all-night-sit ಗಜೇಂದ್ರಗಡ ತಹಸೀಲ್ದಾರ್ ಕಚೇರಿ ಮುಂದೆ ಅಹೋರಾತ್ರಿ ಧರಣಿ

ಜಿಗಳೂರು ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ್ಯ ರೈತ ಸಂಘ ಗಜೇಂದ್ರಗಡ ಘಟಕದಿಂದ ತಹಸೀಲ್ದಾರ್ ಕಚೇರಿ ಮುಂದೆ ಗುರುವಾರ ಧರಣಿ ನಡೆಸಲಾಯಿತು. ಎಂ.ಎಸ್. ಹಡಪದ, ಪೀರು ರಾಠೋಡ, ದಾವಲಸಾಬ್ ತಾಳಿಕೋಟಿ, ಇತರರಿದ್ದರು.
ಜಿಗಳೂರು ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ್ಯ ರೈತ ಸಂಘ ಗಜೇಂದ್ರಗಡ ಘಟಕದಿಂದ ತಹಸೀಲ್ದಾರ್ ಕಚೇರಿ ಮುಂದೆ ಗುರುವಾರ ಧರಣಿ ನಡೆಸಲಾಯಿತು. ಎಂ.ಎಸ್. ಹಡಪದ, ಪೀರು ರಾಠೋಡ, ದಾವಲಸಾಬ್ ತಾಳಿಕೋಟಿ, ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಗಳೂರು ಬಳಿ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಕೊಡಿ
  • ಶಾಸಕರ ಮನೆಗೆ ಮುತ್ತಿಗೆಯ ಎಚ್ಚರಿಕೆ
ಗಜೇಂದ್ರಗಡ: ಆರು ತಿಂಗಳ ಹಿಂದೆ ಜಿಗಳೂರು ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮೂವರು ಕೂಲಿ ಕಾರ್ಮಿಕರ ಕುಟುಂಬಗಳಿಗೆ ತಕ್ಷಣವೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕೃಷಿ ಕೂಲಿಕಾರರ ಸಂಘದ ವತಿಯಿಂದ ತಹಸೀಲ್ದಾರ್ ಕಚೇರಿ ಮುಂದೆ ಗುರುವಾರ ಅಹೋರಾತ್ರಿ ಧರಣಿ ನಡೆಸಲಾಯಿತು.
ಕೃಷಿ ಕೂಲಿಕಾರರ ಸಂಘದ ಕಾರ್ಯದರ್ಶಿ ಎಂ.ಎಸ್. ಹಡಪದ ಮಾತನಾಡಿ, ಅಪಘಾತ ಸಂಭವಿಸಿ ಆರು ತಿಂಗಳಾಗಿದ್ದರೂ ಇದುವರೆಗೆ ಸರ್ಕಾರದಿಂದ ಯಾವುದೇ ಪರಿಹಾರ ನೀಡಿಲ್ಲ. ಪರಿಣಾಮ, ಸಂತ್ರಸ್ತ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿ ದಿನದೂಡುತ್ತಿವೆ. ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ಈ ಭಾಗದ ಶಾಸಕರು ಪರಿಹಾರ ಕೊಡಿಸುತ್ತೇನೆ ಎಂದು ಹೇಳಿ ದೆಹಲಿಯಲ್ಲಿ ಕುಳಿತಿದ್ದಾರೆ. ಅವರಿಗೆ ಕ್ಷೇತ್ರದ ಜನರ ಬಗ್ಗೆ ಕಾಳಜಿಯಿಲ್ಲ. ಧರಣಿ ಸ್ಥಳಕ್ಕೆ ಆಗಮಿಸಿ ತಕ್ಷಣ ಪರಿಹಾರ ನೀಡದಿದ್ದರೆ ಶಾಸಕರ ಮನೆಗೆ ಪಾದಯಾತ್ರೆ ಕೈಗೊಂಡು ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪೀರು ರಾಠೋಡ ಮಾತನಾಡಿ, ಅಪಘಾತ ನಡೆದ ಕೆಲವೇ ದಿನಗಳ ಬಳಿಕ ಶಾಸಕ ಜಿ.ಎಸ್. ಪಾಟೀಲ ಅವರು ಮೃತರ ಕುಟುಂಬಸ್ಥರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು. ಆದರೆ, ಇದೀಗ ಘಟನೆ ನಡೆದು ಆರು ತಿಂಗಳಾಗಿದ್ದರೂ ಬಿಡಿಗಾಸು ಬಂದಿಲ್ಲ. ಪರಿಹಾರ ಕೊಡಿಸುವ ಭರವಸೆ ನೀಡಿದ ಶಾಸಕರು ತಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಇದಕ್ಕೂ ಮುನ್ನ ರಾಜ್ಯಪಾಲರನ್ನು ಭೇಟಿಯಾದ ನಿಯೋಗದಲ್ಲಿ ಎಂ.ಎಸ್. ಹಡಪದ, ಪೀರು ರಾಠೋಡ, ದಾವಲಸಾಬ್ ತಾಳಿಕೋಟಿ ಹಾಗೂ ಇತರರು ರಾಜ್ಯಪಾಲರಿಗೆ ಜಿಗಳೂರು ಅಪಘಾತದ ಕುರಿತು ಮಾಹಿತಿ ನೀಡಿದರು. ಅಲ್ಲದೆ, ಸಂತ್ರಸ್ತರಿಗೆ ಪರಿಹಾರ ನೀಡಲು ಸರ್ಕಾರದ ಗಮನಕ್ಕೆ ತರಬೇಕು ಎಂದು ಮನವಿ ನೀಡಿದರು.
ಮೆಹಬೂಬ್ ಹವಾಲ್ದಾರ್, ಚೆನ್ನಪ್ಪ ಗುಗಲೋತ್ತರಣ, ಚಂದ್ರು ರಾಠೋಡ, ಗಣೇಶ ರಾಠೋಡ, ರಾಜಪ್ಪ ಹೊಸಮನಿ, ಚಂದ್ರು ಜಾನಾಯಿ, ಮೈಬು ಹುನುಗುಂದ ಸೇರಿದಂತೆ ಸಂತ್ರಸ್ತರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net