bus stand: ಇಲ್ಲಗಳ ಮಧ್ಯೆ ನರಳುತ್ತಿದೆ ನರೇಗಲ್ಲ ಬಸ್ ನಿಲ್ದಾಣ!

ನರೇಗಲ್ಲನ ಬಸ್ ನಿಲ್ದಾಣದ ದುಸ್ಥಿತಿ.
ನರೇಗಲ್ಲನ ಬಸ್ ನಿಲ್ದಾಣದ ದುಸ್ಥಿತಿ.
Published on
ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ
ಪಟ್ಟಣದ ಬಸ್ ನಿಲ್ದಾಣದಲ್ಲಿ ಮೂಲ ಸೌಲಭ್ಯಗಳು ಮರೀಚಿಕೆಯಾಗಿದ್ದು, ಇದರಿಂದ ನಿತ್ಯ ಪ್ರಯಾಣಿಕರು ವೇದನೆ ಅನುಭವಿಸುವಂತಾಗಿದೆ.
ನಿಲ್ದಾಣದ ಶೌಚಗೃಹಗಳಲ್ಲಿ ಸ್ವಚ್ಛತೆ ಇಲ್ಲ. ಮೂತ್ರ ವಿಸರ್ಜನೆ ಪ್ಯಾನ್‌ಗಳು ಮುರಿದು ಬಿದ್ದಿವೆ. ನಿಲ್ದಾಣದ ಅಂಗಳವಂತೂ ಕಸದ ಗೂಡಾಗಿದೆ. ಜೋತು ಬಿದ್ದ ಟ್ಯೂಬ್‌ಲೈಟ್, ಸರಿಯಾದ ವೇಳಾಪತ್ರಿಕೆ ಇಲ್ಲ, ಮಹಿಳೆಯರ ವಿಶ್ರಾಂತಿ ಕೊಠಡಿಗೆ ಬೀಗ ಹಾಕಲಾಗಿದೆ. ಹೀಗೆ ಪಟ್ಟಿ ಮಾಡುತ್ತ ಹೋದರೆ ಹನುಮನ ಬಾಲದಂತೆ ಬೆಳೆಯುತ್ತ ಹೋಗುತ್ತದೆ.
ನಿಲ್ದಾಣದ ಮೇಲ್ಚಾವಣಿ ಈಗಲೋ ಆಗಲೋ ಕುಸಿದು ಬೀಳುವಂತಿದೆ. ಈಗಾಗಲೇ ಮೇಲ್ಚಾವಣಿಯ ಒಳಗಿನ ಕೊಳೆತ ಕಾಂಕ್ರಿಟ್ ಬಾರ್‌ಗಳ ದರ್ಶನ ಎಲ್ಲರಿಗೂ ಆಗುತ್ತದೆ. ಪ್ರಯಾಣಿಕರು ಜೀವ ಕೈಯಲ್ಲಿಯೇ ಹಿಡಿದು ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ.
ಪ್ರಯಾಣಿಕರು ಸಮಾಧಾನದಿಂದ ಕುಳಿತು ಬರುವ ಬಸ್ ಕಾಯಬೇಕೆಂದರೆ ಕಂಬಗಳಿಗೆಲ್ಲ ಎಲೆ-ಅಡಿಕೆಯ ಕೆಂಪಿನ ಸಿಂಚನ. ಹೀಗಾಗಿ ಕಂಬಗಳು ನೋಡಲು ಅತ್ಯಂತ ಅಸಹ್ಯ ಎನಿಸುತ್ತಿವೆ. ಇದರಲ್ಲಿ ಪ್ರಯಾಣಿಕರದು, ಸಾರ್ವಜನಿಕರದು ಜವಾಬ್ದಾರಿಯಿದೆ.
ಯಾವ ಬಸ್‌ಗಳೂ ನಿಗದಿತ ಪ್ಲಾಟ್‌ಫಾರ್ಮ್‌ನಲ್ಲಿ ನಿಲ್ಲುವುದಿಲ್ಲ. ಹೀಗಾಗಿ ಬಸ್‌ಗಾಗಿ ಪ್ರಯಾಣಿಕರು ನಿಲ್ದಾಣದ ಓಡಾಡಬೇಕಾಗುತ್ತದೆ. ಮಹಿಳೆಯರು ತಮ್ಮ ಮಕ್ಕಳನ್ನು ಕಂಕುಳಲ್ಲಿ ಎತ್ತಿಕೊಂಡು ನಿಲ್ದಾಣದ ತುಂಬಾ ಓಡಾಡುವ ದೃಶ್ಯ ಶೋಚನೀಯವಾಗಿದೆ. ಏನಾದರೂ ಅವಘಡ ನಡೆದರೆ ಅದಕ್ಕೆ ಹೊಣೆ ಯಾರು ಎಂಬ ಪ್ರಶ್ನೆಗೆ ಯಾರ ಬಳಿಯಲ್ಲಿಯೂ ಉತ್ತರವಿಲ್ಲ.
ಈ ಹಿಂದಿನ ವಿಭಾಗೀಯ ಸಾರಿಗೆ ನಿಯಂತ್ರಕರು ನೋಡುತ್ತೇನೆ, ಮಾಡುತ್ತೇನೆ, ಹೇಳುತ್ತೇನೆ ಎನ್ನುತ್ತಲೆ ನಿವೃತ್ತರಾಗಿ ಹೋದರು. ಈಗ ಬಂದಿರುವವರು ಪ್ರಭಾರಿ ಸಾರಿಗೆ ನಿಯಂತ್ರಕರು. ಇಷ್ಟು ದಿನವಾದರೂ ಅವರಿಂದಲೂ ನಿಲ್ದಾಣದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ.
"

ನಿಲ್ದಾಣದ ಅವ್ಯವಸ್ಥೆಯ ಬಗ್ಗೆ ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಆದರೆ, ಫಲಿತಾಂಶ ಮಾತ್ರ ಶೂನ್ಯ. ಹೀಗಾದರೆ ಒಂದಿಲ್ಲೊಂದು ದಿನ ಏನಾದರೂ ಅಹಿತಕರ ಘಟನೆ ನಡೆದರೆ ಅದಕ್ಕೆ ಸಾರಿಗೆ ಇಲಾಖೆಯೇ ಕಾರಣವಾಗುತ್ತದೆ.

— ಶರಣಪ್ಪ ಬೆಟಗೇರಿ, ಪ್ರಯಾಣಿಕ ಹಾಲಕೆರೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net