ಗದಗ ಬೆಟಗೇರಿ ಅವಳಿ ನಗರದ ಸಮರ್ಪಕ ನೀರಿನ ಪೂರೈಕೆಗೆ ಆದ್ಯತೆ ಇರಲಿ: ಸಚಿವ ಎಚ್ ಕೆ ಪಾಟೀಲ

20250728_184221
Published on
*ಪ್ರತಿ ಮೂರು ದಿನಕ್ಕೊಮ್ಮೆ ನೀರು ಪೂರೈಕೆಗೆ ಸೂಚನೆ*
ಗದಗ: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ಸಮರ್ಪಕ ನೀರು ಪೂರೈಕೆಗೆ ಆದ್ಯತೆ ವಹಿಸಬೇಕು. ಅಲ್ಲದೇ ಪ್ರತಿ ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ ಅವರು ಸೂಚನೆ ನೀಡಿದರು.
ಗದಗ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸೋಮವಾರದಂದು ಗದಗ ಬೆಟಗೇರಿ ಅವಳಿ ನಗರಕ್ಕೆ ನೀರು ಸರಬರಾಜು ಕುರಿತಂತೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಸೂಕ್ತ ನಿರ್ದೇಶನ ನೀಡಿದರು.
ಅಗತ್ಯ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ನೀರು ಸರಬರಾಜು ಮಾಡಲು ಪ್ರಥಮಾದ್ಯತೆ ನೀಡಬೇಕು. ವಿನಾಕಾರಣ ನೀರಿನ ಅಪವ್ಯಯವನ್ನು ತಡೆದು ಅಗತ್ಯವಿರುವಲ್ಲಿ ನೀರು ಪೂರೈಕೆ ಮಾಡಲು ಅಧಿಕಾರಿ ವರ್ಗ ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿ ದಿನ ರಾತ್ರಿ ನದಿಯಿಂದ ಜಾಕ್ವೆಲ್ ಮೂಲಕ ನೀರನ್ನು ಟ್ಯಾಂಕುನಲ್ಲಿ ಸಂಗ್ರಹಿಸಿ, ಮುಂಜಾನೆ ವಾರ್ಡ್ ವಾರು ನೀರು ಪೂರೈಕೆಗೆ ವಾಲ್ ಮನ್ ಗಳು ಮುಂದಾಗಬೇಕು.
ನಗರಸಭೆಯಿಂದ ಸದ್ಯ ಕಾರ್ಯನಿರ್ವಹಿಸುತ್ತಿರುವ ವಾಲ್ಮಾನ್ ಗಳು ಸೂಪರ್ವೈಸರ್ಗಳನ್ನು ಬದಲಾವಣೆ ಮಾಡಬೇಕು. ಅವರಿಗೆ ಪ್ರತ್ಯೇಕ ಬೀದಿ, ವಾರ್ಡ್ ಗಳ ಮರುಹಂಚಿಕೆ ಮಾಡಿ ಸಮರ್ಪಕ ನೀರು ಪೂರೈಕೆಗೆ ಇರುವ ಕ್ರಮ ಕೈಗೊಳ್ಳಬೇಕು, ಈ ಬಗ್ಗೆ ನಗರಸಭೆ ಪೌರಾಯುಕ್ತರು ಮುಂದಾಗಬೇಕು ಎಂದು ಸಚಿವರು ಸೂಚನೆ ನೀಡಿದರು.
ನಾವೆಲ್ಲರೂ ನೀರು ಪೂರೈಕೆ ಮಾಡುವ ವಾಲ್ಮೆನ್ ಮೇಲೆ ವಿಶ್ವಾಸವಿಟ್ಟು ಗಮನಿಸೋಣ, ಮುಂದಿನ 100 ದಿವಸದೊಳಗೆ ಸಮರ್ಪಕ ನೀರಿನ ವ್ಯವಸ್ಥೆ ಆಗುವಂತೆ ಅವರು ಕಾರ್ಯನಿರ್ವಹಿಸುವ ವಿಶ್ವಾಸವಿದೆಯೆಂದು ಹೇಳಿದರು. ನೀರು ಪೂರೈಕೆ ಕುರಿತಂತೆ ನವಂಬರ್ 1 ರಂದು ಮತ್ತೆ ನಾವೆಲ್ಲರೂ ಸೇರೋಣ, ಆಗ ನೀರಿನ ಸಮಸ್ಯೆ ಪೂರೈಕೆ ಸಂಪೂರ್ಣ ನಿವಾರಣೆಯಾಗಿರಬೇಕು ಎಂದರು.
ಅವಳಿ ನಗರಕ್ಕೆ ನೀರು ಪೂರೈಕೆಗಾಗಿಯೇ ಪ್ರತ್ಯೇಕ ಒಬ್ಬ ಇಂಜಿನಿಯರ್ ನೇಮಕ ಮಾಡಿ ನೀರು ಪೂರೈಕೆ ಸರಳೀಕರಣಗೊಳಿಸುವಂತೆ, ಅಲ್ಲದೆ ಪೈಪ್, ವಾಲ್ ನಿಂದ ಪೋಲಾಗುವ ನೀರನ್ನು ತಡೆಯಲು ಶೀಘ್ರ ದುರಸ್ತಿ ಕೈಗೊಳ್ಳಲು ಸಚಿವ ಹೆಚ್ ಕೆ ಪಾಟೀಲ ಸೂಚಿಸಿದರು.
ಅವಳಿ ನಗರಕ್ಕೆ ನೀರು ಪೂರೈಕೆ ಕುರಿತಂತೆ ನಗರಸಭೆ ಪೌರಾಯುಕ್ತರು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಸಮರ್ಪಕ ನೀರು ಪೂರೈಕೆ ಆಗುತ್ತಿರುವ ಬಗ್ಗೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಮೇಲುಸ್ತುವಾರಿ ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದರು.
ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ್ ಮಾತನಾಡಿ ಮೊದಲು ದಿಬ್ಬದಲ್ಲಿರುವ ಮನೆಗಳಿಗೆ ನೀರಿನ ಪೂರೈಕೆ ಮಾಡಬೇಕು ನಂತರದಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ಪೂರೈಕೆ ಆಗುವಂತೆ ನಿಗ ವಹಿಸಬೇಕು ಎಂದು ಹೇಳಿದರು.
ಈ ವೇಳೆ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಜಿ, ಪ್ರಭು ಬುರುಬುರೆ, ಸಿದ್ದು ಪಾಟೀಲ, ಅಶೋಕ ಮಂದಾಲಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ಅಧಿಕಾರಿ ರೋಹನ್ ಜಗದೀಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸವನಗೌಡ, ನಗರಸಭೆ ಪೌರಾಯುಕ್ತ ರಾಜಾರಾಮ್ ಪವಾರ್ ಸೇರಿದಂತೆ ನಗರಸಭೆಯ ಅಧಿಕಾರಿಗಳು, ವಾಲ್ಮಾನ್ ಗಳು ಸೂಪರ್ ವೈಸರ್ ಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net