದ ಸಾರ್ವಜನಿಕರು ಪ್ರತಿಭಟನೆ ಹಿಂಪಡೆದರು.
ಡಾ. ಎಚ್.ಆರ್. ಹಿರೇಹಾಳ, ಪ್ರಕಾಶ ಡಂಬಳ, ದತ್ತಾತ್ರೇಯ ಜೋಗಣ್ಣವರ, ಕಿರಣ ಜೋಗಣ್ಣವರ, ಗುರುನಾಥ ಕೆಂಗಾರಕರ, ಡಾ. ಮುತ್ತು ಸುರಕೋಡ, ರತ್ನಪ್ಪ ಜವಳಿ, ಸುವರ್ಣ ಶಿರಹಟ್ಟಿ, ಜನ್ನತಬಿ ಕಿಲ್ಲೇದಾರ, ಬಸವ್ವ ಗೊಂದಿ, ರೋಷನ್ ನದಾಫ್, ರಿಯಾನಾ ನದಾಫ್, ನಭಿಸಾಬ ಕಿಲ್ಲೇದಾರ, ನಾಗಮ್ಮ ಗೊಂದಿ, ಜನ್ನತಬಿ ಬೀಳಗಿ, ಕಾಜವ್ವ ಹೂಲಗೇರಿ, ರೇಣವ್ವ ದೇವನೂರ, ಖಂಡೋಬಾ ಮೋಟೆ, ಗೋಪಾಲ ದ್ಯಾವಣ್ಣವರ, ಉಮೇಶ ಕಾಳೆ, ಆನಂದ ದೊಡಮನಿ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net