ಲಕ್ಷ್ಮೇಶ್ವರ: ಖಾಸಗಿ ಶಾಲೆಯ ಬಸ್‌ನ school bus ಚಕ್ರಕ್ಕೆ ಸಿಲುಕಿ ಬಾಲಕ ಸ್ಥಳದಲ್ಲೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಸಮೀಪದ ದೊಡ್ಡೂರ ಹತ್ತಿರ ಬುಧವಾರ ನಡೆದಿದೆ.
ದೊಡ್ಡೂರ ತಾಂಡಾದ ಎಲ್‌ಕೆಜಿ ಓದುತ್ತಿದ್ದ 4 ವರ್ಷದ ಪ್ರಥಮ ಅರುಣ ಲಮಾಣಿ ಮೃತಪಟ್ಟ ಬಾಲಕ.
ಘಟನೆ ವಿವರ: ತಾಲೂಕಿನ ಶಿಗ್ಲಿ ಹತ್ತಿರ ಇರುವ ಲಕ್ಷ್ಮೇಶ್ವರ ಮೂಲದ ಲಿಟಲ್ ಹಾರ್ಟ್ ಇಂಟರ್‌ನ್ಯಾಶನಲ್ ಶಾಲೆಯ ಬಸ್ ಬುಧವಾರ ಮಧ್ಯಾಹ್ನ ಶಾಲಾವಧಿಯ ನಂತರ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಬಿಟ್ಟು ಬರಲು ಹೊರಟಿತ್ತು.
ಈ ವೇಳೆ ಚಾಲಕ ಅತಿಯಾದ ವೇಗ, ನಿರ್ಲಕ್ಷೃದಿಂದ ಶಾಲೆಯ ಎಲ್‌ಕೆಜಿ ವಿದ್ಯಾರ್ಥಿ ಬಸ್‌ನಿಂದ ಕೆಳಗೆ ಬಿದ್ದಿದ್ದಾನೆ. ದೊಡ್ಡದಾದ ಬಸ್‌ನ ಚಕ್ರಕ್ಕೆ ಸಿಲುಕಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬಸ್‌ನಲ್ಲಿದ್ದ ಮಕ್ಕಳ ಚೀರಾಟ, ಆಕ್ರಂದನದಿಂದ ಬಸ್ ನಿಲ್ಲಿಸಿದ ಚಾಲಕ-ನಿರ್ವಾಹಕ ಬಾಲಕನ ಮೃತ ದೇಹವನ್ನು ಬಸ್‌ನೊಳಗೆ ತಂದಿಟ್ಟು, ಊರ ಹೊರವಲಯದಲ್ಲಿ ವಾಹನ ಬಿಟ್ಟು ಪರಾರಿಯಾಗಿದ್ದಾರೆ.
ಮಕ್ಕಳ ಕೂಗಾಟ ಕೇಳಿದ ಸಾರ್ವಜನಿಕರು ವಿಷಯವನ್ನು ಪೊಲೀಸ್ ಠಾಣೆಗೆ ತಿಳಿಸಿದರು. ವಿಷಯ ತಿಳಿಯುತ್ತಿದ್ದಂತೆಯೇ ಪಾಲಕರು, ತಾಂಡಾದ ನಿವಾಸಿಗಳು ಸ್ಥಳಕ್ಕೆ ದೌಡಾಯಿಸಿ ಮಗುವಿನ ಸ್ಥಿತಿ ಕಂಡು ಆಕ್ರಂದಿಸತೊಡಗಿದರು.
ಬಾಲಕನ ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಸದ್ಯ ರಜೆ ಮೇಲೆ ಊರಿಗೆ ಬಂದಿದ್ದಾರೆ. ತಂದೆ ತಾಯಿ ಪಾಲಕರ ಆಕ್ರಂದನ ಅಲ್ಲಿ ಸೇರಿದ್ದವರ ಕಣ್ಣಲ್ಲಿಯೂ ನೀರು ತರಿಸಿತು.
ಚಾಲಕ ಮತ್ತು ಶಾಲೆಯ ನಿರ್ಲಕ್ಷೃದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.