ಮುಂಡರಗಿ: ತಾಲೂಕಿನ ಚಿಕ್ಕವಡ್ಡಟ್ಟಿ (Chikkavaddatti) ಗ್ರಾಮದ ದಲಿತ ಮಾದಿಗ ಸಮುದಾಯಕ್ಕೆ ಪ್ರತ್ಯೇಕವಾಗಿ ನ್ಯಾಯಬೆಲೆ ಅಂಗಡಿ, ಸಾಮೂಹಿಕ ಶೌಚಗೃಹ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ಗುರುವಾರ ತಹಸೀಲ್ದಾರ್ ಎರ‍್ರಿಸ್ವಾಮಿ ಪಿ.ಎಸ್. ಅವರಿಗೆ ಮನವಿ ಸಲ್ಲಿಸಲಾಯಿತು.
ಚಿಕ್ಕವಡ್ಡಟ್ಟಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಕಾಲನಿಯಲ್ಲಿ ೧೫೦ ಪಡಿತರ ಚೀಟಿಗಳನ್ನು ಹೊಂದಿದ್ದು ಅದಕ್ಕಾಗಿ ಪ್ರತ್ಯೇಕವಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಬೇಕು. ನರೇಗಾ ಯೋಜನೆಯಡಿ ನಿರಂತರ ಕೆಲಸ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಬೇಕು. ಮಹಿಳೆಯರಿಗೆ ಬಯಲು ಬಹಿರ್ದೆಸೆ ತಪ್ಪಿಸಲು ಸಾಮೂಹಿಕ ಮಹಿಳಾ ಶೌಚಗೃಹ ಮಂಜೂರು ಮಾಡಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.