ಮುಂಡರಗಿ: ಪಟ್ಟಣದ ಜಗದ್ಗುರು ಅನ್ನದಾನೀಶ್ವರ annadanishwara ವಿದ್ಯಾ ಸಮಿತಿಯ ಶತಮಾನೋತ್ಸವ ಪ್ರಯುಕ್ತ ಜ. 17 ಮತ್ತು 18ರಂದು ಜಗದ್ಗುರು ಅನ್ನದಾನೀಶ್ವರ ಪಿಯು ಕಾಲೇಜ್ ಆವರಣದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಗದ್ಗುರು ಅನ್ನದಾನೀಶ್ವರ ಮಠದ ಉತ್ತರಾಧಿಕಾರಿ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 17ರಂದು ಬೆಳಗ್ಗೆ 10.30ಗಂಟೆಗೆ ಜಗದ್ಗುರು ಅನ್ನದಾನೀಶ್ವರ ಪದವಿ ಪೂರ್ವ ಕಾಲೇಜ್ ನೂತನ ಕಟ್ಟಡ ಲೋಕಾರ್ಪಣೆ ಹಾಗೂ ವಿಜ್ಞಾನ ವಸ್ತು ಪ್ರದರ್ಶನ, ಸಂಸ್ಮರಣ ಗ್ರಂಥ ಬಿಡುಗಡೆ, ಸಾಧಕರಿಗೆ, ದಾನಿಗಳಿಗೆ ಸನ್ಮಾನ ಸಮಾರಂಭ ನಡೆಯಲಿದೆ. ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳವರು ಸಾನ್ನಿಧ್ಯ ವಹಿಸುವರು. ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೂತನ ಕಟ್ಟಡ ಉದ್ಘಾಟಿಸುವರು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸುವರು ಎಂದರು.
ಸಂಸದ ಬಸವರಾಜ ಬೊಮ್ಮಾಯಿ ಅವರು ಸಂಸ್ಮರಣ ಗ್ರಂಥ ಬಿಡುಗಡೆ ಮಾಡುವರು. ಕೇಂದ್ರ ಸಚಿವ ವಿ.ಸೋಮಣ್ಣ ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸುವರು. ಸಚಿವ ಡಾ.ಎಚ್.ಕೆ. ಪಾಟೀಲ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕೆ.ಆರ್. ಬೆಲ್ಲದ ಕಾಲೇಜ್ ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸುವರು. ಸಚಿವ ಎಂ.ಸಿ. ಸುಧಾಕರ ಜೇಂಗೂಡ ಗ್ರಂಥ ಬಿಡುಗಡೆ ಮಾಡಲಿದ್ದಾರೆ.
ಸಚಿವರಾದ ಮಧು ಬಂಗಾರಪ್ಪ, ಎಸ್.ಎಸ್. ಮಲ್ಲಿಕಾರ್ಜುನ ಮುಖ್ಯಅತಿಥಿಗಳಾಗಿ ಭಾಗವಹಿಸುವರು. ಶಾಸಕರಾದ ಜಿ.ಎಸ್. ಪಾಟೀಲ, ಡಾ.ಚಂದ್ರು ಲಮಾಣಿ, ಎಸ್.ವಿ. ಸಂಕನೂರ, ಸಲೀಂ ಅಹ್ಮದ್, ಆರ್.ಆರ್. ಹೆಗಡಾಳ, ಕರಬಸಪ್ಪ ಹಂಚಿನಾಳ, ಅಧಿಕಾರಿಗಳು ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ಸಂಜೆ 5 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು, ನಿವೃತ್ತ ನ್ಯಾಯಾಧೀಶ ನಾಗರಾಜ ಅರಳಿ ಉದ್ಘಾಟಿಸುವರು ಎಂದು ಮಾಹಿತಿ ನೀಡಿದರು.
ಜ. 18ರಂದು ಬೆಳಗ್ಗೆ 10.30 ಗಂಟೆಗೆ ವಿಶೇಷ ಉಪನ್ಯಾಸ, ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಮಾವೇಶ, ಸನ್ಮಾನ ಸಮಾರಂಭ ನಡೆಯುವುದು. ಡಾ.ಅನ್ನದಾನೀಶ್ವರ ಶಿವಯೋಗಿಗಳವರು ಸಾನ್ನಿಧ್ಯ ವಹಿಸುವರು. ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಅವರು ಇಂದಿನ ಶಿಕ್ಷಣ ಸ್ಥಿತಿಗತಿ-ಮುಂದಿನ ಭವಿಷ್ಯ ವಿಶೇಷ ಉಪನ್ಯಾಸ ನೀಡುವರು. ಸಂಸದ ರಾಜಶೇಖರ ಹಿಟ್ನಾಳ ಮುಖ್ಯಅತಿಥಿಗಳಾಗಿ ಭಾಗವಹಿಸುವರು.
ಶಾಸಕರಾದ ಜಿ.ಎಸ್. ಪಾಟೀಲ, ಡಾ.ಚಂದ್ರು ಲಮಾಣಿ ಗೌರವ ಉಪಸ್ಥಿತಿ ವಹಿಸುವರು. ಆರ್.ವಿ. ಗುಮಾಸ್ತೆ ಅವರು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣ ಕುರಿತು ಉಪನ್ಯಾಸ ನೀಡುವರು. ಶಂಕರ ಬಿದರಿ, ಸಿ. ಸೋಮಶೇಖರ, ಗುರುಶಾಂತ ಶಿವಾಚಾರ್ಯರು, ಮೊದಲಾದವರು ಭಾಗವಹಿಸುವರು ಎಂದು ತಿಳಿಸಿದರು.
ಸಂಜೆ 4 ಗಂಟೆಗೆ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಹಾಗೂ ಸಮಾರೋಪ ಸಮಾರಂಭ ನಡೆಯುವುದು. ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಡಾ.ಮಹಾದೇವ ಸ್ವಾಮೀಜಿ, ಡಾ.ಸುಜ್ಞಾನದೇವ ಶಿವಾಚಾರ್ಯರು ನೇತೃತ್ವ ವಹಿಸುವರು. ಪತ್ರಕರ್ತ ಅಜಿತ್ ಹನುಮಕ್ಕನವರ ಉದ್ಘಾಟಿಸುವರು.
ಮುಖ್ಯಅತಿಥಿಗಳಾಗಿ ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮತ್ತಿತರರು ಭಾಗವಹಿಸಲಿದ್ದಾರೆ. ಸಂಜೆ 6ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮವಿದ್ದು, ಮಾಜಿ ಶಾಸಕ ರಾಮಣ್ಣ ಲಮಾಣಿ ಉದ್ಘಾಟಿಸುವರು. ವೈ.ಎನ್. ಗೌಡರ ಇತರರು ಪಾಳ್ಗೊಳ್ಳಲಿದ್ದಾರೆ ಎಂದರು.
ಜ.ಅ. ವಿದ್ಯಾ ಸಮಿತಿ ಆಡಳಿತ ಅಧಿಕಾರಿ ಡಾ. ಬಿ.ಜಿ. ಜವಳಿ, ಕಾಲೇಜ್ ಕಾರ್ಯಾಧ್ಯಕ್ಷ ಕರಬಸಪ್ಪ ಹಂಚಿನಾಳ, ಆರ್.ಎಲ್. ಪೊಲೀಸಪಾಟೀಲ, ವಿ.ಎಫ್. ಗುಡದಪ್ಪನವರ, ಎಸ್.ಬಿ. ಹಿರೇಮಠ, ಡಿ.ಡಿ. ಮೋರನಾಳ, ಡಾ.ಪ್ರಕಾಶ ಹೊಸಮನಿ, ನಾಗೇಶ ಹುಬ್ಬಳ್ಳಿ, ಡಾ.ವೀರೇಶ ಹಂಚಿನಾಳ, ಪ್ರತಿಭಾ ಹೊಸಮನಿ, ಮಾತನಾಡಿ, ಜ.ಅ.ವಿದ್ಯಾ ಸಮಿತಿಯ ವಿದ್ಯಾರ್ಥಿಗಳು ಎರಡು ದಿನದ ಕಾರ್ಯಕ್ರಮದಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.
ಜ.ಅ.ವಿದ್ಯಾ ಸಮಿತಿಯು ಶತಮಾನೋತ್ಸವ ಸಂಭ್ರಮದಲ್ಲಿದ್ದು, ಸಂಸ್ಕೃತ ಪಾಠಶಾಲೆಯಿಂದ ಆರಂಭಗೊಂಡ ವಿದ್ಯಾ ಸಮಿತಿ ಇದೀಗ 33 ಅಂಗ ಸಂಸ್ಥೆ ಹೊಂದಿರುವುದು ಇತಿಹಾಸ. ಗ್ರಾಮೀಣ ಪ್ರದೇಶದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಶಾಲೆ, ಕಾಲೇಜು ತೆರೆಯಲಾಗಿದೆ. ಶಿಕ್ಷಣದ ಜತೆಗೆ ಶ್ರೀಮಠದಿಂದ 285ಕ್ಕೂ ಹೆಚ್ಚು ಪುಸ್ತಕಗಳನ್ನು ಬಿಡುಗಡೆ ಮಾಡುವ ಮೂಲಕ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಲಾಗಿದೆ. ಜ. 17, 18ರಂದು ನಡೆಯುವ ಜ.ಅ.ವಿದ್ಯಾ ಸಮಿತಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳವರು ತಿಳಿಸಿದರು.