ಗದಗ: ಗದಗ ಜಿಲ್ಲೆಯ ರೋಣ ತಾಲೂಕಿನ ಮುಗಳಿ ಗ್ರಾಮದಲ್ಲಿ ರೈತರಾದ ದೇವಪ್ಪ ರಂಗಪ್ಪ ಕಾಶಪ್ಪನವರ ಇವರ ಹೊಲದಲ್ಲಿ ಸಂಭ್ರಮದಿಂದ ಎಳ್ಳು ಅಮಾವಾಸ್ಯೆಯನ್ನು ಭೂ ತಾಯಿಗೆ ಚರಗ ಚೆಲ್ಲುವ ಮೂಲಕ ಆಚರಿಸಲಾಯಿತು. ವರ್ಷಾನುಗಟ್ಟಲೇ ದುಡಿದ ದೇಹಗಳು (ಭೂಮಿ, ರಾಸುಗಳು) ಇಂದು ಸಂಭ್ರಮಿಸುವ ದಿನ. ಅನ್ನ ನೀಡುವ ಭೂ ತಾಯಿಗೆ ಸೀಮಂತ ಮಾಡಿ ಉಣ ಬಡಿಸುವ ಸಂತಸದ ದಿನ. ಗದಗ ಜಿಲ್ಲೆಯ ಎಲ್ಲ ರೈತರು ಈ ಸಂಭ್ರಮ ಆಚರಿಸಿದ್ದಾರೆ.
ನಮ್ಮ ರೈತರಿಗೆ ಎಳ್ಳು ಅಮಾವಾಸ್ಯೆ ಬಂದರೆ ಸಾಕು ಹಬ್ಬದ ಸಡಗರ ಮಾತ್ರ ಕಡಿಮೆಯಾಗಿಲ್ಲ.
ರೈತರು ಎತ್ತುಗಳಿಗೆ ಅಲಂಕರಿಸಿ ಚಕ್ಕಡಿ ಹೂಡಿದುಕೊಂಡು ಸಾಲು ಸಾಲಾಗಿ ಹೊರಟ್ಟಿದ್ದ ಬಗೆ ಕಣ್ಣಿಗೆ ಹಬ್ಬವನ್ನುಂಟು ಮಾಡುವಂತಿತ್ತು. ಮನೆಯ ಸಂಬಂಧಿಕರೆಲ್ಲಾ ಬಗೆ ಬಗೆಯ ಅಡುಗೆ ಮಾಡಿಕೊಂಡು ತಮ್ಮ ತಮ್ಮ ಹೊಲಗಳಿಗೆ ಹೋಗುತ್ತಾರೆ. ಬನ್ನಿ ಮರಕ್ಕೆ ಸೀರೆ ತೊಡಿಸಿ ಉಡಿತುಂಬಿ, ಕೈಗೆ ಕಂಕಣ ಕಟ್ಟಿ ಹಾಗೂ ಐದು ಕಲ್ಲುಗಳನಿಟ್ಟು ಪಂಚಪಾಂಡವರೆಂದು ಪೂಜೆ ಮಾಡ್ತಾರೆ. ನೈವೇದ್ಯದ ಮೂಲಕ ಪೂಜೆ ಮಾಡಿ ಹುಲ್ಲಲಿಗೂ... ಚಳಾಂಬ್ರಿಗೋ ಅಂತ ಸಿಹಿತಿನಿಸುಗಳನ್ನು ಸುತ್ತ ಎರಚಿ ಮಳೆ ಬೆಳೆ ಚೆನ್ನಾಗಿ ಆಗಲೆಂದು ಭಕ್ತಿಯಿಂದ ಬೇಡಿಕೊಳ್ಳುತ್ತಾರೆ.
ಎಳ್ಳು ಅಮಾವಾಸ್ಯೆ ಉತ್ತರ ಕರ್ನಾಟಕ ಅದರಲ್ಲೂ ಗದಗ ಜಿಲ್ಲೆಯಲ್ಲಿ ಭೂತಾಯಿಗೆ ಸೀಮಂತ ಕಾರ್ಯಮಾಡಿ ಪೂಜೆಸಲ್ಲಿಸುವ ಮೂಲಕ ಹಬ್ಬ ಆಚರಿಸುತ್ತಾರೆ. ಮುಂಗಾರು ಫಸಲು ಬಂದಾಗ ಮಳೆ ಅಬ್ಬರವಿರುತ್ತೆ. ಭೂ ತಾಯಿಯನ್ನು ಪೂಜೆ ಮಾಡಲಾಗುವುದಿಲ್ಲ. ಹಾಗಾಗಿ ಹಿಂಗಾರು ಸಂದರ್ಭದಲ್ಲಿ ಎಳ್ಳು ಅಮಾವಾಸ್ಯೆ ವೇಳೆ ಭೂತಾಯಿಗೆ ಸೀಮಂತ ಮಾಡಲಾಗುತ್ತೆ. ದೂರದ ಊರಿನ ಸಂಬಂಧಿಕರನ್ನು ಈ ಹಬ್ಬಕ್ಕೆ ಕರೆಯುತ್ತಾರೆ. ಈ ಹಬ್ಬಕ್ಕೆ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಎಳ್ಳು ಹೋಳಿಗೆ, ಸೇಂಗಾ ಹೋಳಿಗೆ, ಕರಿಗಡಬು, ಕರ್ಚಿಕಾಯಿ, ಬಜ್ಜಿ, ವಿವಿಧ ಬಗೆಯ ಚಟ್ನಿ ತಂದು ಎಲ್ಲರು ಒಟ್ಟಿಗೆ ಪೂಜೆಮಾಡಿ ಒಟ್ಟಿಗೆ ಊಟಮಾಡಿ ಸಂಭ್ರಮಿಸುತ್ತಿದ್ದಾರೆ ರೈತ ಮಹಿಳೆಯರು.
ಹಬ್ಬಕ್ಕೆ ಶತಮಾನಗಳ ಇತಿಹಾಸವಿದೆ. ವರ್ಷಾನುಗಟ್ಟಲೇ ಸಮಸ್ಯೆಗಳ ಸರಮಾಲೆಯಲ್ಲಿ ಬಳಲಿದ ರೈತ ಇವತ್ತು ಅದನ್ನು ಮರೆತು ಸಂತಸದ ಕ್ಷಣಗಳನ್ನು ಅನುಭವಿಸಿದರು. ರೈತರನ್ನು ಸದಾ ಕಾಪಾಡುವ ಭೂ ತಾಯಿಗೆ ನಮಿಸಿ ಪುನಿತರಾದರು. ಒಕ್ಕುವ ರೈತ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲಾ ಎನ್ನುವ ಮಾತು ನಿಜಕ್ಕೂ ಸತ್ಯ.