ವಿಠ್ಠಲಾಪೂರದಲ್ಲಿ ಕಂಡು ಬಂತು ಮೊಸಳೆ ಮರಿ

ಮುಂಡರಗಿ ತಾಲೂಕಿನ ವಿಠ್ಠಲಾಪೂರ ಗ್ರಾಮದಲ್ಲಿ ಭಾನುವಾರ ಪ್ರತ್ಯಕ್ಷವಾದ ಮೊಸಳೆ ಮರಿ.
ಮುಂಡರಗಿ ತಾಲೂಕಿನ ವಿಠ್ಠಲಾಪೂರ ಗ್ರಾಮದಲ್ಲಿ ಭಾನುವಾರ ಪ್ರತ್ಯಕ್ಷವಾದ ಮೊಸಳೆ ಮರಿ.
Published on

ಮುಂಡರಗಿ: 

ತಾಲೂಕಿನ ತುಂಗಭದ್ರಾ ನದಿ ಪಾತ್ರದ ಸಿಂಗಟಾಲೂರು ಬ್ಯಾರೇಜ್​ ಹಿನ್ನೀರಿನ ಮುಳುಗಡೆ ಪ್ರದೇಶಕ್ಕೆ ಒಳಪಡುವ ವಿಠ್ಠಲಾಪೂರ ಗ್ರಾಮದಲ್ಲಿ ಭಾನುವಾರ ಮೊಸಳೆ ಮರಿಯೊಂದು ಕಂಡು ಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿತು.

ಗ್ರಾಮಕ್ಕೆ ಮಳೆಗಾಲದ ಸಂದರ್ಭದಲ್ಲಿ ನದಿಯ ಹಿನ್ನೀರು ಹರಿದು ಬರುತ್ತದೆ. ನದಿಗೆ ಸಂಪಕಿರ್ಸುವ ಕಿರುಹಳ್ಳಕ್ಕೆ(ಸರ) ಹೊಂದಿಕೊಂಡು ಹಲವು ಮನೆಗಳಿವೆ. ಭಾನುವಾರ ನದಿ ದಡಕ್ಕೆ ಹೊಂದಿಕೊಂಡಿರುವ ಕಿರುಹಳ್ಳದ ಮೂಲಕ ಮೊಸಳೆ ಮರಿ ಮನೆ ಮುಂದೆ ಪ್ರತ್ಯಕ್ಷವಾಗಿದೆ. 
ಗ್ರಾಮಸ್ಥರು ಅದನ್ನು ಹಗ್ಗದಿಂದ ಕಟ್ಟಿ ಡ್ರಮ್​ನಲ್ಲಿ ಕೂಡಿ ಹಾಕಿ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಆರ್​ಎಫ್​ಒ ಮಂಜುನಾಥ ಮೇಗಲಮನಿ ಅವರು ಗ್ರಾಮಸ್ಥರಿಂದ ಮಾಹಿತಿ ಪಡೆದರು. ನದಿಯಲ್ಲೂ ಮೊಸಳೆಗಳಿರುವ ಬಗ್ಗೆ ಆರ್​ಎಫ್​ಒ ಗಮನಕ್ಕೆ ತಂದರು. ಕಿರುಹಳ್ಳದಲ್ಲಿ(ಸರ) ಸ್ವಚ್ಛತೆ ಇಲ್ಲದೆ ಕಸ ಬೆಳೆದುಕೊಂಡಿದೆ. ಅದರಲ್ಲೂ ಮೊಸಳೆ ಇರುವ ಬಗ್ಗೆ ಸಂಶಯ ವ್ಯಕ್ತಪಡಿಸಿದರು.
ವಿಠ್ಠಲಾಪೂರ ಗ್ರಾಮದ ತುಂಗಭದ್ರಾ ನದಿಯಲ್ಲಿ ಮೊಸಳೆಗಳಿವೆ. ಮೊಸಳೆ ಮರಿ ಇದೀಗ ಹೊರಗಡೆ ಬಂದಿದೆ. ಹಿಂದೆ ನದಿಗೆ ತೆರಳಿದ್ದ ಯುವಕ ಮತ್ತು ಆಕಳು ಮೇಲೆ ಮೊಸಳೆ ದಾಳಿ ಮಾಡಲು ಮುಂದಾಗಿತ್ತು. ಅದರಿಂದ ತಪ್ಪಿಸಿಕೊಂಡು ಬಂದಿದ್ದರು. ಈಗ ಮನೆ ಮುಂದೆಯೇ ಮೊಸಳೆ ಮರಿ ಪ್ರತ್ಯಕ್ಷವಾಗಿದೆ. 2012ರಲ್ಲಿ ವಿಠ್ಠಲಾಪೂರ ಗ್ರಾಮವು ಮುಳುಗಡೆ ಪ್ರದೇಶಕ್ಕೆ ಒಳಪಟ್ಟಿದೆ. ಆದರೂ ಸ್ಥಳಾಂತರಿಸುವ ಕಾರ್ಯ ಮಂದಗತಿಯಿಂದ ಸಾಗಿದೆ. ಆದಷ್ಟು ಬೇಗ ಗ್ರಾಮ ಸ್ಥಳಾಂತರಿಸಲು ಕ್ರಮ ವಹಿಸಬೇಕು.ಇಲಾಖೆಯು ನದಿಯಲ್ಲಿನ ಮೊಸಳೆಗಳನ್ನು ಹಿಡಿದೊಯ್ಯಬೇಕು ಎಂದು ವಿಠ್ಠಲಾಪೂರ ಗ್ರಾಮಸ್ಥರಾದ ಸುನಿಲ್​ ಮಹಾಪುರುಷ, ಶಿವಾನಂದ ಪಾಟೀಲ, ಪ್ರವಿಣ ಐಗಾರ್​, ಶಿವಾನಂದ ಬಾರಕೇರ, ನಿಂಗಪ್ಪ ಸ್ವಾಗಿ, ಸಂತೋಷ ಪಾಟೀಲ ಒತ್ತಾಯಿಸಿದ್ದಾರೆ.

ಎಚ್ಚರಿಕೆಯ ಫಲಕ

ವಿಠ್ಠಲಾಪೂರದಲ್ಲಿ ಮೊಸಳೆ ಮರಿ ಪ್ರತ್ಯಕ್ಷವಾಗಿದೆ. ತುಂಗಭದ್ರಾ ನದಿಗೆ ಸಂಪಕಿರ್ಸುವ ಕಿರುಹಳ್ಳ ಸ್ವಚ್ಛಗೊಳಿಸುವಂತೆ ಬಿದರಹಳ್ಳಿ ಗ್ರಾ.ಪಂ.ಆಡಳಿತಾಧಿಕಾರಿ ಗಮನಕ್ಕೆ ತರಲಾಗಿತ್ತು. ಅವರು ಹಿಟಾಚಿ ಮೂಲಕ ಸ್ವಚ್ಛತೆಗೆ ಕ್ರಮ ವಹಿಸಿದ್ದಾರೆ. ಸದ್ಯ ಸಿಬ್ಬಂದಿ ಸ್ಥಳದಲ್ಲಿರುವಂತೆ ಸೂಚಿಸಿದ್ದೇನೆ. ರಸ್ತೆಯ ಕೆಳಗಡೆ ಪೈಪ್​ ಅಳವಡಿಸಿ ಕಿರುಸೇತುವೆ ಮಾಡಿದ್ದು ಆ ಮೂಲಕ ಗ್ರಾಮಕ್ಕೆ ನದಿ ನೀರು ಬರುತ್ತದೆ. ಆ ಭಾಗದಲ್ಲಿ ಜಾಲರಿ ಅಳವಡಿಸಲು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಮೊಸಳೆ ಮರಿಯನ್ನು ಗದಗ ಪ್ರಾಣಿ ಸಂಗ್ರಾಲಯಕ್ಕೆ  ಬಿಡಲಾಗುವುದು. ಜನರಿಗೆ ತೊಂದರೆ ಆಗಿದ್ದರೆ ಮಾತ್ರ ಮೊಸಳೆಯನ್​ನು ಹಿಡಿಯಬಹುದು. ನದಿ ಭಾಗದಲ್ಲಿ ಮೊಸಳೆ ಇರುವ ಬಗ್ಗೆ ಎಚ್ಚರಿಕೆಯ ಫಲಕ ಹಾಕಲಾಗುವುದು ಎಂದು ಆರ್​ಎಫ್​ಒ  ಮಂಜುನಾಥ ಮೇಗಲಮನಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net