ನರಗುಂದ: ಮದುವೆ ವಿಚಾರಕ್ಕೆ ಉಂಟಾದ ಮನಸ್ತಾಪ ಕೊನೆಗೂ ಸಹೋದರರ ನಡುವಿನ ರಕ್ತಪಾತಕ್ಕೆ ಕಾರಣವಾದ ಘಟನೆ ತಾಲೂಕಿನ ಹಿರೇಕೊಪ್ಪ ರಸ್ತೆ ಸಮೀಪದ ಜಮೀನಿನ ಕುರಿದಡ್ಡಿಯಲ್ಲಿ ನಡೆದಿದೆ.
ಒಡಹುಟ್ಟಿದ ತಮ್ಮನನ್ನೇ ಕಲ್ಲಿನಿಂದ ಜಜ್ಜಿ ಅಮಾನುಷವಾಗಿ ಕೊಲೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕು ಚಿಕ್ಕಮೂಲಂಗಿ ಗ್ರಾಮದ ಫಕೀರಪ್ಪ ಈರಪ್ಪ ಕುರುಗಿನಕೊಪ್ಪ (19) ಕೊಲೆಯಾದ ದುರ್ದೈವಿ. ಈತನ ಸಹೋದರ ಅಶೋಕ ಕುರುಗಿನಕೊಪ್ಪ (21) ಕೊಲೆ ಆರೋಪಿ.
ಘಟನೆಯಲ್ಲಿ
ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚಿಕ್ಕಮುಳಂಗಿ ಗ್ರಾಮದ ಸಹೋದರರಾದ ಫಕ್ಕೀರಪ್ಪ ಈರಪ್ಪ ಕುರುಗಿನಕೊಪ್ಪ (19) ಮತ್ತು ಅಶೋಕ ಈರಪ್ಪ ಕುರುಗಿನಕೊಪ್ಪ (21) ಕುರಿಮೇಯಿಸುವ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಇವರಿಬ್ಬರೂ ಕುರಿಗಳೊಂದಿಗೆ ಹಿರೇಕೊಪ್ಪ ಗ್ರಾಮದ ಸಮೀಪದ ಜಮೀನಿನಲ್ಲಿ ತಂಗಿದ್ದರು.
ತಮ್ಮ ಫಕೀರಪ್ಪನಿಗೆ ಮದುವೆ ಮಾಡಿಸಲು ಕುಟುಂಬದವರು ಹುಡುಗಿ ನೋಡಿದ್ದರು. ಆದರೆ, ಅದೇ ಹುಡುಗಿಯ ಮೇಲೆ ಅಣ್ಣ ಅಶೋಕನಿಗೂ ಮನಸ್ಸು ಬಿದ್ದಿತ್ತು ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿದ್ದು, ಮನಸ್ತಾಪ ತೀವ್ರಗೊಂಡಿತ್ತು.
ಸೋಮವಾರ ರಾತ್ರಿ ಇದೇ ವಿಚಾರವಾಗಿ ಮತ್ತೆ ಜಗಳ ಉಂಟಾಗಿ, ಕೋಪೋದ್ರಿಕ್ತನಾದ ಅಶೋಕ ತನ್ನ ತಮ್ಮನ ಮೇಲೆ ದೊಡ್ಡ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ. ಪರಿಣಾಮವಾಗಿ ಫಕೀರಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆಯ ಬಳಿಕ ಆರೋಪಿ ಅಶೋಕ ತನ್ನ ಸಹೋದರನನ್ನ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಈ ಕುರಿತು ನರಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ತನಿಖೆ ಮುಂದುವರಿದಿದೆ.
ತಾನು ಮದುವೆಯಾಗಲು ಬಯಸಿದ್ದ ಹುಡುಗಿ ತನ್ನ ತಮ್ಮನೊಂದಿಗೆ ಮದುವೆಯಾಗುತ್ತಿರುವ ವಿಷಯವೇ ಈ ಹತ್ಯೆಗೆ ಕಾರಣ ಎನ್ನಲಾಗುತ್ತಿದೆ.