ಗದಗ ನಗರದಲ್ಲಿ "ಒಂದು ನೀರಿನ ಕಥೆ'

IMG-20250506-WA0024
Published on

ಅಲ್ಲಿ ನೀರಿದೆ! ಆದ್ರೂ ಇಲ್ಲಿ ಟ್ಯಾಂಕರ್​ ಪೂರೈಕೆ ಆಗ್ತಿದೆ.

ಶಿವಾನಂದ ಹಿರೇಮಠ, ಗದಗ

ಅಲ್ಲಿ ನೀರಿದೆ, ಆದ್ರೂ, ನಗರದಲ್ಲಿ ಟ್ಯಾಂಕರ್​ ಮೂಲಕ ನೀರು ಪೂರೈಕೆ ಆಗುತ್ತಿದೆ. ಅಲ್ಲಿ ಪೈಪ್​ಲೈನ್​ ಮೂಲಕ ನೀರು ಪೂರೈಸಲಾಗುತ್ತಿದೆ. ಆದ್ರೆ, ಇಲ್ಲಿ ಅವೈಜ್ಞಾನಿಕವಾಗಿ ಪೈಪ್​ಲೈನ್​ ಅಳವಡಿಸದ ಹಿನ್ನೆಲೆ ಮಧ್ಯದಲ್ಲೆ ಪೈಪ್​ ಮೇಲಿಂದ ಮೇಲೆ ಒಡೆದು ರಸ್ತೆ ಮಧ್ಯದಲ್ಲೇ ನೀರು ನದಿಯಂತೆ ಹರಿದು ಪೋಲಾಗುತ್ತಿದೆ. ಅಲ್ಲಿ ವಾಲ್​ ರಿಪೇರಿ, ಇಲ್ಲಿ ಪೈಪಲೈನ್​ ರಿಪೇರಿ, ಅಲ್ಲಿ ಕರೆಂಟ್​ ಇಲ್ಲ. ಇಲ್ಲಿ ಕರೆಮಟ್​ ಇಲ್ಲದೇ ಪಂಪ್​ ವರ್ಕ ಆಗುತ್ತಿಲ್ಲ. ಅಯ್ಯಯ್ಯೋ ಅಲ್ಲಿ ಆ ಸಮಸ್ಯೆ, ಇಲ್ಲಿ ಈ ಸಮಸ್ಯೆ... ಇದು ಗದಗ ನೀರಿನ ಕಥೆ ವ್ಯತೆ. ಜನ ಮಾನಸದಲ್ಲಿ ನೆಲೆನಿಂತ "ಒಂದು ಮುತ್ತಿನ ಕಥೆ' ಚಲನಚಿತ್ರದಂತೆ ಗದಗ ನಗರದಲ್ಲಿ ನೀರಿನ ಸಮಸ್ಯೆ ಜನ ಮಾನಸದಲ್ಲಿ ಅಚ್ಚಳಿಯದೇ ಉಳಿಯುವಂತೆ ಕಾಣುತ್ತಿದೆ. ನಗರದ ನೀರಿನ ಸಮಸ್ಯೆ ಎಂಬುದು ಇತಿಹಾಸ ಪುಟದಲ್ಲಿ ಸೇರದೇ ಸಮಸ್ಯೆ ಎಂದಿದ್ದರೂ ವರ್ತಮಾನವೇ ಎಂಬಂತೆ ಭಾಸವಾಗುತ್ತಿದೆ.

ಅಲ್ಲಿ ನೀರಿದೆ. ಆದರೆ?

ಮುಂಡರಗಿ ಬಳಿ ತುಂಗಬಧ್ರ ನದಿಗೆ ಅಡ್ಡಲಾಗಿ ನಿಮಿರ್ಸಿದ ಹಮ್ಮಗಿ ಬ್ಯಾರೇಜ್​ ನಲ್ಲಿ ನೀರು ತುಂಬಿ ತುಳುಕುತ್ತಿದ್ದರೂ ಸಹ ಗದಗ ನಗರದಲ್ಲಿ ಟ್ಯಾಂಕರ್​ ಮೂಲಕ ನಗರಸಭೆ ನೀರು ಪೂರೈಸುತ್ತಿದೆ. ಈ ನಡೆ ಅನುಮಾನಕ್ಕೆ ಕಾರಣವಾಗಿದೆ. 3.17 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿರುವ ಹಮ್ಮಿಗಿ ಬ್ಯಾರೇಜ್​ನಲ್ಲಿ ಪ್ರಸ್ತುತ 2.5 ಟಿಎಂಸಿ ನೀರಿದೆ. ಮಳೆಗಾಲದ ವರೆಗೂ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆಯೇ ಉದ್ಭವಿಸುವುದಿಲ್ಲ. ಆದರೆ, ನಗರಸಭೆ ಇಚ್ಚಾಶಕ್ತಿ ಕಾರಣದಿಂದ ಗದಗ ನಗರದ ಜನತೆ ಇನ್ನೂ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮೂಲಗಳ ಪ್ರಕಾರ ಪಾಪನಾಶಿ ಮತ್ತು ಗದಗ ನಗರದಲ್ಲಿ ಯಾವುದಾರು ಒಂದು ಸ್ಥಳದಲ್ಲಿ ವಿದ್ಯುತ್​ ಅಭಾವ ಎದುರಾದರೆ ನೀರು ಪೂರೈಸಲು ಸಾಧ್ಯವಿಲ್ಲ ಎಂದು ನಗರಸಭೆ ಮೂಲಗಳ ಹೇಳುತ್ತಿವೆ. ಒಂದೊಮ್ಮೆ ವಿದ್ಯುತ್​ ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ಮತ್ತೇ ನೀರು ಗದಗ ನಗರಕ್ಕೆ ತಲುಪಲು 3 ಗಂಟೆ ವಿಳಂಬವಾಗುತ್ತಿದೆ. ಹಾಗಾಗಿ ವಿಧಿಯಿಲ್ಲದೇ ನೀರಿದ್ದರೂ ಟ್ಯಾಂಕರ್​ ಮೂಲಕ ನೀರು ಪೂರೈಸುವ ಸನ್ನಿವೇಶ ಸೃಷ್ಟಿ ಆಗಿದೆ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಿದ್ದಾರೆ. ಇತ್ತೀಚಿನ ಕೆಲ ವಾರಗಳಿಂದ ನಗರದಲ್ಲಿ ನೀರಿನ ಹಾಹಾಕಾರ ಶುರುವಾಗಿದೆ. ಕೆಲವಡೆ ವಾರಕ್ಕೊಮ್ಮೆ, ಇನ್ನೂ ಕೆಲವಡೆ 15 ದಿನಗಳಿಗೆ ಒಮ್ಮೆ ನೀರು ಪೂರೈಕೆ ಆಗುತ್ತಿದೆ. ಹಿಂದುಳಿದ ಪ್ರದೇಶಗಳಲ್ಲಿ, ಸ್ಲಂ ಗಳಲ್ಲಿ ವಾಸಿಸುತ್ತಿರುವ ಜನರಿಗೆ ನೀರುನ ಸಮಸ್ಯೆ ಬೆಟ್ಟದಷ್ಟಾಗಿದ್ದು ವಿಪರ್ಯಾಸ.

ಅವೈಜ್ಞಾನಿಕ ಕಾಮಗಾರಿ:

ನಗರದ ನರಸಾಪುರ, ನೇಕಾರ ಕಾಲನಿ ಮತ್ತು ಜನತಾ ಪ್ಲಾಟ್​ಗಳಿಗೆ ನೀರು ಪೂರೈಕೆ ಯೋಜನೆಯೇ ಅವೈಜ್ಞಾನಿಕ ವಾಗಿದ್ದು, ಬೆಟಗೇರಿ ಭಾಗದ ಶಿವರತ್ನ ಪ್ಯಾಲೇಸ್​ ಪಕ್ಕದಲ್ಲಿ ಪೈಪ್​ ಲೈನ್​ ನಿರಂತರವಾಗಿ ಒಡೆಯುತ್ತಿದೆ. ನೀರು ಪೋಲಾಗುತ್ತಿದೆ. ಹೊಸ ಪೈಪ್​ಲೈನ್​ ಅಳವಡಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ನಿರಂತರ ಕುಡಿಯುವ ನೀರಿನ ಯೋಜನೆ ಆರಂಭ ಆದಾಗಿನಿಂದಲೂ ಸಹ ಈ ಸಮಸ್ಯೆ ಇದ್ದರೂ ಸಹ ನಗರಸಭೆ ಮಾತ್ರ ಶಾಶ್ವತ ಪರಿಹಾರ ಮಾರ್ಗ ಕಂಡು ಹಿಡಿಯದ ಕಾರಣ ನೇಕಾರ ಕಾಲನಿ, ಜನತಾ ಪ್ಲಾಟ್​ ಮತ್ತು ನರಸಾಪುರಕ್ಕೆ ನೀರು ಪೂರೈಕೆ ಆಗುತ್ತಿಲ್ಲ.

ನಿರಂತರ ಪೈಪಲೈನ್​ ಒಡೆಯುವುದೇಕೆ?

ಬೆಟಗೇರಿಯ ಚೆನ್ನಮ್ಮ ಉದ್ಯಾನವದಲ್ಲಿ ಇರುವ ಓವರ್​ ಹೆಡ್​ ಟ್ಯಾಂಕ್​ ಮೂಲಕ ನೇಕಾರ ಕಾಲನಿ, ಜನತಾ ಪ್ಲಾಟ್​ ಮತ್ತು ನರಸಾಪುರಕ್ಕೆ ನೀರು ಪೂರೈಸಬೇಕು. ಆದರೆ ಭೌಗೋಳಿವಾಗಿ ಓವರ್​ ಹೆಡ್​ ಟ್ಯಾಂಕ್​ಗಿಂತಲೂ ಎತ್ತರವು ನೇಕಾರ ಕಾಲನಿ, ಜನತಾ ಪ್ಲಾಟ್​ ಮತ್ತು ನರಸಾಪುರ ಎತ್ತರದಲ್ಲಿದೆ. ಟ್ಯಾಂಕ್​ ನಿಂದ ನೀರು ಪೂರೈಕೆ ಆಗುವು ಪ್ರದೇಶವರೆಗೂ ಆರಂಭದಲ್ಲಿ 10 ಇಂಚಿನ ಪೈಪ್​, ನಂತರದಲ್ಲಿ 6 ಇಂಚಿನ ಪೈಪ್​, ತದ ನಂತರದಲ್ಲಿ 8 ಇಂಚಿನ ಪೈಪ್​ಲೈನ್​ಗಳನ್ನು ಅಳವಡಿಸಲಾಗಿದೆ. ಆರಂಭದಲ್ಲಿ 10 ಇಂಚಿನ ಪೈಪ್​ ಮೂಲಕ ರಭಸವಾಗಿ ಸಾಗುವ ನೀರು 6 ಇಂಚಿನ ಪೈಪ್​ ನಲ್ಲಿ ರಭಸವಾಗಿ ಸಾಗಲು ಸ್ಥಳಾವಕಾಶವಿಲ್ಲದೇ ಪೈಪ್​ಲೈನ್​ ಒಡೆದು ನಿರಂತರವಾಗಿ ನೀರು ಪೋಲಾಗುತ್ತಿದೆ. ಗುತ್ತಿಗೆದಾರನ ಅವೈಜ್ಞಾನಿಕ ಕಾಮಗಾರಿಯಿಂದ ಬೆಟಗೇರಿ ಭಾಗದ ಪ್ರಮುಖ ನಗರಗಳಲ್ಲಿಗೆ ನೀರಿದ್ದರೂ ನೀರು ಪೂರೈಕೆ ಅಸಮರ್ಥವಾಗಿದೆ.

ಇಚ್ಚಾಶಕ್ತಿ ಕೊರತೆ:

ಗದಗ ನಗರ ಜನರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಚಿವ ಎಚ್​.ಕೆ. ಪಾಟೀಲ ನಿರಂತರ ಕುಡಿಯುವ ನೀರಿನ ಯೋಜನೆ ಮೂಲಕ ಮುಂಡರಗಿ ತಾಲೂಕಿನ ತುಂಗಭದ್ರ ನದಿಯಿಂದ ಗದಗ ನಗರಕ್ಕೆ ನೀರು ತಂದರು. ಅವರ ಇಚ್ಚಾಶಕ್ತಿಗೆ ಅನುಗುಣವಾಗಿ ಗದಗ ನಗರಸಭೆ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಸಚಿವರಲ್ಲೂ ನಗರಸಭೆ ಅಧಿಕಾರಿಗಳ ಕಾರ್ಯವೈಖರಿ ಮೇಲೆ ಬೇಸರ ಮೂಡಿದೆ.

ಕೋಟ್​:

ಗದಗ ನಗರದಲ್ಲಿ ಅಲ್ಲಲ್ಲಿ ವಾಲ್​ಗಳು ದುರಸ್ಥಿ ಹಂತ ತಲುಪಿವೆ. ಈ ವಾಲ್​ಗಳನ್ನು ಅಳವಡಿಸಿ ನೀರು ಪೋಲಾಗದಂತೆ ತಡೆಯಲಾಗುವುದು. ಜತೆಗೆ ನೀರು ಎತ್ತುವಳಿ ಪ್ರದೇಶದಲ್ಲಿ ವಿದ್ಯುತ್​ ಪೂರೈಕೆ ಅಭಾವ ಆಗದಂತೆ ಗ್ರಿಡ್​ ಮೂಲಕವೇ ನೇರವಾಗಿ ವಿದ್ಯುತ್​ ಪೂರೈಸುವ ಯೋಜನಾ ವರದಿಯನ್ನು ನಗರಸಭೆ ಸಿದ್ಧಪಡಿಸುತ್ತಿದೆ. ನೀರಿದ್ದರೂ ಸಮಪರ್ಕ ನೀರು ಪೂರೈಸಲು ಸಾಧ್ಯವಾಗದ ಸ್ಥಿತಿ ಇರುವುದು ಸತ್ಯ. ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ನಗರಸಭೆ ಯೋಜನೆ ರೂಪಿಸುತ್ತಿದೆ.

ರಾಜಾರಾಮ ಪವಾರ, ನಗರಸಭೆ ಪೌರಾಯುಕ್ತ.

ಕೋಟ್​:

ನಗರಕ್ಕೆ ಸಮರ್ಪಕ 32 ಎಂಎಲ್​ಡಿ ನೀರಿನ ಅವಶ್ಯಕತೆ ಇದೆ. ಆದರೆ ಗದಗ ವರೆಗೂ 12 ರಿಂದ 15 ಎಂಎಲ್​ಡಿ ನೀರು ಮಾತ್ರ ಬರುತ್ತಿದೆ. ಇದರಲ್ಲಿ ಸುಮಾರು 3 ರಿಂದ 4 ಎಂಎಲ್​ಡಿ ನೀರು ಪೈಪ್​ಲೈನ್​ ದುರಸ್ಥಿ ಕಾರಣದಿಂದಲೇ ರಸ್ತೆಗೆ, ಚರಂಡಿಗಳಿಗೆ ಹರಿಯುತ್ತಿದೆ.

 ರವಿಕಾಂತ ಅಂಗಡಿ, ಯುವ ಒಕ್ಕೂಟ ಮಹಾಸಭಾ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net