ವರ್ಷದ ಭವಿಷ್ಯ ಹೇಳುವ ಸಸಿ

ಅಬ್ಬಿಗೇರಿಯ ಕಂಠಿ ಬಸವೇಶ್ವರ ದೇವಸ್ಥಾನದಲ್ಲಿ ಯುಗಾದಿ ಪಾಡ್ಯದಂದು ಮಾತ್ರ ಕಾಣಸಿಗುವ ಪವಾಡದ ಸಸಿಗಳನ್ನು ಹುಡುಕಾಟದಲ್ಲಿ ತೊಡಗಿರುವ ಭಕ್ತಾದಿಗಳು.
ಅಬ್ಬಿಗೇರಿಯ ಕಂಠಿ ಬಸವೇಶ್ವರ ದೇವಸ್ಥಾನದಲ್ಲಿ ಯುಗಾದಿ ಪಾಡ್ಯದಂದು ಮಾತ್ರ ಕಾಣಸಿಗುವ ಪವಾಡದ ಸಸಿಗಳನ್ನು ಹುಡುಕಾಟದಲ್ಲಿ ತೊಡಗಿರುವ ಭಕ್ತಾದಿಗಳು.
Published on
ನರೇಗಲ್ಲ: ಅಬ್ಬಿಗೇರಿ ಗ್ರಾಮದ ಕಂಠಿ ಬಸವೇಶ್ವರ ದೇವಸ್ಥಾನದ ಸುತ್ತಮುತ್ತ ಗುರುವಾರ ಯುಗಾದಿ ಪಾಡ್ಯದಂದು ಸೂರ್ಯೋದಯಕ್ಕೂ ಮುಂಚೆ ವರ್ಷದ ಭವಿಷ್ಯ ಹೇಳುವ ಸಸಿಗಳು ಕಾಣಿಸಿದವು. 
ಪ್ರತಿ ವರ್ಷ ಯುಗಾದಿ ಪಾಡ್ಯದ ದಿನ ಈ ದೇವಾಲಯದ ಆವರಣದಲ್ಲಿ ವಿವಿಧ ಸಸಿಗಳು ಗೋಚರಿಸಿದವು. ಈ ಸಸಿಗಳ ದೊರೆಯುವಿಕೆಗಳ ಆಧಾರದಲ್ಲಿ ರೈತರು ಬೆಳೆಗಳನ್ನು ಬೆಳೆಯುತ್ತಾರೆ. ಇದು ದೇವರ ಆಶೀರ್ವಾದ ಎಂದು ರೈತರು ಹಾಗೂ ಭಕ್ತರು ನಂಬಿದ್ದಾರೆ.  ಬೆಳಗ್ಗೆ 4 ರಿಂದ 7ರವರೆಗೆ ದೇವಸ್ಥಾನದ ಆವರಣ ಸುಮಾರು 17 ಎಕರೆ ಜಾಗದಲ್ಲಿ ಬೆಳೆದ ಗಿಡ ಗಂಟಿಗಳ ನಡುವೆ ವಿವಿಧ ಬಗೆಯ ಸಸಿಗಳು ಕಾಣಿಸುತ್ತವೆ. ಯಾವ ಬೆಳೆಯ ಸಸಿಗಳು ಹೆಚ್ಚಾಗಿ ಕಾಣಿಸುತ್ತವೆಯೋ ಈ ವರ್ಷ ಹೆಚ್ಚು ಬೆಳೆ ಬೆಳೆಯುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ವಿವಿಧ ಊರುಗಳಿಂದ ಯುಗಾದಿ ಹಬ್ಬದ ದಿನದಂದು ರೈತರು ರಾತ್ರಿ ಅಥವಾ ಬೆಳಗಿನ ಜಾವ ಕಂಟಿ ಬಸವೇಶ್ವರ ಸನ್ನಿಧಿಗೆ ಬಂದು ಶ್ರೀಬಸವೇಶ್ವರರ ದರ್ಶನ ಪಡೆದು ಸಸಿಗಳನ್ನು ಹುಡುಕುತ್ತಾರೆ. ನಸುಕಿನಲ್ಲಿ ಏನೂ ಕಾಣುವುದಿಲ್ಲವಾದ್ದರಿಂದ ಮೊಬೈಲ್ ಟಾರ್ಚ್ ಹಾಕಿಕೊಂಡು ಹುಡುಕುವುದು ಸಾಮಾನ್ಯವಾಗಿತ್ತು. ಈ ವರ್ಷ ಹತ್ತಿ, ಗೋಧಿ, ಜೋಳ ಹೆಚ್ಚಾಗಿ ಕಾಣಿಸಿಕೊಂಡಿದ್ದರಿಂದ ರೈತರ ನಂಬಿಕೆಯಂತೆ ತಮ್ಮ ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡುತ್ತಾರೆ.
ಕರುನಾಡಿನಲ್ಲಿ ಎಲ್ಲಿಯೂ ಕಾಣಸಿಗದ ಅಪರೂಪದ ಪವಾಡ ಸಸಿಗಳು ನರೇಗಲ್ಲ ಸಮೀಪದ ಕಂಠಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಯುಗಾದಿ ಪಾಡ್ಯದಂದು ಮಾತ್ರ ಕಾಣಸಿಗುವ ಮೂಲಕ ವಿಸ್ಮಯಕ್ಕೆ ಕಾರಣವಾಗುತ್ತ ಬಂದಿದೆ. 
ದೇವಾಲಯದ ವಿಶೇಷತೆ: ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೆರೆಯ ಕಂಠಿ ಬಸವೇಶ್ವರ-ಬೈಲ ಬಸವೇಶ್ವರ ದೇವಾಲಯ ಕರ್ನಾಟಕದ ತುಂಬಾ ಭಕ್ತರನ್ನು ಹೊಂದಿದ ದೇವಾಲಯ.  ಮೊದಲು ಈ ದೇವಾಲಯಕ್ಕೆ ಬಸವೇಶ್ವರ ದೇವಾಲಯ ಎಂದು ಕರೆಯುತ್ತಿದ್ದರು. ನಂತರ ಈ ದೇವಾಲಯದ ಸುತ್ತ ಬಯಲಿನಲ್ಲಿ ಕಂಠಿಗಳು ಮುಳ್ಳುಗಿಡಗಳು ಬೆಳೆದಿದ್ದರಿಂದ ಕಂಠಿ ಬಸವೇಶ್ವರ ಎಂದು ಕರೆಯುತ್ತಿದ್ದರು. ನಂತರದ ದಿನಗಳಲ್ಲಿ ಈ ಕಂಠಿಗಳನ್ನು ಸ್ವಚ್ಛಗೊಳಿಸಿ ಬಯಲು ಮಾಡಿದ್ದರಿಂದ ಬಯಲು ಬಸವೇಶ್ವರ ಎಂದೂ ಕರೆಯುತ್ತಾರೆ. 
"

ಪ್ರತಿ ವರ್ಷದಂತೆ ಈ ವರ್ಷವೂ ಅಬ್ಬಿಗೇರಿಯ ಕಂಠಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹೆಚ್ಚಾಗಿ ಹತ್ತಿ, ಜೋಳ ಮತ್ತು ಗೋಧಿಯ ಸಸಿಗಳು ಕಂಡು ಬಂದಿದ್ದು, ಮುಂಬರುವ ದಿನಗಳಲ್ಲಿ ಅವುಗಳಲ್ಲೆ ಹೆಚ್ಚಾಗಿ ಬಿತ್ತನೆ ಮಾಡಲಾಗುತ್ತದೆ. 

 ಉದಯ ಕಳಕೊಣ್ಣವರ, ರೈತ ನರೇಗಲ್ಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net