ಮತದಾನ ಜಾಗೃತಿ: ಬೈಸಿಕಲ್ ಜಾಥಾಗೆ ಚಾಲನೆ

16GDG01
Published on

ಗದಗ: ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್), ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಅಭಿಯಾನವು  “ಬೈಸಿಕಲ್ ಜಾಥಾ “ಮೂಲಕ ಮಂಗಳವಾರ ಜರುಗಿತು.

ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದ ಮುಂಭಾಗ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ. ಸಿಇಒ ಎಸ್. ಭರತ್ ಅವರು ಬೈಸಿಕಲ್ ನಲ್ಲಿ ಸಂಚರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಜಿ.ಪಂ.ಸಿ.ಇ.ಒ ಭರತ್ ಅವರು ಇದೇ ಮೇ 7 ರಂದು ನಡೆಯುವ ಲೋಕಸಭೆ ಚುನಾವಣೆಯ ಮತದಾನದಂದು ಅರ್ಹರೆಲ್ಲರೂ ತಪ್ಪದೇ ಮತ ಚಲಾಯಿಸಿ, ಜಿಲ್ಲೆಯಲ್ಲಿ ಶೇ.100 ರಷ್ಟು  ಮತದಾನಕ್ಕೆ  ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು. 18 ವರ್ಷ ಪೂರ್ಣಗೊಂಡ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ. ಪ್ರಜಾಪ್ರಭುತ್ವ ಬಲಪಡಿಸಲು ಕೈ ಜೋಡಿಸಬೇಕು ಎಂದು ಎಸ್. ಭರತ್ ಅವರು ಕೋರಿದರು. ಬೈಸಿಕಲ್ ಜಾಥಾದಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಬೈಸಿಕಲ್  ಜಾಥಾವು ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭಗೊಂಡು ಪಂಚಾಕ್ಷರಿ ನಗರದ ಶುದ್ಧ ಕುಡಿಯುವ ನೀರಿನ ಘಟಕ, ಚೇತನ ಕ್ಯಾಂಟೀನ್ ಹಾತಲಗೇರಿ ನಾಕಾ ಬಳ್ಳಾರಿ ಗೇಟ್ ಕುರಹಟ್ಟಿ ಪೇಟೆ – ಟೆಂಗಿನಕಾಯಿ ಬಜಾರ-ಜರ್ಮನ್ ಆಸ್ಪತ್ರೆ, ಸಹಸ್ರಾರ್ಜುನ ವೃತ್ತ, ಮಹಾರಾಣ ಪ್ರತಾಪ ಸಿಂಹ ವೃತ್ತ, ಹಳೇ ಕೋರ್ಟ ವೃತ್ತ, ಗಾಂದಿ üವೃತ್ತ, ರೋಟರಿ ವೃತ್ತ, ಭೂಮರಡ್ಡಿ ವೃತ್ತದ ಮೂಲಕ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣಕ್ಕೆ ಬಂದು  ತಲುಪಿತು.

ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವ ಬಲಪಡಿಸಿ, ನಮ್ಮ ಮತ ನಮ್ಮ ಹಕ್ಕು, ಮತದಾರರು ಮತದಾನದಿಂದ ಹೊರಗುಳಿಯಬಾರದು, ಪ್ರತಿಶತ ಮತದಾನ–ಉತ್ತಮ ಸಮಾಜ ನಿರ್ಮಿಸಿ, ಮತದಾನಕ್ಕಿಂತ ಮತ್ತೊಂದಿಲ್ಲ, ಕಡ್ಡಾಯವಾಗಿ ಮತದಾನ ಮಾಡುತ್ತೇವೆ ಎಂಬ ಘೋಷವಾಕ್ಯಗಳು ಮೊಳಗಿದವು.  

ಜಿ.ಪಂ.ಉಪ ಕಾರ್ಯದರ್ಶಿ ಸಿ.ಬಿ.ದೇವರಮನಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶರಣು ಗೋಗೇರಿ, ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು ಇದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net