ಸಿಕ್ಕ ಬಂಗಾರ ಚೈನ್, ನಗದು ಮರಳಿದ ಯೋಧ

ಕೆಎಸ್‌ಆರ್‌ಟಿಸಿ ಅಧಿಕಾರಿ, ಸಿಬ್ಬಂದಿಗಳ ಸಮ್ಮುಖದಲ್ಲಿ ಯೋಧ ಮಾಬುಸಾಬ ಸುರೇಬಾನ ಗುರುವಾರ ರೇಣುಕಾ ಅವರಿಗೆ ಬಂಗಾರದ ಚೈನ್, ನಗದು ಹಸ್ತಾಂತರಿಸಿದರು.
ಕೆಎಸ್‌ಆರ್‌ಟಿಸಿ ಅಧಿಕಾರಿ, ಸಿಬ್ಬಂದಿಗಳ ಸಮ್ಮುಖದಲ್ಲಿ ಯೋಧ ಮಾಬುಸಾಬ ಸುರೇಬಾನ ಗುರುವಾರ ರೇಣುಕಾ ಅವರಿಗೆ ಬಂಗಾರದ ಚೈನ್, ನಗದು ಹಸ್ತಾಂತರಿಸಿದರು.
Published on
ನರಗುಂದ: ತನಗೆ ಸಿಕ್ಕ ಅಂದಾಜು ಮೂರು ಲಕ್ಷ ಮೌಲ್ಯದ ಬಂಗಾರದ ಚೈನ್ ಹಾಗೂ ನಗದನ್ನು ಮಹಿಳೆಗೆ ಮರಳಿಸಿ ಪಟ್ಟಣದ ಕಸಬಾ ಬಡಾವಣೆಯ ಮಾಬುಸಾಬ ರಾಜೇಸಾಬ ಸುರೇಬಾನ ಮಾನವೀಯತೆ ಮೆರೆದ ಘಟನೆ ಗುರುವಾರ ಪಟ್ಟಣದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದ ರೇಣುಕಾ ಭೀಮಸೇನ ಕಂಕಣವಾಡಿ ಎಂಬ ಮಹಿಳೆ ಬುಧವಾರ ಬೆಳಗ್ಗೆ ಕಲ್ಲೋಳಿ ಗ್ರಾಮದಿಂದ ಕೊಪ್ಪಳ್ಳಕ್ಕೆ ಆಗಮಿಸಿದ್ದರು. ಕೊಪ್ಪಳದಲ್ಲಿ ಎಂಬಿಬಿಎಸ್ ಓದುತ್ತಿರುವ ಈಕೆಯ ಪುತ್ರ ಮಲ್ಲಿಕಾರ್ಜನನ ಯೋಗಕ್ಷೇಮ ವಿಚಾರಿಸಿ ಸಂಜೆ ನವಲಗುಂದ, ನರಗುಂದ ಮಾರ್ಗವಾಗಿ ಸ್ವ-ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಮಹಿಳೆ ನವಲಗುಂದದಲ್ಲಿ ಕಡಲೆ ಕಾಯಿ ಖರೀದಿಸಲು ಹೋಗಿ ಎರಡು ತೋಲೆ ಬಂಗಾರದ ಜೈನ್, ನಗದು ಹಾಗೂ ಮನೆ ಬೀಗಗಳಿದ್ದ ಪರ್ಸ್ ಅನ್ನು ಬಸ್‌ನಲ್ಲಿ ಕಳೆದುಕೊಂಡಿದ್ದಳು. ಈ ವೇಳೆ ಪಸ್ ಪಟ್ಟಣದ ಯೋಧ ಮಾಬುಸಾಬ ಸುರೇಬಾನ ಅವರಿಗೆ ಸಿಕ್ಕಿತ್ತು. ಈ ಕುರಿತು ತಕ್ಷಣವೇ ಮಾಬುಸಾಬ ಅವರು, ನರಗುಂದ ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗೃಹರಕ್ಷಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿ ಸಂಬಂಧಪಟ್ಟವರಿಗೆ ಪರ್ಸ್ ಹಿಂತಿರುಗಿಸುವಂತೆ ಪೊಲೀಸ್ ಹಾಗೂ ನರಗುಂದ ಸಾರಿಗೆ ಇಲಾಖೆ ಅಧಿಕಾರಿಗಳ ಮುಖಾಂತರ ಮನವಿ ಮಾಡಿಕೊಂಡಿದ್ದರು. ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ನಂತರ ಮಾಬುಸಾಬ ಪರ್ಸ್‌ನಲ್ಲಿದ್ದ ದೇವಸ್ಥಾನದ ದೇಣಿಗೆ ಮತ್ತು ಆಸ್ಪತ್ರೆಯ ಚಿಕಿತ್ಸೆ ಚೀಟಿ ಪರಿಶೀಲಿಸಿ ಅದರಲ್ಲಿದ್ದ ದೂರವಾಣಿಗೆ ಕರೆ ಮಾಡುವುದರ ಮೂಲಕ ಮಹಿಳೆ ಪತ್ತೆ ಹಚ್ಚಿದ್ದಾರೆ. ಗುರುವಾರ ಬೆಳಗ್ಗೆ ನರಗುಂದ ಸಾರಿಗೆ ಘಟಕದಲ್ಲಿ ಅಂದಾಜು 3 ಲಕ್ಷ ರೂಪಾಯಿ ಬೆಲೆಬಾಳುವ ಎರಡು ತೋಲಿಯ ಬಂಗಾರದ ಚೈನ್, 3770 ರೂಪಾಯಿ ನಗದು ಸೇರಿದಂತೆ ಇತರ ವಸ್ತುಗಳನ್ನು ಮರಳಿದರು.
ಈ ಸಂದರ್ಭದಲ್ಲಿ ನರಗುಂದ ಸಾರಿಗೆ ಘಟಕ ವ್ಯವಸ್ಥಾಪಕ ಪರಶುರಾಮ ಪ್ರಭಾಕರ, ಸಹಾಯಕ ಸಂಚಾರಿ ನಿರೀಕ್ಷಕ ಪಿ.ಸಿ. ಮದಕಟ್ಟಿ, ಸಂಚಾರಿ ನಿಯಂತ್ರಣಾಧಿಕಾರಿ ವಿ.ಬಿ. ಕರಿಸಕ್ರಣ್ಣವರ, ಹವಾಲ್ದಾರ್ ಎ.ಬಿ. ಕೋಡಿಕೊಪ್ಪದ, ಪಾರುಪಟ್ಟೇಗಾರ ಮೋಹಿನುದ್ದೀನ್ ಮುಖಬಿಲ್, ಜಿ.ಟಿ. ಪಾಟೀಲ, ನಾಗರಾಜ ತೋಟಗೇರ, ಎನ್.ಬಿ.ಗಾಣಿಗೇರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net