ಬಣ್ಣ ತಯಾರಿಕೆಗೆ ಬೇಕಾಗುವ ಬಳಸಿದ ಹೂವುಗಳನ್ನು ತಾಲೂಕಿನ ಮುಕ್ತಿಮಂದಿರ ಧರ್ಮಕ್ಷೇತ್ರ, ಸೋಮೇಶ್ವರ ದೇವಸ್ಥಾನ, ದೂದಪೀರಾಂದರ್ಗಾ, ವೆಂಕಟೇಶ್ವರ ದೇವಸ್ಥಾನ ಸೇರಿದಂತೆ ಅನೇಕ ದೇವಸ್ಥಾನಗಳಿಂದ ಪೂಜೆಗೆ ಬಳಕೆ ಮಾಡಿದ ಮರು ಹೂವುಗಳನ್ನು ಸಂಗ್ರಹಿಸಲಾಗುತ್ತದೆ. ದೇವರ ಪೂಜೆಗೆ ಬಳಸಿದ ಹೂವುಗಳನ್ನು ಬಿಸಾಡದೆ ನಮಗೆ ನೀಡಿ ಅದರಿಂದ ಪರಿಸರ ಸ್ನೇಹಿ ಬಣ್ಣ ತಯಾರಿಸುತ್ತೇವೆ ಎನ್ನುವ ಸಂದೇಶವನ್ನು ಎಲ್ಲ ದೇವಸ್ಥಾನ, ದರ್ಗಾಗಳಿಗೆ ಸಂಸ್ಥೆ ವತಿಯಿಂದ ಮುಂಚಿತವಾಗಿ ಮನವಿ ಪತ್ರ ನೀಡಲಾಗಿದ್ದು, ಅದಕ್ಕೆ ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಹೂವು ಸಂಗ್ರಹವಾದ ಕೂಡಲೇ ಈ ಸಂಸ್ಥೆಯವರು ಪೋನ್ ಮೂಲಕ ತಿಳಿಸಿದ ತಕ್ಷಣ ಅವುಗಳನ್ನು ಸಂಗ್ರಹ ಮಾಡಲಾಗುತ್ತದೆ. ಸಂಗ್ರಹಿಸಿದ ಹೂವುಗಳಲ್ಲಿ ಗುಲಾಬಿ, ಸೇವಂತಿ ಮತ್ತು ಚೆಂಡು ಹೂವುಗಳನ್ನು ಬೇರ್ಪಡಿಸುವ ಕಾರ್ಯವನ್ನು ಮಾಡಿ ಅದನ್ನು ಮೂರು ದಿನಗಳ ಕಾಲ ನೆರಳಿನಲ್ಲಿ ಚೆನ್ನಾಗಿ ಒಣಗಿಸಿ ಅದಕ್ಕೆ ಆಹಾರಕ್ಕೆ ಉಪಯೋಗಿಸುವ ಬಣ್ಣವನ್ನು ಮಿಶ್ರಣ ಮಾಡಿ ಈ ಪರಿಸರ ಸ್ನೇಹಿ ಬಣ್ಣವನ್ನು ತಯಾರಿಸಲಾಗುತ್ತದೆ. ಒಂದು ಕ್ವಿಂಟಾಲ್ ಹೂವಿನಿಂದ ಒಂದು ಕೆಜಿ ಬಣ್ಣ ತಯಾರಾಗುತ್ತದೆ. ಈಗಾಗಲೇ ಗುಲಾಬಿ, ಹಳದಿ, ನೀಲಿ, ಹಸಿರು ಬಣ್ಣಗಳು ಹೋಳಿ ಹಬ್ಬಕ್ಕೆ ಸಿದ್ಧವಾಗಿದ್ದು, ಕೆಜಿ ಬಣ್ಣಕ್ಕೆ 600 ರೂ ನಿಗದಿಪಡಿಸಲಾಗಿದೆ.