

ವಿಜಯವಾಣಿ ಸುದ್ದಿಜಾಲ ಗದಗ
ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯರು ಯೋಗದ ಬೇಡಿಕೆ ಕಂಡು ಅದನ್ನು ವ್ಯಾಪಾರೀಕರಣಗೊಳಿಸಿದ್ದಾರೆ. ಆದರೆ ಭಾರತವು ಜಗತ್ತಿಗೆ ನೀಡಿದ ಅಗ್ರಗಣ್ಯ ಕೊಡುಗೆಯಾಗಿರುವ ಯೋಗವು ಮೂಲತ: ನಿಸ್ವಾರ್ಥ ಸೇವೆಯ ಸಂಕೇತವಾಗಿದೆ ಎಂದು ಮಾಜಿ ಶಾಸಕ ಡಿ.ಆರ್ ಪಾಟೀಲ ಹೇಳಿದರು.
ತೋಂಟದ ಸಿದ್ಧಲಿಂಗ ಶ್ರೀಳು ಶಿವಾನುಭವ ಮಂಟಪದಲ್ಲಿ ಸೋಮವಾರ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಸ್ಮಾರಕ ಯೋಗ ಪಾಠಶಾಲೆಯ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಯೋಗ ಪಾಠಶಾಲೆಯ ಸುವರ್ಣ ಮಹೋತ್ಸವದ ಶುಭ ಸಂದರ್ಭದಲ್ಲಿ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳನ್ನು ಸ್ಮರಿಸಬೇಕಿದೆ. ಸಾಮಾಜಿಕ ಸ್ವಾಸ್ಥ$್ಯ ಕಾಪಾಡಿಕೊಳ್ಳಲು ಯೋಗ ಹಾಗೂ ಆಯುರ್ವೇದದಂಥ ಪಾರಂಪರಿಕ ಚಿಕಿತ್ಸಾ ಪದ್ಧತಿಗಳ ಅನಿವಾರ್ಯತೆ ಇದೆ. ಇಷ್ಟು ದಿನ ದೈಹಿಕ ಬಳಲುವಿಕೆಗಾಗಿ ಮಾತ್ರ ಯೋಗ ಚಿಕಿತ್ಸಕ ಎಂದು ನಂಬಲಾಗಿತ್ತು. ಆದರೆ ಇತ್ತೀಚೆಗೆ ಯೋಗದ ಮಾನಸಿಕ ಹಾಗೂ ಆಧ್ಯಾತ್ಮಿಕ ಲಾಭಗಳ ಮಜಲುಗಳು ಅನಾವರಣಗೊಂಡಿವೆ. ಯೋಗ ಪಾಠಶಾಲೆಯು 50 ವಸಂತಗಳನ್ನು ಪೂರೈಸಿರುವುದು ಸಂತಸದ ಸಂಗತಿ ಎಮದರು
ಯೋಗ ದೀಪ್ತಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ, ಯೋಗ ಈ ದೇಶದ ಆಸ್ತಿಯಾಗಿದೆ. ಈ ಹಿಂದೆ ಭಾರತಕ್ಕೆ ಸೀಮಿತವಾಗಿದ್ದ ಯೋಗವು ಇಂದು ಪ್ರಧಾನಿಗಳ ವಿಶೇಷ ಆಸಕ್ತಿಯಿಂದ ವಿಶ್ವಮಾನ್ಯತೆ ಪಡೆದುಕೊಂಡಿದೆ. ಇಂದಿನ ದಿನಗಳಲ್ಲಿ ಎಲ್ಲರೂ ಒತ್ತಡದಲ್ಲಿ ಬದುಕುವ ವಿಷಮ ಪರಿಸ್ಥಿತಿ ನಿರ್ಮಾಣವಾಗಿದ್ದು, ದಿನನಿತ್ಯ ಕನಿಷ್ಠ ಅರ್ಧಗಂಟೆ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯಭಾಗ್ಯ ವೃದ್ಧಿಸಿಕೊಳ್ಳಬಹುದು ಎಂದರು.
ಆನೆಗುಂದಿ ಸಂಸ್ಥಾನದ ವಿಜಯನಗರ ಸಾಮ್ರಾಜ್ಯದ ಅರವೀಡು ರಾಜವಂಶಸ್ಥ ರಾಜಾ ಶ್ರೀ ಕೃಷ್ಣದೇವರಾಯರು ಮಾತನಾಡಿ, ತೋಂಟದಾರ್ಯ ಮಠವು ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯವಾಗಿದೆ. ಅದರ ಅಂಗವಾದ ಈ ಯೋಗಪಾಠಶಾಲೆಯು ಸುವರ್ಣಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಭಾರತದ ಅಮೂಲ್ಯ ಪರಂಪರೆಯ ಕೊಂಡಿಯಾಗಿರುವ ಯೋಗವನ್ನು ಉಳಿಸಿ&ಬೆಳೆಸುವ ಹೊಣೆ ನಮ್ಮೆಲ್ಲರದ್ದಾಗಿದೆ ಎಂದರು.
ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ನರರೋಗ ತ ಡಾ. ಸಂತೋಷ ಎನ್.ಎಸ್ ಯೋಗ ಹಾಗೂ ಧ್ಯಾನದ ಕುರಿತು ವಿಶೇಷ ಉಪನ್ಯಾಸ ನೀಡಿ, ಇತ್ತೀಚೆಗೆ ಯುವಜನರಲ್ಲಿ ಜೀವನ ಶೈಲಿ ರೋಗಗಳು ಸಾಮಾನ್ಯವಾಗಿವೆ. ಯೋಗ&ಧ್ಯಾನದಿಂದ ಇಂಥ ಉಪದ್ರವಗಳನ್ನು ನಿವಾರಿಸಬಹುದು. ಭಗವದ್ಗೀತೆಯಲ್ಲೂ ಯೋಗದ ಉಲ್ಲೇಖವಿದ್ದು, ಮನಸ್ಸಿನ ದುಗುಡಗಳು ತಲ್ಲಣಗಳನ್ನು ನಿವಾರಿಸಿ ನೆಮ್ಮದಿಯುತ ಜೀವನ ನಡೆಸಲು ಯೋಗ ಧ್ಯಾನಗಳು ದಿವ್ಯ ಔಷಧಗಳಾಗಿವೆ ಎಂದರು.
ಹುಬ್ಬಳ್ಳಿ ಕೆಎಲ್ಇ ತಾಂತ್ರಿಕ ಮಹಾವಿದ್ಯಾಲಯದ ಎಕ್ಸಿಕ್ಯೂಟಿವ್ ಡೀನ್ ಪ್ರೋ. ಬಿ.ಎಲ್ ದೇಸಾಯಿ ಮಾತನಾಡಿದರು. ಡಾ.ತೋಂಟದ ಸಿದ್ಧರಾಮ ಶ್ರೀಗಳು ಸಾನಿಧ್ಯ ವಹಿಸಿದ್ದರು. ಸಂಡೂರಿನ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು, ಎಸ್. ಎಸ್. ಪಟ್ಟಣಶೆಟ್ಟರ, ವಿವೇಕಾನಂದಗೌಡ ಪಾಟೀಲ, ಕೆ. ಎಸ್. ಪಲ್ಲೇದ, ಡಾ. ಮಲ್ಲಿಕಾರ್ಜುನ ಐಹೊಳಿ, ಎಂ. ಎಸ್. ಶಿರಿಯಣ್ಣವರ, ಡಾ. ವಿ. ಎಂ. ಮುಂದಿನಮನಿ, ಐ. ಬಿ. ಕೊಟ್ಟರಶೆಟ್ಟರ ಹಲವರು ಇದ್ದರು.